ರಾಜ್ಯೋತ್ಸವ ಪ್ರಶಸ್ತಿಗಾಗಿ ಲಾಬಿ
ಧಾರವಾಡ: ಸಾಹಿತಿ ಮತ್ತು ಕಲಾವಿದರಿಗೆ ನೀಡುವ ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆಯೇ? ಕುರಿತ ಪ್ರಶ್ನೋತ್ತರ ಸಂವಾದ ಕಾರ್ಯಕ್ರಮದಲ್ಲಿ ಒಟ್ಟಾರೆಯಾಗಿ ಕಂಡು ಬಂದಿದ್ದು, ರಾಜ್ಯೋತ್ಸವ ಪ್ರಶಸ್ತಿಗಾಗಿ ನಡೆಯುತ್ತಿರುವ ಲಾಭಿ ಇನ್ನಾವುದೇ ಪ್ರಶಸ್ತಿಗಳಿಗಾಗಿ ನಡೆಯದಿದ್ದರೂ ಸಣ್ಣಪುಟ್ಟ ಪ್ರಶಸ್ತಿಗಳ ಹಾವಳಿ ವಿಪರೀತವಾಗಿದೆ ಎಂಬ ಅನಿಸಿಕೆ ನಾಡಿನ ಖ್ಯಾತ ಸಾಹಿತಿಗಳಿಂದ ಲೇಖಕರಿಂದ ವ್ಯಕ್ತವಾಯಿತು.
ಶುಕ್ರವಾರ, ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಧಾರವಾಡ ಸಾಹಿತ್ಯ ಸಂಭ್ರಮದ ಮೂರನೇ ಗೋಷ್ಠಿಯಲ್ಲಿ ಈ ಅನಿಸಿಕೆ ವ್ಯಕ್ತವಾಯಿತು.
ಕಾದಂಬರಿಕಾರ್ತಿ ವಿಜಯಾ, ಐಎಎಸ್ ಅಧಿಕಾರಿ ಮನು ಬಳಿಗಾರ ಪ್ರಶ್ನೋತ್ತರ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರೆ, ಸಾಹಿತಿ ಬಾಳಾ ಸಾಹೇಬ ಲೋಕಾಪುರ ಸಂವಾದಕ್ಕೆ ನಿರ್ದೇಶನ ನೀಡುತ್ತಿದ್ದರು.
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರಾದವರ ಸಂಖ್ಯೆ ನಾಡಿನಲ್ಲಿ ಹೆಚ್ಚಾಗಿದೆ. ಆದರೆ ಸರ್ಕಾರ ಮಾತ್ರ ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ಸೀಮಿತಗೊಳಿಸಿರುವುದು ಕೂಡ ಇಂದು ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡುವ ಉಪಕ್ರಮ ಅನುಸರಿಸುವುದಕ್ಕೆ ಕಾರಣವಾಗಿರುವ ಒಂದು ಅಂಶವಾಗಿರಬಹುದು ಎಂದು ಮನು ಬಳಿಗಾರ ಹೇಳಿದರು. ರಾಜ್ಯೋತ್ಸವ ಪ್ರಶಸ್ತಿಗಾಗಿ ಲಾಬಿ ನಡೆಯುತ್ತಿರುವುದು ಸತ್ಯ ಎಂದು ಒಂದು ಹಂತದಲ್ಲಿ ಒಪ್ಪಿಕೊಂಡ ಬಳಿಗಾರ, ಆದರೆ ಈ ಪರಿಸ್ಥಿತಿ ಕಳೆದ ನಾಲ್ಕು ವರ್ಷಗಳಿಂದ ಕಡಿಮೆಯಾಗಿದೆ. ಶೇ.98ರಷ್ಟು ಅರ್ಹರಿಗೆ ಪ್ರಶಸ್ತಿ ನೀಡಲಾಗಿದೆ. ಸರ್ಕಾರದ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಬೇಕಾದರೆ ಭಾಷೆ, ಧರ್ಮ, ಜಾತಿ, ಲಿಂಗ ಮುಂತಾದ ಸಂಗತಿಗಳನ್ನು ಗಮನಿಸಿ ಎಂದು ಬರುವ ಒತ್ತಡಗಳು ಅರ್ಹರ ಆಯ್ಕೆಗೆ ಅಡ್ಡಿಯಾಗಿ ಪರಿಣಮಿಸಿವೆ ಎಂದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸಾಹಿತಿ ಗಿರೀಶ ಕಾರ್ನಾಡ್ ಅವರು, ಸಾಹಿತಿ ಅಥವಾ ಕಲಾವಿದ ಹಣಕ್ಕಾಗಿ ಪ್ರಶಸ್ತಿ ಸ್ವೀಕರಿಸದಿದ್ದರೂ ಪ್ರಸಿದ್ಧಿಗಾಗಿಯಾದರೂ ಪ್ರಶಸ್ತಿ ಸ್ವೀಕರಿಸಬೇಕಾದ ಒತ್ತಡಕ್ಕೆ ಸಿಲುಕುತ್ತಾನೆ. ಪ್ರಶಸ್ತಿ ಪುರಸ್ಕೃತ ಕೃತಿ ಎಂದ ಮಾತ್ರಕ್ಕೆ ಕೃತಿಗಳ ಮಾರಾಟದ ಸಂಖ್ಯೆಯೂ ಹೆಚ್ಚಳಗೊಳ್ಳುವ ಸಾಧ್ಯತೆ ಅಲ್ಲಗಳೆಯಲಿಕ್ಕಾಗುವುದಿಲ್ಲ ಎಂದರು. ಬೇರೆ ರಾಜ್ಯದಲ್ಲಿ ಹುಟ್ಟಿ ಕನ್ನಡ ಮತ್ತು ಕನ್ನಡ ನಾಡಿಗೆ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಕನ್ನಡಿಗನಲ್ಲ ಎನ್ನುವ ಒಂದೇ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿಯಿಂದ ದೂರ ಸರಿಸಿದ ಉದಾಹರಣೆ ನಮ್ಮಲ್ಲಿದೆ. ಇಂತಹ ಸಂದರ್ಭದಲ್ಲಿ ಕನ್ನಡಿಗ, ಕನ್ನಡತನ ವ್ಯಾಖ್ಯಾನ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸರ್ಕಾರ ನೀಡುವ ಪ್ರಶಸ್ತಿ ಪಡೆದುಕೊಂಡರೆ ಎಲ್ಲಿ ಸರ್ಕಾರ ಮತ್ತು ವ್ಯವಸ್ಥೆ ವಿರುದ್ಧ ಮಾತನಾಡುವುದಕ್ಕೆ ತಾತ್ವಿಕ ನೆಲಗಟ್ಟು ದೊರೆಯಲಿಕ್ಕಿಲ್ಲ ಎನ್ನುವ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ನಿರಾಕರಿಸಿದ್ದೇನೆ. ಸರ್ಕಾರದ ಪ್ರಶಸ್ತಿ ಹೊರತು ಪಡಿಸಿ ಸಂಘ- ಸಂಸ್ಥೆಗಳು ಪ್ರಶಸ್ತಿ ಜೊತೆಗೆ ನೀಡುವ ನಗದನ್ನು ಬಡ ಕಲಾವಿದ ಮತ್ತು ಸಾಹಿತಿಗಳಿಗೆ ವಿನಿಯೋಗಿಸುವ ಪ್ರಯತ್ನ ಮಾಡಿದ್ದೇನೆ ಎಂದು ಕಾದಂಬರಿಕಾರ್ತಿ ವಿಜಯಾ ಈ ಸಂದರ್ಭದಲ್ಲಿ ಸಭಿಕರಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದರು.