ಗಂಗಜ್ಜಿ ನುಡಿಸಿದ ಪರಿಕರಗಳು ಸರ್ಕಾರಕ್ಕೆ ಸಿಗಲ್ಲ
ಹುಬ್ಬಳ್ಳಿ: ಸ್ವರ ಸಾಮ್ರಾಜ್ಞೆ ಡಾ. ಗಂಗೂಬಾಯಿ ಹಾನಗಲ್ ಅವರು ಬದುಕುಳಿದಿದ್ದರೆ ಬರುವ ಮಾರ್ಚ್ 5 ರಂದು ಜನ್ಮ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದರು. ಇಂಥ ಸಂದರ್ಭದಲ್ಲಿ ಗಂಗೂಬಾಯಿ ವಂಶಸ್ಥರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಗಂಗೂಬಾಯಿ ಹಾನಗಲ್ ಅವರಿಗೆ ಬಂದಿರುವ ಪ್ರಶಸ್ತಿ ಹಾಗೂ ಅವರು ನುಡಿಸಿದ ವಾದ್ಯ ಪರಿಕರಗಳನ್ನು ಯಾವುದೇ ಕಾರಣಕ್ಕೂ ಸರ್ಕಾರ ಭವಿಷ್ಯದಲ್ಲಿ ನಿರ್ಮಿಸಲಿರುವ ಮ್ಯೂಸಿಯಂಗೆ ಹಸ್ತಾಂತರಿಸದಿರಲು ನಿರ್ಧರಿಸಿದ್ದಾರೆ.
ಡಾ. ಗಂಗೂಬಾಯಿಯವರು ಬಳಸಿರುವ ವಾದ್ಯ ಪರಿಕರಗಳು, ಪ್ರಶಸ್ತಿಗಳು ಸುರಕ್ಷಿತವಾಗಿರಬೇಕು. ಇದರಿಂದಾಗಿ ಗಂಗೂಬಾಯಿಯವರ ನೆನಪು ಚಿರಸ್ಥಾಯಿಯಾಗಲಿದೆ. ಸಂಗೀತಾಸಕ್ತರಿಗೆ ಪ್ರೇರಣೆ ಸಿಗಲಿದೆ ಎಂಬ ಉದ್ದೇಶದಿಂದ ಗಂಗಜ್ಜಿ ವಂಶಸ್ಥರು ಸರ್ಕಾರಕ್ಕೆ ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಯಂ ನಿರ್ಮಿಸಬೇಕು ಎಂದು ಕೋರಿದ್ದರು. ಆದರೆ ಸರ್ಕಾರ ತೋರುತ್ತಿರುವ ನಕಾರಾತ್ಮಕ ಧೋರಣೆಯಿಂದಾಗಿ ಬೇಸತ್ತಿರುವ ಗಂಗಜ್ಜಿ ವಂಶಸ್ಥರು ಮ್ಯೂಸಿಯಂಗೆ ಗಂಗಜ್ಜಿಯ ಪ್ರಶಸ್ತಿ, ವಾದ್ಯ ಪರಿಕರಗಳನ್ನು ನೀಡದಿರಲು ನಿರ್ಧರಿಸಿದ್ದಾರೆ.
ಮನೆಯಲ್ಲಿವೆ ಪ್ರಶಸ್ತಿಗಳು: ಗಂಗಜ್ಜಿ ವಾಸವಾಗಿದ್ದ ಮನೆಯಲ್ಲಿಯೇ ಅವರ ಮೊಮ್ಮಗ ಮನೋಜ ಹಾನಗಲ್ ಪ್ರಶಸ್ತಿ, ವಾದ್ಯ ಪರಿಕರ ಇತ್ಯಾದಿಗಳನ್ನು ಜೋಪಾನವಾಗಿರಿಸಿದ್ದಾರೆ. ಈ ಕಾರ್ಯಕ್ಕೆ ಸುಮಾರು 10 ಲಕ್ಷ ಖರ್ಚು ಮಾಡಿದ್ದಾರೆ. ಮನೆಯಲ್ಲಿ ಗಂಗಜ್ಜಿಗೆ ಬಂದಿರುವ ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ 54 ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪ್ರಶಸ್ತಿ, ಬೆಲೆ ಕಟ್ಟಲಾಗದ 150ಕ್ಕೂ ಹೆಚ್ಚು ಗಂಧದ ಹಾಗೂ ಲೋಹದ ಮೂರ್ತಿಗಳು, ವಿಶೇಷವಾಗಿ ಗಂಗಜ್ಜಿ ನುಡಿಸುತ್ತಿದ್ದ ತಂಬೂರಿ ಸೇರಿದಂತೆ 120 ಬಗೆಯ ನಾನಾ ಸಂಗೀತ ವಾದ್ಯ ಪರಿಕರಗಳು, ಸಾವಿರಕ್ಕೂ ಹೆಚ್ಚು ಸವಿ ನೆನಪಿನ ಕಾಣಿಕೆಗಳು, 60ಕ್ಕೂ ಹೆಚ್ಚು ಗಂಗಜ್ಜಿಯ ಭಾವಚಿತ್ರಗಳು, ದೇಶದ ಮಹಾನ್ ಸಂಗೀತಗಾರರ 300 ಭಾವಚಿತ್ರಗಳು, ಕಾಣಿಕೆ ನೀಡಿದ್ದ 200 ರೇಷ್ಮೆ ಸೀರೆಗಳಿವೆ. ಈ ಎಲ್ಲವೂ ಮ್ಯೂಸಿಯಂನಲ್ಲಿದ್ದರೆ ಚೆನ್ನ ಎನ್ನುವ ಇರಾದೆ ವಂಶಸ್ಥರದ್ದಾಗಿತ್ತು.
ಈ ಕಾರಣಕ್ಕೆ ಸುಮಾರು 4 ಸಾವಿರ ಚದರ ಅಡಿ ಜಾಗದಲ್ಲಿ ಮ್ಯೂಸಿಯಂ ಅನ್ನು ಪ್ರಸ್ತುತ ಡಾ. ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿಯೇ ನಿರ್ಮಿಸಿದರೆ ಒಳಿತು ಎಂಬ ಆಶಯ ವ್ಯಕ್ತಪಡಿಸಿದ್ದರು. ಎಂ. ಎಸ್. ಶ್ರೀಕರ ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಕಾಲದಲ್ಲಿ, ತದನಂತರ ದಪರ್ಣ ಜೈನ್ ಜಿಲ್ಲಾಧಿಕಾರಿಯಾಗಿದ್ದಾಗಲೂ ಜಿಲ್ಲಾಡಳಿತಕ್ಕೆ ಪತ್ರ ಬರೆದು ಪ್ರಶಸ್ತಿ, ಪರಿಕರಗಳನ್ನು ನೀಡುವುದಾಗಿ ತಿಳಿಸಿದ್ದರು. ಸಾಲದ್ದಕ್ಕೆ ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಗದೀಶ ಶೆಟ್ಟರ್ ಸಹ ಮ್ಯೂಸಿಯಂ ನಿರ್ಮಾಣಕ್ಕೆ ಸರ್ಕಾರ ಮುಂದಾಗಲಿದೆ ಎಂದು ಹೇಳಿದ್ದರು. ಆದರೆ ಮ್ಯೂಸಿಯಂ ನಿರ್ಮಿಸಲು ಸರ್ಕಾರ ತೋರುತ್ತಿರುವ ನಕಾರಾತ್ಮಕ ಧೋರಣೆಯಿಂದಾಗಿ ಬೇಸತ್ತಿರುವ ಗಂಗಜ್ಜಿ ವಂಶಸ್ಥರು ಈಗ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಸಾಲದ್ದಕ್ಕೆ ಸರ್ಕಾರ ಗಂಗಜ್ಜಿಯ ಸ್ಮರಣಾರ್ಥ ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ನಿರ್ಧಾರಕ್ಕೂ ಬಂದಿದ್ದಾರೆ.
-ಪ್ರಕಾಶ ಎಸ್. ಶೇಟ್