ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

'ಅಕ್ಕಿಹೊಂಡ ಎಪಿಎಂಸಿ ಸ್ಥಳಾಂತರ ಬೇಡ' (ಸುದ್ದಿ ಸಂಕ್ಷೇಪ)

Mainashree
Updated On : 25 Feb 2013, 10:37 am

ಹುಬ್ಬಳ್ಳಿ: ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಯ ವ್ಯಾಪ್ತಿಯ ಅಕ್ಕಿಹೊಂಡ ಎಪಿಎಂಸಿ ಉಪಮಾರುಕಟ್ಟೆಯನ್ನು ಅಮರಗೋಳ ಮಾರುಕಟ್ಟೆಗೆ ಸ್ಥಳಾಂತರಿಸಬಾರದು ಎಂದು ಎಪಿಎಂಸಿ ವರ್ತಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಸಿಎಂ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು. ಈ ಉಪ ಮಾರುಕಟ್ಟೆಯಿಂದ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಗೆ ಶೇ. 90ರಷ್ಟು ಆದಾಯ ಬರುತ್ತಿದೆ. ಮಾರುಕಟ್ಟೆಯನ್ನು ಅವಲಂಬಿಸಿ ಕೂಲಿ ಮಾಡುತ್ತಿರುವ ಸಾವಿರಾರು ಹಮಾಲಿಗಳು ಮತ್ತು ನೂರಾರು ಕಾರಕೂನರಿಗೆ ಅಕ್ಕಿಹೊಂಡ ಎಪಿಎಂಸಿ ಅವರ ನಿವಾಸಗಳಿಗೆ ಹತ್ತಿರದ ಸ್ಥಳವಾಗಿದೆ. ಉಪ ಮಾರುಕಟ್ಟೆಯನ್ನು ಅಮರಗೋಳಕ್ಕೆ ಸ್ಥಳಾಂತರಿಸಿದಲ್ಲಿ ತೊಂದರೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮಕ್ಕಳಿಗೆ ಸಾಹಿತ್ಯ ಸಂಸ್ಕಾರ ಬೇಕು
ಹುಬ್ಬಳ್ಳಿ: ಮಕ್ಕಳಿಗೆ ಬಾಲ್ಯದಲ್ಲಿಯೇ ಸಾಹಿತ್ಯದ ರುಚಿ ಚಿಗುರಬೇಕು. ಬೀಜಕ್ಕೆ ಮಣ್ಣು, ಗಾಳಿ, ನೀರು, ಬೆಳಕು ಹೇಗೆ ಅಗತ್ಯವೋ ಹಾಗೆ ಮಕ್ಕಳಿಗೆ ಕಥೆ, ಕವಿತೆ, ಸಾಹಿತ್ಯದ ಮೂಲಕ ಸಂಸ್ಕಾರ ನೀಡಬೇಕು ಎಂದು ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಗರದ ಶ್ರೀಮತಿ ಲೀಲಾಬಾಯಿ ಲಕ್ಷ್ಮಣರಾವ್ ಬಡಿಗೇರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಗೊಂದು ಸಾಹಿತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಮಕ್ಕಳು ಕನ್ನಡ ಸಾಹಿತ್ಯ ಪ್ರೀತಿಸುವ ಮೂಲಕ ಉಳಿಸಿ ಬೆಳೆಸಬೇಕು ಎಂದು ನಿಂಗಣ್ಣ ಕುಂಟಿ ಹೇಳಿದರು. ಚಿತ್ರ ನೋಡಿ ಕವನ ಬರೆದು ಆಯ್ಕೆಯಾದ ಭೈರಿದೇವರಕೊಪ್ಪ ಪ್ರೌಢಶಾಲೆಯ ಫಕ್ಕಿರೇಶ, ಸುನೀತಾ, ಸಂತೋಷ, ಕಟ್ಟೀಮನಿ ಪ್ರೌಢಶಾಲೆಯ ಧನ್ಯಾ, ಪೂಜಾ ಹಾಗೂ ಶ್ರೀನಗರ ಪ್ರೌಢಶಾಲೆಯ ಮಂಜುಳಾ, ಸೀಮಾ, ನಾಗನಗೌಡ ತಮ್ಮ ಸ್ವರಚಿತ ಕವನ ವಾಚಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಎಸ್‌ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಎಸ್‌ಡಿಎಂ ಡಾಕ್ಟರ್ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ, ಎಲುವು, ಕೀಲು ಚಿಕಿತ್ಸಾ ವಿಭಾಗದ ಡಾ. ಚಿದೇಂದ್ರ ಶೆಟ್ಟರ್ ಫೆ. 26ರಂದು ಸಂಜೆ 6.50ಕ್ಕೆ ಮೊಣಕಾಲು ಸವೆತಕ್ಕೆ ಚಿಕಿತ್ಸಾ ವಿಧಾನಗಳು ಎಂಬ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ತಮ್ಮ ಪ್ರಶ್ನೆಗಳನ್ನು ದೂರವಾಣಿ ಸಂಖ್ಯೆ 0836-2443414 ಅಥವಾ 2443415 ಅಥವಾ 2443416 ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ನ್ಯಾಯಾಲಯದ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಧಾರವಾಡ: ಇಲ್ಲಿನ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರರು ಹಾಗೂ ನಕಲುಗಾರ-ಬೆರಳಚ್ಚುಗಾರರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಸ್ವ ಹಸ್ತಾಕ್ಷರದಿಂದ ಭರ್ತಿ ಮಾಡಿ, ಸ್ವಯಂ ದೃಢೀಕೃತ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳ ಪ್ರಮಾಣ ಪತ್ರಗಳನ್ನು ಲಗತ್ತಿಸಿದ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ಧಾರವಾಡ ಇವರಿಗೆ ಮಾ. 23ರೊಳಗಾಗಿ ಕಳುಹಿಸಬೇಕು.
ಹೆಚ್ಚಿನ ಮಾಹಿತಿಯನ್ನು ಪ್ರಧಾನ ಜಿಲ್ಲಾ ಮತ್ತು ಅಧೀನ ನ್ಯಾಯಾಲಯ ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
---------

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement