ವೈದ್ಯಕೀಯ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆ (ಸುದ್ದಿ ಸಂಕ್ಷೇಪ)
ಧಾರವಾಡ: ಪ್ರಸ್ತುತ ಎಲ್ಲ ಕ್ಷೇತ್ರಗಳಂತೆ ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಕ್ಷಿಪ್ರಗತಿಯ ಬದಲಾವಣೆಗಳಾಗುತ್ತಿದ್ದು, ಈ ಬದಲಾವಣೆಗಳು ಸಾಮಾನ್ಯ ಜನರಿಗೆ ಉಪಯೋಗವಾಗಬೇಕಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿನ ಡಾ. ವೀರೇಂದ್ರ ಹೆಗ್ಗಡೆ ಕಲಾಕೇತ್ರದಲ್ಲಿ ಹಮ್ಮಿಕೊಂಡಿದ್ದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವೈದ್ಯಕೀಯ, ಫಿಜೊಯೋಥೆರಪಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳ 4ನೇ ಘಟಿಕೋತ್ಸವ ಉದ್ಘಾಟಿಸಿ, ಬೇರೆ, ಬೇರೆ ಆರೋಗ್ಯ ಸಂಬಂಧಿ ತೊಂದರೆಗಳಿಂದ ವೈದ್ಯರ ಬಳಿ ಬರುವ ರೋಗಿಗಳು, ವೈದ್ಯರನ್ನು ದೇವರು ಎಂದು ಭಾವಿಸಿ, ಅವರಿಂದ ತಮ್ಮ ತೊಂದರೆಗಳು ಪರಿಹಾರ ಆಗುತ್ತವೆ ಎನ್ನುವ ನಂಬಿಕೆಯೊಂದಿಗೆ ಚಿಕಿತ್ಸೆ ಪಡೆಯುತ್ತಾರೆ. ಅವರ ನಂಬಿಕೆ ಹುಸಿಯಾಗದಂತೆ ವೃತ್ತಿ ಧರ್ಮಕ್ಕೆ ಚ್ಯುತಿ ತರದಂತೆ ವೈದ್ಯರು ಕಾರ್ಯ ನಿರ್ವಹಿಸುವ ಅಗತ್ಯವಿದೆ. ಯಾವಾಗ ರೋಗಿಗಳ ನಂಬಿಕೆ ಗಳಿಸಲು ವೈದ್ಯ ಸಫಲನಾಗುವನೋ ಆವಾಗ ಆ ವೃತ್ತಿಗೆ ಸಲ್ಲುವ ಗೌರವ ಹೆಚ್ಚುತ್ತದೆ ಎಂದರು. ಇಂದಿನ ದಿನಮಾನದಲ್ಲಿ ಹಣವೇ ಬದುಕಿನ ಏಕೈಕ ಉದ್ದೇಶ. ಹೀಗಾಗಿ ಹೆಚ್ಚು ಹಣ ಗಳಿಸುವ ದುರಾಸೆಯಿಂದ ವೃತ್ತಿ ಧರ್ಮವನ್ನು ಮರೆಯುತ್ತಿರುವ ಹಲವಾರು ಪ್ರಕರಣಗಳು ನಮ್ಮ ಮುಂದಿವೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಂತ ಉಚ್ಚ ಪರಂಪರೆಯಿದೆ. ಅದನ್ನು ಮರೆತು ಮುನ್ನಡೆಯುವಂತಹ ಕೆಲಸ ನಡೆಯುತ್ತಿರುವುದು ಸರಿಯಲ್ಲ. ವೈದ್ಯರ ಬಳಿ ಬರುವ ರೋಗಿಗೆ ಆತ್ಮವಿಶ್ವಾಸ ತುಂಬಿ, ಚಿಕಿತ್ಸೆ ನೀಡಬೇಕು. ಪ್ರಾಣಕ್ಕೆ ಸಂಕಟವಾದಾಗ ವೈದ್ಯರ ಬಳಿ ಬರುವ ರೋಗಿಯೋರ್ವ ಪ್ರವೇಶಕ್ಕೆ ಅಪ್ಪಣೆ ಪಡೆಯದೇ ಬಂದರೆ, ಆತನನ್ನು ಉಪಚರಿಸಬೇಕೇ ಹೊರತು ಒಳಗೆ ಬರುವ ಮುನ್ನ ಪ್ರವೇಶಕ್ಕೆ ಏಕೆ ಅಪ್ಪಣೆ ಕೇಳಲಿಲ್ಲ ಎನ್ನುವ ಮನೋಭಾವನೆ ವೈದ್ಯ ಸಮುದಾಯದಲ್ಲಿ ಇರಬಾರದು ಎಂದು ಅವರು ಹೇಳಿದರು. ಪ್ರಸ್ತುತ ದಿನಗಳಲ್ಲಿ ಇಂತಹ ನಡೆಗಳು ವೈದ್ಯರಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದರ ಸಂಕೇತವಾಗಿ ಗೋಚರಿಸುತ್ತಿವೆ. ಇಂದು ವೈದ್ಯಕೀಯ ಕ್ಷೇತ್ರ ಹಣ ಗಳಿಸುವ ಉದ್ಯೋಗವಾಗಿ ಪರಿಣಮಿಸಿದ್ದು, ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಒಳ್ಳೆಯ ವೈದ್ಯರಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ ಡಾ. ನಿರಂಜನಕುಮಾರ, ಡಾ. ಎಸ್.ಕೆ. ಜೋಶಿ, ಡಾ. ಜೆ.ವಿ. ಚೋವತಿ, ಡಾ. ಶಾಂತಾರಾಮ ಹೆಗಡೆ ಇದ್ದರು. ಘಟಿಕೋತ್ಸವದಲ್ಲಿ ವೈದ್ಯಕೀಯ, ಫಿಜೊಯೋಥೆರಪಿ ಮತ್ತು ನರ್ಸಿಂಗ್ ವಿಭಾಗಗಳ ಪೈಕಿ ಡಾ. ವೇದಮನಾ ಇಕ್ರೂತ್, ಡಾ. ಸಾಯಿಕಿರಣ ಬೋರಾ ಹಾಗೂ ಡಾ. ರೋಶನ್ ಡಿಕ್ರೂಜ್ ಅತೀ ಹೆಚ್ಚು ಚಿನ್ನದ ಪದಕಗಳನ್ನು ಪಡೆದರು.
ಇಂದಿನಿಂದ ಗಾಯನ ಶಿಬಿರ
ಧಾರವಾಡ: ಇಲ್ಲಿಯ ಕೆಎನ್ಕೆ ಬಾಲಿಕಾ ಪ್ರೌಢಶಾಲೆಯಲ್ಲಿ ಜ. 24ರಿಂದ ಎರಡು ದಿನ ಮಕ್ಕಳ ಗೀತ ಗಾಯನ ತರಬೇತಿ ಶಿಬಿರ ನಡೆಯಲಿದೆ. ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಬಾಲನಂದನ ಟ್ರಸ್ಟ್ ಹಮ್ಮಿಕೊಂಡಿರುವ ಈ ತರಬೇತಿ ಶಿಬಿರದಲ್ಲಿ ನಗರದ ವಿವಿಧ ಶಾಲೆಗಳ 60ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಳ್ಳಲಿದ್ದು, ಸಮಾರಂಭವನ್ನು ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಉದ್ಘಾಟಿಸಲಿದ್ದಾರೆ. ಮೀರಾ ನಾವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ.