ವಿನೂತನ ಚಿಂತನೆಯ ಸಾಹಿತ್ಯ ಸಂಭ್ರಮ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಧಾರವಾಡ, ಜ.25
ಸಾಹಿತ್ಯ ಸಮಾರಂಭಗಳೆಂದರೆ ಕೇವಲ ಗಂಟೆಗಟ್ಟಲೆ ಬೇಕು ಬೇಡದ ಭಾಷಣಗಳು, ವಿಚಾರಗೋಷ್ಠಿ, ಕವಿಗೋಷ್ಠಿ, ಉಪನ್ಯಾಸ ಇರುವುದು ಸಾಮಾನ್ಯ. ಆದರೆ, ಧಾರವಾಡದಲ್ಲಿ ಪ್ರಥಮವಾಗಿ ನಡೆದ 'ಧಾರವಾಡ ಸಾಹಿತ್ಯ ಸಂಭ್ರಮ' ಇವೆಲ್ಲವುಕ್ಕಿಂತ ತುಸು ಭಿನ್ನವಾಗಿತ್ತು.
ಹೌದು... ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದ ಮೊದಲ ದಿನ ಶುಕ್ರವಾರ ಭಾಷಣ ಇತ್ಯಾದಿಗಳಿಗಿಂತ ಕಥೆ, ಆತ್ಮಕಥೆಗಳ ಓದು, ಸಂಭಾಷಣೆ, ಸಂವಾದದ ಮೂಲಕ ಸಾಹಿತ್ಯ ಕ್ಷೇತ್ರದ ತಲ್ಲಣಗಳು, ಸಮಸ್ಯೆ ಹಾಗೂ ಸವಾಲುಗಳಿಗೆ ಮುಖಾಮುಖಿಯಾಗುವ ಪ್ರಯತ್ನ ನಡೆಯಿತು.
ಕರ್ನಾಟಕ ವಿವಿಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ಈ ಸಂಭ್ರಮದಲ್ಲಿ ಕನ್ನಡ ಸಾಹಿತ್ಯ ಲೋಕವೇ ಮೈದಳೆದಿತ್ತು. ಬೆಳಗ್ಗೆ 10ಕ್ಕೆ ಹಿರಿಯ ವಿಮರ್ಶಕ ಡಾ.ಜಿ.ಎಸ್. ಆಮೂರ ಅವರಿಂದ ಉದ್ಘಾಟನೆ. ನಂತರ ನಡೆದ ಕಥೆ ಹೇಳುವ ಕಲೆ ಹಾಗೂ ಆತ್ಮಕಥೆಯ ಓದು ಸಾಹಿತ್ಯಾಸಕ್ತರನ್ನು ರಂಜಿಸಿತು. ಚಿಂತನೆಗೂ ಹಚ್ಚಿತು. ಸಾಹಿತ್ಯ ಸಂಭ್ರಮದಲ್ಲಿ ಕಥಾ ವಾಚನ ಆಯೋಜಿಸಿ ಕಥೆ ಹೇಳುವ ಕಲೆಗೆ ಪುಷ್ಟಿ ನೀಡಲಾಯಿತು. ಆರಂಭದಲ್ಲಿ ಕಥೆಗಾರ ಶ್ರೀನಿವಾಸ ವೈದ್ಯ, ಧಾರವಾಡದ ಕಾಮನಕಟ್ಟಿಯಲ್ಲಿ ತಾವು ಕಳೆದ ಬಾಲ್ಯದ ಅನುಭವಗಳ ಮೂಸೆಯಲ್ಲಿ ಕಟ್ಟಿದ ಕಥೆಯನ್ನು ವಿಶಿಷ್ಟವಾಗಿ ಓದಿ ಸಾಹಿತ್ಯಾಭಿಮಾನಿಗಳ ಕುತೂಹಲ ತಣಿಸಿದರು. ಪಕ್ಕಾ ಧಾರವಾಡದ ಭಾಷೆಯಲ್ಲಿ ಕಥೆ ಹೇಳಿದ ಅವರು, ಅಪ್ಪನ ಸಿಟ್ಟು, ತಾಯಿಯ ಮಮತೆ, ಬಾಲ್ಯದ ಕಾಲದ ತುಂಟತನ, ಈ ಎಲ್ಲವನ್ನು ಮೇಳೈಸಿದ ಅನುಭವಗಳ ವಿವರಗಳನ್ನು ನೀಡಿದ್ದು ನಿಜಕ್ಕೂ ರಂಜನೀಯ ಎನಿಸಿದವು.
ಶ್ರೀನಿವಾಸ ವೈದ್ಯ, ಧಾರವಾಡ ಬಿಟ್ಟು ಮುಂಬೈಗೆ ಹೋಗುವಾಗ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಅಪ್ಪ, ಮಗ ದೂರದ ಊರಿಗೆ ತೆರಳುವ ಅಗಲಿಕೆ ತಾಳದೆ ದೈನ್ಯಾವಸ್ಥೆಯಲ್ಲಿರುವುದನ್ನು ವರ್ಣಿಸುವಾಗ ಕೆಲ ಸಾಹಿತ್ಯಾಭಿಮಾನಿಗಳ ಕಣ್ಣುಗಳಲ್ಲಿ ನೀರು ತುಂಬಿ ಬಂದಿದ್ದು ನಿಜ. ನಂತರ ಮಿತ್ರಾ ವೆಂಕಟ್ರಾಜ ಹೇಳಿದ ಕುಂದಾಪುರ ಶೈಲಿಯ ಕಥೆ ತುಸು ಗಂಭೀರತೆ ಪಡೆದುಕೊಂಡಿತು. ತದನಂತರ ಕಥೆಗಾರ ಶ್ರೀಧರ ಬಳಿಗಾರ ಅವರ ಅಸಾಧಾರಣ ಛಾಯಾಚಿತ್ರಗಾರನ ಕಥೆ ವರ್ಣನೀಯ. ಕಾರವಾರ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಕ್ಷೇತ್ರಕ್ಕೆ ಹೊರಟಿದ್ದ ವೆಂಕಟಪ್ಪ ಎಂಬಾತ, ದಾರಿ ತಪ್ಪಿ ಅಜ್ಞಾತ ಸ್ಥಳಕ್ಕೆ ಹೋಗಿ, ಅಲ್ಲಿನ ಪ್ರಕೃತಿ ಸೌಂದರ್ಯ ಆತನಿಗೆ ಬಹಳ ಇಷ್ಟವಾಗಿ ಆತನ ಸಂಸಾರವನ್ನು ಅಲ್ಲಿಯೇ ಸ್ಥಳಾಂತರ ಮಾಡಿ, ನಂತರ ಆತನ ಫಲವಾಗಿ ಅಲ್ಲಿ ಒಂದು ಊರೇ ಸೃಷ್ಟಿಯಾಗುತ್ತದೆ. ಊರು ಕಟ್ಟಿದ ವೆಂಕಟಪ್ಪನಿಗೆ ಸ್ಮರಣೆ ಹೋಗುತ್ತದೆ. ವೈದ್ಯರ ಸಲಹೆಯಂತೆ ಆತನ ಸ್ಮರಣೆ ಮರಳಿಸಲು ಓರ್ವ ಛಾಯಾಚಿತ್ರಕಾರ ಪಡುವ ಸಂಕಟವನ್ನು ಶ್ರೀಧರ ಬಳಿಗಾರ ವಿಸ್ಮಯವಾಗಿ ಕಥೆ ರೂಪದಲ್ಲಿ ತಿಳಿಸಿದರು.
ಆತ್ಮಕಥೆ ಬಿಚ್ಚಿದ ಸಾಹಿತಿಗಳು: ಚಹಾ ವಿರಾಮದ ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರು 'ಆಡಾಡತಾ ಆಯುಷ್ಯ' ಆತ್ಮಕಥೆಯ ಭಾಗವೊಂದನ್ನು ಓದಿದರು. ತಾವು ಶಿರಸಿಯಿಂದ ಅಧ್ಯಯನಕ್ಕೆಂದು ಧಾರವಾಡ ಊರಿಗೆ ಬಂದಿದ್ದು. ಕರ್ನಾಟಕ ಕಲಾ ಕಾಲೇಜಿನಲ್ಲಿ ಕಲಿತ ಸಂದರ್ಭಗಳು. ಆಗ ಪ್ರಾಚಾರ್ಯರಾಗಿದ್ದ ವಿ.ಕೃ. ಗೋಕಾಕರ ಜೊತೆಗಿನ ಒಡನಾಟ, ತಾವು ಶಾಲೆ ಹಾಗೂ ಕಾಲೇಜಿನಲ್ಲಿದ್ದಾಗ ನೋಡಿದ ವರದರಾಜ ಹುಯಿಲಗೋಳ, ಆಲೂರು ವೆಂಕಟರಾಯರು, ಶ್ರೀರಂಗರ ಜೊತೆಗಿನ ಒಡನಾಟ ಪ್ರಸ್ತಾಪಿಸಿದರು. ಅಲ್ಲದೇ, ತಾವು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಜಪಾನ್ ಪ್ರವಾಸಕ್ಕೆಂದು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ನೀಡಿದ ಆಮಂತ್ರಣದ ಸಂದರ್ಭವನ್ನು ಕಾರ್ನಾಡ್ ಎಳೆಎಳೆಯಾಗಿ ಬಿಚ್ಚಿಟ್ಟು ಸಾಹಿತ್ಯಾಸಕ್ತರನ್ನು ತಮ್ಮ ಆತ್ಮಚರಿತ್ರೆಯತ್ತ ಇನ್ನಷ್ಟು ಸೆಳೆಯುವಲ್ಲಿ ಯಶಸ್ವಿಯಾದರು.
ಉಬ್ಬು ಹಲ್ಲಿನ ಪ್ರತಿಭಾ: ಕವಯಿತ್ರಿ ಪ್ರತಿಭಾ ನಂದಕುಮಾರ ಅವರು ತಮಗೆ ಬಾಲ್ಯದಲ್ಲಿದ್ದ ಉಬ್ಬು ಹಲ್ಲುಗಳಿಂದಾದ ಅವಮಾನ, ತಮಗುಂಟಾದ ಕೀಳರಿಮೆಯನ್ನು ರಂಜನೀಯವಾಗಿ ತಮ್ಮ 'ಅನುದಿನದ ಅಂತರಂಗೆ' ಆತ್ಮಕಥನದ ಮೂಲಕ ಹೇಳಿಕೊಂಡರು. ಇನ್ನು ಲೇಖಕ ಎ.ಎಂ. ಮದರಿ ಅವರು, ಅಕ್ಷರ ವಂಚಿತ ಅಲೆಮಾರಿ ಸಮುದಾಯವಾದ ಗೊಂದಲಿಗ ಜನರ ಒಳ ಸಂಕಟಗಳನ್ನು ಹಾಗೂ ತಲ್ಲಣ ಬಿಚ್ಚಿಟ್ಟರು. ಮಧ್ಯಾಹ್ನದ ಊಟದ ನಂತರ ಪ್ರಶಸ್ತಿಗಳ ಹಾವಳಿ ಹೆಚ್ಚಾಗಿದೆಯೇ ಹಾಗೂ ನಾನು, ನನ್ನ ವಿಮರ್ಶಕರು ಮತ್ತು ಓದುಗರು ವಿಷಯವಾಗಿ ಹಲವು ಸಾಹಿತಿಗಳು ಚರ್ಚಿಸಿದರು. ಸಂಜೆ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಪಾಟೀಲ ಹಾಗೂ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರೊಡನೆ ಲೇಖಕರೊಂದಿಗೆ ಸಂವಾದ ನಡೆಯಿತು.
ಇನ್ನು, ಕೊನೆಯದಾಗಿ ಗಿರೀಶ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಚಲನಚಿತ್ರ ಪ್ರದರ್ಶನಗೊಂಡಿತು. ಸಂಭ್ರಮದಲ್ಲಿ ಯು.ಆರ್. ಅನಂತಮೂರ್ತಿ ಮತ್ತು ಜೋಗಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.