ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾಂಪ್ರದಾಯಿಕ v/s ಕಾರ್ಪೊರೇಟ್ ಸಾಹಿತಿಗಳು

Lingaraj Badiger
Updated On : 28 Jan 2013, 11:54 am

ಕನ್ನಡಪ್ರಭ ವಾರ್ತೆ, ಧಾರವಾಡ, ಜ. 27
ಕಾರ್ಪೋರೇಟ್ ಜಗತ್ತಿನಲ್ಲಿ ಕಾರ್ಯನಿರ್ವಹಿಸುತ್ತಾ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡವರು ಕೇವಲ ಖ್ಯಾತಿ ಮತ್ತು ಕೀರ್ತಿಗಾಗಿ ಸಾಹಿತ್ಯ ಕೃಷಿ ಮಾಡುತ್ತಾರೆಂದು ಸಾಂಪ್ರದಾಯಿಕ ಸಾಹಿತಿಗಳು ಒಂದೆಡೆ ಆರೋಪಿಸಿದರೆ, ಕಾರ್ಪೋರೇಟ್ ಜಗತ್ತಿನ ತಲ್ಲಣಗಳು ಅದಕ್ಕಿಂತ ಮುಖ್ಯವಾಗಿ, ಮನುಷ್ಯನ ಸಂಬಂಧಗಳು ಸಾಹಿತ್ಯ ರಚನೆಗೆ ಕಾರಣವೇ ಹೊರತು ಮತ್ಯಾವುದಕ್ಕಲ್ಲ ಎಂದು ಇನ್ನೊಂದೆಡೆ ಕಾರ್ಪೋರೇಟ್ ವಲಯದ ಸಾಹಿತಿಗಳು ಆರೋಪಕ್ಕೆ ಸ್ಪಷ್ಟನೆ ನೀಡಿದರು.
ಈ ಭಿನ್ನಾಭಿಪ್ರಾಯಗಳಿಗೆ ವೇದಿಕೆಯಾಗಿದ್ದು ಇಲ್ಲಿನ ಕರ್ನಾಟಕ ವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸಾಹಿತ್ಯ ಸಂಭ್ರಮದ ಕೊನೆ ದಿನ ಭಾನುವಾರ ನಡೆದ 'ಕನ್ನಡ ಸಾಹಿತ್ಯ ಮತ್ತು ಕಾರ್ಪೋರೇಟ್ ಜಗತ್ತು' ಕುರಿತ ಗೋಷ್ಠಿ.
ಕಾರ್ಪೋರೇಟ್ ವಲಯದಲ್ಲಿದ್ದು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ವಸುಧೇಂದ್ರ, ನಾಗರಾಜ ವಸ್ತಾರೆ, ಎಸ್.ಆರ್. ವಿಜಯಶಂಕರ ಹಾಗೂ ವಿವೇಕ ಶಾನಭಾಗ ಅವರು ತಮ್ಮ ವಿಷಯ ಮಂಡಿಸುವಾಗ ಹಿರಿಯ ಸಾಹಿತಿಗಳಾದ ಚಂದ್ರಶೇಖರ ಪಾಟೀಲ ಹಾಗೂ ಜಿ.ಎಸ್. ಆಮೂರ ಮಧ್ಯದಲ್ಲಿ ಕಾರ್ಪೋರೇಟ್ ವಲಯದ ಸಾಹಿತಿಗಳನ್ನು ಕೆಲ ಹೊತ್ತು ತಬ್ಬಿಬ್ಬು ಮಾಡಿದರು.
ಬಡತನದಲ್ಲಿ ಹುಟ್ಟಿ, ಬಡತನವೇ ತನ್ನ ಬರವಣಿಗೆಯಾಗಿಸಿಕೊಂಡು ಕನ್ನಡದ ಓರ್ವ ಸಾಂಪ್ರದಾಯಿಕ ಸಾಹಿತಿಗಿಂತ ಕಾರ್ಪೋರೇಟ್ ವಲಯದ ಸಾಹಿತಿಗಳಿಂದು, ಕಾರ್ಪೋರೇಟ್ ಜಗತ್ತಿನ ಸೌಲಭ್ಯ ಪಡೆಯುವುದರೊಂದಿಗೆ ನಾಡಿನಲ್ಲಿ ಸಾಹಿತಿ ಎಂಬ ಕೀರ್ತಿ ಪಡೆಯುತ್ತಿದ್ದಾರೆ. ಆದ್ದರಿಂದ ಕಾರ್ಪೋರೇಟ್ ಸಾಹಿತಿಗಳನ್ನು ನಾವಿಂದು ಅನುಮಾನದಿಂದ ನೋಡುವಂತಾಗಿದೆ ಎಂದು ಜಿ.ಎಸ್ ಆಮೂರ ಅಭಿಪ್ರಾಯ ವ್ಯಕ್ತಪಡಿಸಿದರೆ, ಚಂಪಾ ಅವರು, ಸಾಹಿತಿ ಸಮಾಜದ ಅಂಗ. ಸಮಾಜ ಆತನಿಂದ ತನ್ನ ಅಭಿವೃದ್ಧಿಯ ನಿರೀಕ್ಷೆ ಮಾಡುತ್ತದೆ. ಅದನ್ನು ಬಿಟ್ಟು ಬರೀ ಹಣ ಗಳಿಕೆ ಚಿಂತನೆ ಮಾಡಿದರೆ, ಪ್ರಯೋಜನವಿಲ್ಲ. ಆದ್ದರಿಂದ ಕಾರ್ಪೋರೇಟ್ ಜಗತ್ತಿನ ಅಂಗವಾಗಿರುವ ನೀವು, ಪರೋಕ್ಷವಾಗಿ ಕಾರ್ಪೋರೇಟ್ ಜಗತ್ತಿನ ಪ್ರತಿಪಾದಕರೋ ಮಿತ್ರರೋ ಅಥವಾ ದ್ರೋಹಿಗಳೋ ಎಂಬುದನ್ನು ಮೊದಲು ತಿಳಿಸಿ ಎಂದರು. ಈ ಭಿನ್ನ ಅಭಿಪ್ರಾಯ ಆಲಿಸಿದ ಸಭಿಕರಂತೂ ಒಂದು ಕ್ಷಣ ನಿರ್ಲಿಪ್ತರಾಗಿದ್ದು ಕಂಡುಬಂತು.
ವಿವಿ ಪ್ರಾಧ್ಯಾಪಕರು ಅತ್ಯಂತ ಕಡಿಮೆ ಒತ್ತಡದ ನಡುವೆ ರು. ಲಕ್ಷಾಂತರ ಸಂಬಳ ಪಡೆದು ಸಾಹಿತ್ಯ ಕೃಷಿ ಮಾಡುವುದು ಗೌರವಕ್ಕೊ, ಖ್ಯಾತಿಗೋ ಅಥವಾ ಯಾವುದಕ್ಕೆ ಎಂಬ ಪ್ರಶ್ನೆಗಳು ಗೋಷ್ಠಿಯಲ್ಲಿ ಕೇಳಿ ಬಂದವು.
ಇದಕ್ಕೂ ಮುಂಚೆ ಮಾತನಾಡಿದ ವಸುಧೇಂದ್ರ, ಕಾರ್ಪೋರೇಟ್ ಎನ್ನುವುದು ವಾಣಿಜ್ಯ ಇದ್ದ ಹಾಗೆ. ಎಲ್ಲ ಕಾಲಕ್ಕೂ ವಾಣಿಜ್ಯ ಇದೆ. ಇದನ್ನು ನಿಭಾಯಿಸುವ ಶಕ್ತಿ ಕನ್ನಡಿಗರಿಗೆ ಬರಬೇಕಿದೆ. ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಇಡೀ ಪ್ರಪಂಚ ಸುತ್ತುವ ಅವಕಾಶ ದೊರೆಯಿತು. ಬೇರೆ ಬೇರೆ ಜನರು, ಸಂಸ್ಕೃತಿ ನೋಡಲು ಸಾಧ್ಯವಾಯಿತು. ಆರಂಭದಲ್ಲಿ ಅಲ್ಲಿಯೇ ಶಿಸ್ತುಬದ್ಧ ಜೀವನ ನೋಡಿ ನಾವೇನು ಎಂಬ ಕೀಳರಿಮೆ ಹುಟ್ಟಿತು. ಅದರ ಜೊತೆಗೆ ನನ್ನ ಸಾಮರ್ಥ್ಯವೇನು ಎಂಬುದು ಅರ್ಥವಾಯಿತು. ಇದು ನನ್ನ ಬರವಣಿಗೆಗೆ ಆದ ಪ್ರಯೋಜನ ಎಂದರು.
ವಿಜಯಶಂಕರ ಮಾತನಾಡಿ, ಈ ಸಂಪತ್ತು ನಿರ್ವಾತದಲ್ಲಿ ಹುಟ್ಟುವುದಿಲ್ಲ. ಅದಕ್ಕಾಗಿ ಶ್ರಮ ವಹಿಸಬೇಕಾಗುತ್ತದೆ. ಆ ಮೂಲಕ ಸರ್ಕಾರದ ಖಜಾನೆಗೆ ಹಣ ಬರುತ್ತದೆ. ಅದಕ್ಕಾಗಿಯೇ ನೀತಿ-ನಿಯಮ ರೂಪಿಸಲಾಗುತ್ತದೆ. ಕಾರ್ಪೋರೇಟ್ ವಲಯದ ನೀತಿ-ನಿಯಮ ರೂಪಿಸಲು ಕನ್ನಡಿಗರು ಹೋರಾಟ ಮಾಡಬೇಕಾಗಿದೆ. ಈ ಕಾರ್ಪೋರೇಟ್ ಜಗತ್ತಿನ ಒಳ ಮತ್ತು ಹೊರ ಹರವುಗಳನ್ನು ತಿಳಿಸಿಕೊಡುವ ಸಾಧ್ಯತೆ ಮತ್ತು ಶಕ್ತಿ ಸಾಹಿತಿಗಳಿಗಿದೆ. ಕಾರ್ಪೋರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಹಳಷ್ಟು ಜನ ಬರಹಗಾರರು ಹುಡುಕಾಟದಲ್ಲಿದ್ದಾರೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement