ಶ್ರೀಬಾಲಾಜಿ ಆಸ್ಪತ್ರೆ ವೈದ್ಯರಿಂದಪಾರ್ಶ್ವವಾಯು ತಡೆಗಟ್ಟುವ ಚಿಕಿತ್ಸೆ
ಹುಬ್ಬಳ್ಳಿ: ನರರೋಗ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ವಿರಳ ಎನ್ನಬಹುದಾದ 'ಸ್ಟ್ರೋಕ್' ಪ್ರಿವೆನ್ಶನ್ ಸರ್ಜರಿ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಶ್ರೀ ಬಾಲಾಜಿ ನ್ಯೂರೋ ಸೈನ್ಸ್ ಆ್ಯಂಡ್ ಟ್ರೋಮಾ ಸೆಂಟರ್‌ನ ವೈದ್ಯರ ತಂಡ ಯಶಸ್ವಿಯಾಗಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸೆಂಟರ್‌ನ ಚೇರಮನ್‌ರೂ ಆಗಿರುವ ನರರೋಗ ತಜ್ಞ ಡಾ. ಕ್ರಾಂತಿಕಿರಣ, ಜೀವನ ರಕ್ಷೆಯ ಶಸ್ತ್ರಚಿಕಿತ್ಸೆ ಎಂದು ಕರೆಯಲ್ಪಡುವ ಸ್ಟ್ರೋಕ್ ಪ್ರಿವೆನ್ಶನ್ ಸರ್ಜರಿಯನ್ನು ಸತತ ಮೂರೂವರೆ ತಾಸು ನಡೆಸುವ ಮೂಲಕ 65 ವರ್ಷದ ಮಹಿಳೆಗೆ ಮರು ಜೀವ ನೀಡಲಾಗಿದೆ ಎಂದಿದ್ದಾರೆ. ಗದಗ ಮೂಲದ ಶೀಲಾಬಾಯಿ ಜೋಶಿ ಎಂಬುವರೇ ಈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಜೋಶಿ, ಮೂರ್ನಾಲ್ಕು ತಿಂಗಳುಗಳ ಹಿಂದೆ ಬಲಗಾಲು ಹಾಗೂ ಬಲಗೈಯಲ್ಲಿ ಶಕ್ತಿ ಕಳೆದುಕೊಂಡಂತಾಗಿ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ನಂತರ ಮತ್ತೆ ತೊಂದರೆ ಕಾಣಿಸಿಕೊಳ್ಳಲಾರಂಭಿಸಿದಾಗ ಶ್ರೀ ಬಾಲಾಜಿ ನ್ಯೂರೋ ಸೈನ್ಸ್ ಆ್ಯಂಡ್ ಟ್ರೋಮಾ ಸೆಂಟರ್‌ಗೆ ಆಗಮಿಸಿದ್ದರು.
ಈ ಸಂದರ್ಭ ಜೋಶಿಯವರ ಮೆದುಳಿನ ಎಂಆರ್‌ಐ ಸ್ಕ್ಯಾನ್ ಹಾಗೂ ಕುತ್ತಿಗೆ ಎಡಭಾಗದ ರಕ್ತನಾಳದ ಎನ್‌ಜಿಯೋ ಗ್ರಾಮ್ ಪರೀಕ್ಷೆ ಮಾಡಿಸಿದಾಗ, ಕುತ್ತಿಗೆ ಎಡಭಾಗದ ರಕ್ತನಾಳದಿಂದ ಮೆದುಳಿಗೆ ರಕ್ತ ಪೂರೈಕೆಯಾಗುವ ರಕ್ತನಾಳ ಶೇ. 90ರಷ್ಟು ಬ್ಲಾಕ್ ಆಗಿರುವುದು ದೃಢಪಟ್ಟಿತು.
ಇಂತಹ ಸಂದರ್ಭ ರೋಗಿಗೆ ಪಾರ್ಶ್ವವಾಯು ಹೊಡೆಯುವ, ಪ್ರಜ್ಞೆ ಕಳೆದುಕೊಳ್ಳುವ ಹಾಗೂ ಕೆಲವಷ್ಟು ಸಂದರ್ಭಗಳಲ್ಲಂತೂ ಪ್ರಾಣಕ್ಕೆ ಎರವಾಗುವ ಸಾಧ್ಯತೆ ತೀರಾ ಹೆಚ್ಚಾಗಿರುತ್ತದೆ ಎಂದು ಡಾ. ಕ್ರಾಂತಿಕಿರಣ ತಿಳಿಸಿದ್ದಾರೆ.
ಈ ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಯನ್ನು ಮೊದಲು ರಕ್ತನಾಳದ ಪಕ್ಕದಲ್ಲಿ ಬೈಪಾಸ್ ಸರ್ಜರಿಯ ಮೂಲಕ ಮೆದುಳಿಗೆ ರಕ್ತ ಪೂರೈಕೆಯಾಗುವಂತೆ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ನಂತರ ರಕ್ತನಾಳದ ಬ್ಲಾಕ್ ಸರಿಪಡಿಸಲಾಗುತ್ತಿದ್ದು, ಇದು ತುಂಬಾ ಕಷ್ಟಕರ ಶಸ್ತ್ರ ಚಿಕಿತ್ಸೆಗಳಲ್ಲಿ ಒಂದಾಗಿದೆ ಎಂದಿದ್ದಾರೆ.
ಡಾ. ಕ್ರಾಂತಿಕಿರಣ, ಡಾ. ಶಿವಪ್ಪ, ಡಾ. ವಿಜಯ ಯಲಿವಾಳ ಹಾಗೂ ಡಾ. ಶೀತಲ್ ನೇತೃತ್ವದ ತಂಡ ಈ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಪ್ರಕಟಣೆ ತಿಳಿಸಿದೆ.