ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬದಲಾದ ಭಾರತಕ್ಕೆ ಕಾರಣ ವೃತ್ತಿಪರತೆ

Rashmi Kasaragodu
Updated On : 29 Jan 2013, 1:26 am




ಹುಬ್ಬಳ್ಳಿ:  ಸಾಮಾನ್ಯ ವಿದೇಶಿಗನೊಬ್ಬನ ದೃಷ್ಟಿಯಲ್ಲಿ ಇಂದು ಭಾರತ ಬದಲಾಗಿದೆ. ಇದಕ್ಕೆ ಕಾರಣ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಅವರ ಕಠಿಣ ಪರಿಶ್ರಮ ಮತ್ತು ನ್ಯಾಯಪರತೆ ಎಂದು ಹೇಳಿದ್ದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ.
ಸೋಮವಾರ, ದೇಶಪಾಂಡೆ ಫೌಂಡೇಷನ್‌ನ ಲೀಡ್ ಪ್ರಯಾಣ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಪ್ರಥಮ ವಿದೇಶ ಪ್ರಯಾಣದ ವೇಳೆ ಎದುರಿಸಿದ ಘಟನೆಗಳು ಮತ್ತು ನಂತರದ ದಿನಗಳಲ್ಲಿ ತೋರಿದ ಕಾಳಜಿಗಳು ವಿಶ್ವಾಸಾರ್ಹತೆ ಬದಲಾದ ಭಾರತಕ್ಕೆ ಪುಷ್ಟಿ ಕೊಡುತ್ತವೆ.
1979ರಲ್ಲಿ ಪ್ರಥಮ ಬಾರಿಗೆ ಅಮೆರಿಕದ ಬೋಸ್ಟನ್ ನಗರಕ್ಕೆ ಹೋದಾಗ ಭಾರತೀಯಳು ಎನ್ನುವ ಒಂದೇ ಕಾರಣಕ್ಕೆ ಕೇವಲ ಮೂರು ದಿನಗಳ ವೀಸಾ ಅವಧಿ ನೀಡಲಾಗಿತ್ತು. ಅದೇ 2006ರಲ್ಲಿ ಮಿಯಾಮಿಯ ಕಾಲೇಜೊಂದರಲ್ಲಿ ಉಪನ್ಯಾಸ ನೀಡುವುದಕ್ಕೆ ಹೋಗಿದ್ದ ವೇಳೆ ಮೂರು ದಿನಗಳ ನನ್ನ ವಾಸ್ತವ್ಯ ಎಂದು ಹೇಳಿದರೆ ಅಲ್ಲಿನ ಇಮಿಗ್ರೇಷನ್ ಅಧಿಕಾರಿ ನನಗೆ ಆರು ತಿಂಗಳ ವೀಸಾ ಅವಧಿ ನೀಡಿದ್ದ. ಇದನ್ನು ಗಮನಿಸಿದ ಮೇಲೆ ಇಪ್ಪತ್ತು ವರ್ಷಗಳಲ್ಲಿ ಸಾಮಾನ್ಯ ವಿದೇಶಿಗನ ದೃಷ್ಟಿಯಲ್ಲಿ ಬದಲಾದ ಭಾರತ ಕಂಡಿತು ನನಗೆ ಅನ್ನಿಸಿತು ಎಂದರು.  ಈ ಬದಲಾವಣೆಗೆ ಕಾರಣ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿಗಳ ಪರಿಶ್ರಮ, ಆ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ನೀಡುತ್ತಿರುವ ಕೊಡುಗೆ ಮತ್ತು ದೇಶದ ಕಾನೂನು ಗೌರವಿಸುವ ಶಿಷ್ಟಾಚಾರಗಳು ಮತ್ತು ಭಾರತೀಯರ ಬುದ್ಧಿಮತ್ತೆ.
ಬಳ್ಳಾರಿ, ಗದಗ, ಬೆಳಗಾವಿ ಮುಂತಾದ ನಗರಗಳಿಂದ ಆಗಮಿಸಿದ್ದ ವಿವಿಧ ಕಾಲೇಜು ವಿದ್ಯಾರ್ಥಿಗಳ ಪ್ರಶ್ನೆಗೆ ಸಮಾಧಾನದಿಂದ ಉತ್ತರಿಸುತ್ತಿದ್ದ ಸುಧಾಮೂರ್ತಿ, ಯಾರಿಂದಲೂ ನಮ್ಮ ಬದುಕು ಉದ್ಧಾರವಾಗದು, ಅಥವಾ ಕಟ್ಟಿಕೊಳ್ಳಲು ಆಗದು. ನಮ್ಮ ಬದುಕು ನಮ್ಮಿಂದಲೇ ಕಟ್ಟಿಕೊಳ್ಳಲು ಸಾಧ್ಯ. ಹಣದ ಹಿಂದೆ ಓಡಿದಷ್ಟು ನಮ್ಮಿಂದ ಹಣ ದೂರ ಓಡಿ ಹೋಗುತ್ತದೆ. ಕೆಲಸದಲ್ಲಿ ಪರಿಪೂರ್ಣತೆಗೆ ಆದ್ಯತೆ ನೀಡಿ. ಆತ್ಮ ತೃಪ್ತಿಯೊಂದೇ ಜೀವನಕ್ಕೆ ಮುಖ್ಯ ಉಳಿದೆಲ್ಲವೂ ನಗಣ್ಯ ಎಂದರು. ಉನ್ನತ ಶಿಕ್ಷಣ ಪಡೆದು ಕೌಟುಂಬಿಕ ಜವಾಬ್ದಾರಿಗೆ ಹೆಗಲು ನೀಡಿದ ಕುರಿತು ವಿದ್ಯಾರ್ಥಿನಿಯೋರ್ವಳಿಂದ ಎದುರಾದ ಪ್ರಶ್ನೆಗೆ ಉತ್ತರಿಸಿದ ಸುಧಾಮೂರ್ತಿ, ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಅನ್ನುವುದಕ್ಕಿಂತ ಅವರಿಬ್ಬರಲ್ಲಿನ ಪರಸ್ಪರರ ತಿಳಿವಳಿಕೆ ಮುಖ್ಯ. ನನ್ನ ಅನುಭವದ ಪ್ರಕಾರ ತಾಯಿಯ ಜವಾಬ್ದಾರಿ ಅತಿ ದೊಡ್ಡದು. ಮಕ್ಕಳು ಹದಿನಾಲ್ಕು ವರ್ಷದವರು ಆಗುವವರೆಗೆ ತಾಯಿಯ ನೆರಳಿನಲ್ಲಿ ಬೆಳೆಯುತ್ತಾರೆ. ಈ ಹದಿನಾಲ್ಕು ವರ್ಷಗಳಲ್ಲಿ ತಾಯಿ ನೀಡುವ ಸಂಸ್ಕಾರ ಮಕ್ಕಳ ಬಾಳಿನುದ್ದಕ್ಕೂ ಇರುತ್ತದೆ. ಇದೇ ಸಮಯದಲ್ಲಿ ತಾಯಿ ತನ್ನ ವೃತ್ತಿ ಜೀವನ ಎಂದು ಮಕ್ಕಳತ್ತ ಗಮನ ನೀಡಿ ಮಕ್ಕಳು ಸಂಸ್ಕಾರಹೀನರಾದರೆ ಅನುಭವಿಸುವ ನೋವು ಸಾಕಷ್ಟು. ಇದೇ ಕಾರಣಕ್ಕಾಗಿ ನನ್ನ ಜೀವನದ ಕೆಲವು ವರ್ಷಗಳನ್ನು ಸಂಸಾರಕ್ಕೆ ಮೀಸಲು ಇರಿಸಿದೆ ಎಂದರು.
ನಾಯಕ ಎಂದರೆ ಎಲ್ಲರೊಂದಿಗೆ ಹೋಗುವವನು. ಇಡೀ ತಂಡದ ಒಳಿತಿಗೆ ಚಿಂತನೆ ಮಾಡುವವನು. ಕಡಿಮೆ ಮಾತು ಹೆಚ್ಚು ಕೇಳುವಿಕೆ ಇವುಗಳು ನಾಯಕತ್ವದ ಗುಣಗಳು ಎಂದು ಪ್ರಶ್ನೆಯೊಂದಕ್ಕೆ ಸುಧಾಮೂರ್ತಿ ಉತ್ತರಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement