ವಿಮಾನ ನಿಲ್ದಾಣ ಅಭಿವೃದ್ಧಿಗೆ ಒಡಂಬಡಿಕೆ
ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು # 145 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಒಡಂಬಡಿಕೆ ಪತ್ರಕ್ಕೆ ರಾಜ್ಯ ಸರ್ಕಾರ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಸಹಿ ಹಾಕಲಾಯಿತು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾಯದರ್ಶಿ ಅಮಿತಾ ಪ್ರಸಾದ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಅಗ್ರವಾಲ್ ಸಹಿ ಹಾಕಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಒಡಂಬಡಿಕೆ ಸಮಾರಂಭದಲ್ಲಿ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಬೇಕೆಂಬ ನಿಟ್ಟಿನಲ್ಲಿ ತಾವು ಹಾಗೂ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವಿರತವಾಗಿ ಶ್ರಮಿಸಿದ್ದೇವೆ. ಅದರ ಫಲವಾಗಿ # 145 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಆರಂಭವಾಗುತ್ತಿರುವುದು ಖುಷಿ ತರಿಸಿದೆ ಎಂದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಂದಿನ ಚೇರ್ಮನ್ ಆಗಿದ್ದ ರಾಮಲಿಂಗಂ ಅವರನ್ನು ಭೇಟಿಯಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಬೇಕೆಂದು ಕೋರಿದೆವು. ಉಚಿತವಾಗಿ ರಾಜ್ಯ ಸರ್ಕಾರ ಜಾಗ ಒದಗಿಸಿದ್ದಲ್ಲಿ ನಿಲ್ದಾಣ ಅಭಿವೃದ್ಧಿಗೊಳಿಸುವುದಾಗಿ ರಾಮಲಿಂಗಂ ಭರವಸೆ ನೀಡಿದರಲ್ಲದೇ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಿರ್ದೇಶಕರೊಬ್ಬರನ್ನು ನೇಮಕ ಮಾಡಿದರು. ಆ ಬಳಿಕ ರಾಜ್ಯ ಸರ್ಕಾರಕ್ಕೆ ಒತ್ತಡ ತಂದು ಭೂಸ್ವಾಧೀನ ಪ್ರಕ್ರಿಯೆ ನಡೆಸಿ 600 ಎಕರೆ ಜಮೀನನ್ನು ಉಚಿತವಾಗಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಯಿತು. ಜತೆಗೆ ಮೂಲಸೌಕರ್ಯವನ್ನೂ ಒದಗಿಸಲಾಯಿತು. ನಂತರ ಇಲ್ಲಿ ದೊಡ್ಡ ವಿಮಾನ ಇಳಿಯುವಂತೆ ನಿಲ್ದಾಣ ಅಭಿವೃದ್ಧಿ ಪಡಿಸಬೇಕೆಂದು ಪಟ್ಟು ಹಿಡಿದು ಪ್ರಯತ್ನಿಸಿದೆವು. ಅದರ ಪರಿಣಾಮ ಇಂದು ಒಡಂಬಡಿಕೆಯಾಗಿದೆ. ಹುಬ್ಬಳ್ಳಿ ಶಾಂತಿ ಸೌಹಾರ್ದತೆಯ ತಾಣವಾಗಿ ಪರಿವರ್ತನೆಗೊಂಡಿದೆ. ಇದಕ್ಕೆ ಹತ್ತಿರದಲ್ಲಿ ಪ್ರವಾಸಿ ತಾಣಗಳಿವೆ, ಮೂರು ಮೆಡಿಕಲ್, ಎಂಜಿನಿಯರಿಂಗ್ ಕಾಲೇಜಿವೆ, ಸಾಕಷ್ಟು ಕೈಗಾರಿಕೆಗಳಿವೆ. ಹತ್ತಿರದಲ್ಲಿಯೇ ಹೈಕೋರ್ಟ್ ಇದೆ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣಗೊಂಡಿದೆ. ಹೀಗಾಗಿ ಹುಬ್ಬಳ್ಳಿಗೆ ಹಾಗೂ ಹುಬ್ಬಳ್ಳಿಗೆ ಹೊಂದಿಕೊಂಡಿರುವ ನಗರಗಳಿಗೆ ಆಗಮಿಸುವ ಗಣ್ಯರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿಯ ಜತೆಗೆ ಹೆಚ್ಚು ಹೆಚ್ಚು ವಿಮಾನ ಈ ಭಾಗದಲ್ಲಿ ಓಡಾಡುವಂತಾಗಲು ವ್ಯವಸ್ಥೆ ಕಲ್ಪಿಸಬೇಕು. ಪ್ರಮುಖವಾಗಿ ದೊಡ್ಡ ಬೋಯಿಂಗ್ ವಿಮಾನ ಬಂದಿಳಿಯುಂತಾಗಬೇಕು. ಪ್ರಸ್ತುತ ಒಂದೇ ವಿಮಾನ ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುತ್ತಿದ್ದು ಮತ್ತೊಂದು ವಿಮಾನ ಓಡಾಡುವಂತಾಗಲು ಕ್ರಮ ಕೈಗೊಳ್ಳಬೇಕೆಂದರು.
ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಕೆ.ಎನ್. ಶ್ರೀವಾಸ್ತವ ಮಾತನಾಡಿ, ರಾಜ್ಯ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಗತ್ಯ ಸೌಕರ್ಯ ಕಲ್ಪಿಸಿದೆ. ನಿಲ್ದಾಣ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗುವುದು. ಪ್ರಸ್ತುತ ಹುಬ್ಬಳ್ಳಿ ವಿಮಾನ ನಿಲ್ದಾಣ 5500 ಮೀಟರ್ ರನ್ವೇ ಹೊಂದಿದ್ದು ಇದನ್ನು 7500 ಮೀಟರ್ಗೆ ವಿಸ್ತರಿಸಲಾಗುವುದು. ಜತೆಗೆ ಟರ್ಮಿನಲ್ ಕಟ್ಟಡ ಅಭಿವೃದ್ಧಿ ಪಡಿಸಲಾಗುವುದು. ಶೀಘ್ರವೇ ಕಾಮಗಾರಿಯ ಟೆಂಡರ್ ಕರೆಯಲಾಗುವುದು. ಬಹುತೇಕ ಜುಲೈನಲ್ಲಿ ಕಾರ್ಯಾರಂಭವಾಗಲಿದ್ದು 30 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಆ ಬಳಿಕ ದೊಡ್ಡ ಬೋಯಿಂಗ್ ವಿಮಾನಗಳು ಇಲ್ಲಿ ಬಂದಿಳಿಯಲು ಅನುಕೂಲವಾಗಲಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮಾತ್ರವಲ್ಲದೇ ಪೂಣೆ, ಮುಂಬೈ, ಹೈದ್ರಾಬಾದ ಇನ್ನಿತರ ನಗರಗಳಿಗೆ ಸಂಪರ್ಕ ಕಲ್ಪಿಸಲು ಸಚಿವಾಲಯ ಮುಂದಾಗಲಿದೆ ಎಂದು ಶ್ರೀವಾಸ್ತವ ತಿಳಿಸಿದರು. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಮಿತಾ ಪ್ರಸಾದ ಮಾತನಾಡಿ, ವೈಮಾನಿಕ ಸೇವೆಯಿಂದಾಗಿ ಉದ್ಯಮ ಸೇರಿದಂತೆ ಆಯಾ ನಗರ ಅಭಿವೃದ್ಧಿಯತ್ತ ಮುಖ ಮಾಡುತ್ತದೆ. ವಿಮಾನ ಯಾನ ಸೇವೆ ಆರಂಭಿಸಲು ಅಗತ್ಯ ಸೌಕರ್ಯ ಕಲ್ಪಿಸಲು ಸರ್ಕಾರ ಹಿಂದೆ ಬಿದ್ದಿಲ್ಲ. ಶಿವಮೊಗ್ಗ, ಬೀದರ್, ಮೈಸೂರು, ಬೆಳಗಾವಿ, ಗುಲ್ಬರ್ಗಾ ವಿಮಾನ ನಿಲ್ದಾಣಕ್ಕೆ ಅಗತ್ಯ ಸೌಕರ್ಯ ಇಲಾಖೆ ಕಲ್ಪಿಸಿಕೊಟ್ಟಿದೆ. ಪ್ರಸ್ತುತ ಹುಬ್ಬಳ್ಳಿ ನಿಲ್ದಾಣ ಅಭಿವೃದ್ಧಿಗೊಳಿಸುವ ಮಹತ್ವದ ಕಾರ್ಯಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ.ಪಿ. ಅಗ್ರವಾಲ್, ಹುಬ್ಬಳ್ಳಿ ನಿಲ್ದಾಣವನ್ನು ದೀರ್ಘಾವಧಿ ಯೋಜನೆಯಿಟ್ಟುಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಅಲ್ಲದೇ, ಕಾಲ ಕಾಲಕ್ಕೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಜನರಿಗೆ ಉತ್ತಮ ಸೇವೆ ನೀಡಲು ಪ್ರಾಧಿಕಾರ ಬದ್ಧವಾಗಿದೆ ಎಂದರು.
ಅಲೋಕ ಸಿನ್ಹಾ, ಎಸ್. ರಹೇಜಾ, ಬೆಳಗಾವಿ ವಿಭಾಗೀಯ ಆಯುಕ್ತ ಗಂಗಾರಾಮ ಬಡೇರಿಯಾ, ಶಾಸಕ ವೀರಭದ್ರಪ್ಪ ಹಾಲಹರವಿ, ಮೇಯರ್ ಡಾ. ಪಾಂಡುರಂಗ ಪಾಟೀಲ, ಏರೋ ಡ್ರಮ್ ಸದಸ್ಯ, ದೀಪಕ ಚಿಂಚೋರೆ, ಮಹಾಂತೇಶ ಬೀಳಗಿ ಮತ್ತಿತರರು ಇದ್ದರು.