ಎಚ್ಚರಾವಸ್ಥೆಯಲ್ಲಿ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಸಾಧನೆ
ಧಾರವಾಡ: ಇಲ್ಲಿನ ಎಸ್‌ಡಿಎಂ ಆಸ್ಪತ್ರೆ ವೈದ್ಯರು ಆಧುನಿಕ ಸಲಕರಣೆ ಬಳಸುವ ಮೂಲಕ ಮೆದುಳಿನಲ್ಲಿನ ಗಡ್ಡೆಯನ್ನು ರೋಗಿಯ ಎಚ್ಚರಾವಸ್ಥೆಯಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ.
ಧಾರವಾಡದ 44 ವಯಸ್ಸಿನ ಮಾಯಾ ಬಳ್ಳಾರಿಯವರು, ಸುಮಾರು ಒಂದು ತಿಂಗಳಿನಿಂದ ಎಡ ಭಾಗದ ತಲೆನೋವು ಮತ್ತು ಬಲಭಾಗದ ಕೈ ಮತ್ತು ಕಾಲುಗಳಲ್ಲಿ ಬಲ ಹೀನತೆಯಿಂದ ಬಳಲುತ್ತಿದ್ದರು. ಈ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದಾಗ ನ್ಯೂರೋ ಸರ್ಜರಿ ವಿಭಾಗದಲ್ಲಿ ಪರೀಕ್ಷಿಸಲಾಗಿ ಎಡ ಮೆದುಳಿನ ಭಾಗದಲ್ಲಿ ಗಡ್ಡೆ (ಟ್ಯೂಮರ್) ಇರುವುದು ಗೊತ್ತಾಯಿತು. ಸಾಮಾನ್ಯವಾಗಿ ಮಾಡುವ ಶಸ್ತ್ರಚಿಕಿತ್ಸೆಯ ವಿಧಾನದಲ್ಲಿ ಈ ಗಡ್ಡೆ ತೆಗೆಯುವಾಗ ಬಲಭಾಗದ ಕೈ ಮತ್ತು ಕಾಲುಗಳಲ್ಲಿ ಪೂರ್ತಿ ಶಕ್ತಿ ಕಡಿಮೆಯಾಗುವ ಸಂಭವ ಇರುತ್ತದೆ. ಈ ವಿಷಯವನ್ನು ರೋಗಿ ಮತ್ತು ಅವರ ಸಂಬಂಧಿಕರ ಬಳಿ ಚರ್ಚಿಸಿ, ರೋಗಿಯ ಎಚ್ಚರಾವಸ್ಥೆಯಲ್ಲಿ ಬಲಭಾಗದ ಕೈ ಮತ್ತು ಕಾಲಿನ ಚಲನೆಯನ್ನು ಪರಿಶೀಲಿಸುತ್ತ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು.
ಡಾ. ಎಸ್.ಕೆ. ಜೋಶಿ, ಡಾ. ಪ್ರೀತಂ ಪಾಟೀಲ ಮತ್ತು ಡಾ. ಸಂತೋಷ ದಾಸರ ಅವರ ವೈದ್ಯರ ತಂಡ ಎಂಆರ್‌ಐ ವಿಭಾಗದ ತಂತ್ರಜ್ಞರಾದ ಕಲ್ಯಾಣಿಯವರ ನೆರವಿನಿಂದ ಮೆದುಳಿನ ಗಡ್ಡೆಯ ಸಂಪೂರ್ಣ ಮಾಹಿತಿಯನ್ನು ಮೆದುಳಿನ ಶಸ್ತ್ರಚಿಕಿತ್ಸಾ ತಜ್ಞ ಡಾ. ಎಂ.ಸತೀಶರಿಗೆ ನೀಡಲಾಯಿತು. ರೋಗಿ ಶಸ್ತ್ರಚಿಕಿತ್ಸೆಯ ನೋವನ್ನು ಅನುಭವಿಸದೇ ಎಚ್ಚರಾವಸ್ಥೆಯಲ್ಲಿ ಇರುವ ಜವಾಬ್ದಾರಿಯನ್ನು ಅರವಳಿಕೆ ತಜ್ಞ ಡಾ. ಶ್ರೀರಂಗ ತೋರಗಲ್ ನೇತೃತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಯಿತು.
ಸುಮಾರು ಮೂರು ತಾಸುಗಳ ವರೆಗೆ ನಡೆದ ಈ ಯಶಸ್ವಿ ಶಸ್ತ್ರಚಿಕಿತ್ಸೆಗೆ, ಆಸ್ಪತ್ರೆಯ ಅಧೀಕ್ಷಕರಾದ ಡಾ. ಸತ್ಯಶಂಕರ ಮತ್ತು ನಿರ್ದೇಶಕರಾದ ಡಾ. ನಿರಂಜನಕುಮಾರ ವೈದ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.