ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರಜತ ಮಹೋತ್ಸವದ ಸಂಭ್ರಮ

Mainashree
Updated On : 24 Jan 2013, 10:52 am

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 23
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಈ ವರ್ಷ 25 ವರ್ಷಗಳು ತುಂಬಿದ ಸಂಭ್ರಮದಲ್ಲಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಬುಧವಾರ ನಗರದ ನೂತನ ಸರ್ಕ್ಯೂಟ್‌ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಾಧಿಕಾರದ ಕಚೇರಿ ನವೀಕರಣ, ಪ್ರಾಧಿಕಾರದ ಚಿಹ್ನೆ ಬದಲಾವಣೆ, ಕಚೇರಿಯ ಎಲ್ಲ ದಾಖಲೆಗಳ ಗಣಕೀಕರಣ, ಕಚೇರಿ ಸಿಬ್ಬಂದಿಗೆ ವಸತಿ ನಿವೇಶನ ಕಟ್ಟಡ ನಿರ್ಮಾಣ ಸೇರಿದಂತೆ ಅವಳಿ ನಗರ ಸೌಂದರ್ಯೀಕರಣಕ್ಕೆ ಪ್ರಾಧಿಕಾರ ಮುಂದಾಗಿದೆ. ಫೆಬ್ರುವರಿ ಕೊನೆ ವಾರದಲ್ಲಿ ರಜತ ಮಹೋತ್ಸವದ ಸಾರ್ವಜನಿಕ ಸಮಾರಂಭ ಏರ್ಪಡಿಸಲು ತೀರ್ಮಾನಿಸಿದ್ದು, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ದಿನಾಂಕ ಕೇಳಲಾಗಿದೆ ಎಂದರು.
ಹುಡಾ ಅನೇಕ ವಸತಿ ವಿನ್ಯಾಸಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಸಾರ್ವಜನಿಕರಿಗೆ ಕಲ್ಪಿಸಿದ್ದು, ರಜತ ಮಹೋತ್ಸವದ ನಿಮಿತ್ತ ಅವಳಿ ನಗರದ ಮಧ್ಯೆ ಅಮರಗೋಳ ಬಳಿ 13 ಕೋಟಿ ವೆಚ್ಚದಲ್ಲಿ 1.8 ಎಕರೆ ವಿಸ್ತೀರ್ಣದಲ್ಲಿ ಸುಂದರ, ಸುಸಜ್ಜಿತ, ಪರಿಸರ ಸ್ನೇಹಿ ವಾಣಿಜ್ಯ ಸಂಕಿರ್ಣ ನಿರ್ಮಿಸುವ ಯೋಜನೆ ಹಾಕಲಾಗಿದೆ. ಗಾಳಿ, ಬೆಳಕು ಹಾಗೂ ನೀರನ್ನು ಉಪಯೋಗಿಸಿಕೊಳ್ಳುವ ರೀತಿ ಹಸಿರು ಕಟ್ಟಡ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಹಗಲು ಹೊತ್ತಿನಲ್ಲಿ ಬೆಳಕಿನ ದೃಷ್ಟಿ, ಎಲ್‌ಇಡಿ, ಸಿಎಫ್‌ಎಲ್ ಬೆಳಕಿನ ದೀಪಗಳ ಜೋಡಣೆ, ಮಳೆ ನೀರು ಕೊಯ್ಲು, ತ್ಯಾಜ್ಯ ನೀರು ಸಂಸ್ಕರಣ ಘಟಕ, ರೆಸ್ಟೋರೆಂಟ್‌ಗೆ ಅನಿಲ ಪೂರೈಕೆ ಜಾಲಬಂದ, ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಕೇಂದ್ರ ಇರುತ್ತದೆ. ಒಟ್ಟಿನಲ್ಲಿ ಈ ಕಟ್ಟಡವು ಮಾದರಿ ಕಟ್ಟಡವಾಗಿ ನಿರ್ಮಿಸುವ ಚಿಂತನೆ ಇದೆ ಎಂದರು.
ಪ್ರಾಧಿಕಾರದಲ್ಲಿ ಈವರೆಗೆ ಅಧ್ಯಕ್ಷರೆಂದು ಕಾರ್ಯನಿರ್ವಹಿಸದ ಎಲ್ಲ ಮಹನೀಯರಿಗೆ ಸನ್ಮಾನ ಹಾಗೂ ಬೆಳ್ಳಿನಾಣ್ಯ ಕಾಣಿಕೆ ನೀಡಲಾಗುವುದು. ಪ್ರಾಧಿಕಾರದ ಮಾಹಿತಿಯುಳ್ಳ ಸಿಡಿ ಹಾಗೂ ಪ್ರಾಧಿಕಾರ ಈವರೆಗೆ ಕೈಗೊಂಡ ಅಭಿವೃದ್ಧಿ ಕಾರ್ಯ, ಸಾಧನೆ ಹಾಗೂ ವಸತಿ ವಿನ್ಯಾಸಗಳ ಮಾಹಿತಿಯುಳ್ಳ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು. ಪ್ರಾಧಿಕಾರದಿಂದ ನಿರ್ಮಿಸುವ ವಸತಿ ವಿನ್ಯಾಸಗಳಿಗೆ ಇತಿಹಾಸ ಪುರುಷರ ಹೆಸರಿಡುವುದು. ಅವಳಿ ನಗರದ ಹೊರವಲಯಗಳಲ್ಲಿ ಮುಖ್ಯ ರಸ್ತೆಗೆ ಸ್ವಾಗತ ಕಮಾನು ನಿರ್ಮಾಣ, ಹುಬ್ಬಳ್ಳಿ-ಧಾರವಾಡದಲ್ಲಿ ತಲಾ ಎರಡು ಪ್ರಮುಖ ವೃತ್ತಗಳನ್ನು ಪ್ರಾಧಿಕಾರದಿಂದ ಅಭಿವೃದ್ಧಿಪಡಿಸುವುದು, ಅವಳಿ ನಗರದ 50 ಉದ್ಯಾನವನಗಳಲ್ಲಿ ಮಿನಿ ಹೈಮಾಸ್ಟ್ ದೀಪ ಹಾಗೂ ಕುಳಿತುಕೊಳ್ಳುವ ಆಸನ ಅಳವಡಿಸುವ ಯೋಜನೆ ಹಾಕಲಾಗಿದೆ ಎಂದು ಲಿಂಪಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸಂಜಯ ಕಪಟಕರ, ವೀರನಗೌಡ ಪಾಟೀಲ, ಪ್ರಾಧಿಕಾರದ ಸದಸ್ಯರಾದ ಮೋಹನಲಾಲ್ ಜೈನ್, ಸುರೇಶ ಬೇದರೆ, ವಿಜಯಲಕ್ಷ್ಮಿ ಒಂಟಮೋರೆ, ಮೋಹನ ರಾಮದುರ್ಗ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement