ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಿನಿ ಸ್ಟೇಡಿಯಂಗೆ ಪ್ರಸ್ತಾವನೆ

Rashmi Kasaragodu
Updated On : 29 Jan 2013, 1:21 am

ಹುಬ್ಬಳ್ಳಿ:  ಹೆಗ್ಗೇರಿಯ ಡಾ. ಬಾಬಾಸಾಹೇಬ ಅಂಬೇಡ್ಕರ್ ಕ್ರೀಡಾಂಗಣವನ್ನು 'ಮಿನಿ ಸ್ಟೇಡಿಯಂ' ಆಗಿ ಪರಿರ್ವತಿಸುವ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮೇಯರ್ ಡಾ. ಪಾಂಡುರಂಗ ಪಾಟೀಲ ಹೇಳಿದರು.
ಸೋಮವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಲಕ್ಷ್ಮಣ ಗಂಡಗಾಳೇಕರ, ಹೆಗ್ಗೇರಿಯ ಕ್ರೀಡಾಂಗಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದರಿಂದ ಆ ಪ್ರದೇಶದ ಜನರು ಸೇರಿದಂತೆ ಹೊರಗಡೆಯಿಂದ ಬರುವವರು ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಅಂಬೇಡ್ಕರ್ ಮೈದಾನದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿಗಳು ನಡೆಯುತ್ತಿವೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು  ತೀವ್ರ ಯಾತನೆಗೆ ಒಳಗಾಗುವಂತೆ ಮಾಡಿದೆ ಎಂದರು. ಆದ್ದರಿಂದ ತಕ್ಷಣ ಕ್ರೀಡಾಂಗಣಕ್ಕೆ ಕಾಂಪೌಂಡ್ ಕಟ್ಟಿಸಬೇಕಲ್ಲದೆ, ಶೌಚಾಲಯ ನಿರ್ಮಿಸುವ ಮೂಲಕ ಮೈದಾನದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಮೇಯರ್ ಡಾ. ಪಾಂಡುರಂಗ ಪಾಟೀಲ, ಹೆಗ್ಗೇರಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಕ್ರೀಡಾಂಗಣವನ್ನು ಮಿನಿ ಸ್ಟೇಡಿಯಂ ಆಗಿ ಪರಿರ್ವತಿಸುವ ಪ್ರಸ್ತಾವನೆ ಈಗಾಗಲೇ ಸರ್ಕಾರದ ಮುಂದಿದೆ ಎಂದು ಉತ್ತರಿಸಿದರು. ಇದರಿಂದ ಸಂತುಷ್ಟರಾಗದ ಗಂಡಗಾಳೆಕರ್, ಎಂದಿನಿಂದ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ ಎಂಬುದನ್ನು ಅಧಿಕಾರಿಗಳಿಂದ ತಿಳಿಸುವಂತೆ ವಿನಂತಿಸಿಕೊಂಡರು. ಇದಕ್ಕೆ ಉತ್ತರಿಸಿದ ಕಾರ್ಯನಿರ್ವಾಹಕ ಅಭಿಯಂತ ಎಸ್.ಎಸ್. ಮನ್ನಂಗಿ, 15-20 ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದರು.
ಶೌಚಾಲಯ ನಿರ್ಮಾಣ: ಅವಳಿನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆಯಾದರೂ ಮಹಾನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದ ಸರ್ವ ಪಕ್ಷಗಳ ಸದಸ್ಯರು ಆಂತಕ ವ್ಯಕ್ತಪಡಿಸಿದರು. ಪ್ರಮುಖ ರಸ್ತೆಗಳಲ್ಲಿ ಶೌಚಾಲಯಗಳಿಲ್ಲದಿದ್ದರಿಂದ ಮಹಾನಗರದ ಜನತೆ ಸೇರಿದಂತೆ ಹೊರಗಿನಿಂದ ಬರುವ ಜನರು ಅನಿವಾರ್ಯವಾಗಿ ರಸ್ತೆ ಅಕ್ಕಪಕ್ಕದಲ್ಲಿ ಮೂತ್ರ ವಿಸರ್ಜಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಡಿ.ಕೆ. ಚವ್ಹಾಣ, ಶಿವಾನಂದ ಮುತ್ತಣ್ಣವರ, ರಾಜಣ್ಣ ಕೊರವಿ ಮತ್ತಿತರರು ಮಾತನಾಡಿ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಮೇಯರ್ ಡಾ. ಪಾಂಡುರಂಗ ಪಾಟೀಲ, ಪಾಲಿಕೆ ಸುವರ್ಣ ಮಹೋತ್ಸವದ ಅಂಗವಾಗಿ ಅವಳಿನಗರದ 50 ಕಡೆಗಳಲ್ಲಿ ಶೌಚಾಲಯ ನಿರ್ಮಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದೆಂದರು. ಅಲ್ಲದೇ, ಯಾವ್ಯಾವ ಪ್ರದೇಶಗಳಲ್ಲಿ ಶೌಚಾಲಯ ಅವಶ್ಯಕತೆ ಇದೆ ಎಂಬುದನ್ನು ಗುರುತಿಸಲು ಅಧಿಕಾರಿಗಳಿಗೆ ಅದೇಶ ನೀಡಿದರು. ಕೊಳಚೆ ನೀರು ರಸ್ತೆ ಮೇಲೆ ಹರಿಯುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆದ್ದರಿಂದ ಕೊಳಚೆ ನೀರು ನೇರವಾಗಿ ಒಳಚರಂಡಿ ಅಥವಾ ಗಟಾರ್‌ನಲ್ಲೇ ಹರಿಯುವಂತೆ ಕ್ರಮಕೈಗೊಳ್ಳುವಂತೆಯೂ ಮೇಯರ್ ಆದೇಶಿಸಿದರು.
ಸೂಕ್ತ ಕ್ರಮ: ಬೀದಿ ವ್ಯಾಪಾರಸ್ಥರನ್ನು ನ್ಯಾಯಾಲಯದ ನಿರ್ದೇಶನದಂತೆ ಹಾಕರ್ಸ್ ಝೋನ್‌ಗೆ ಸ್ಥಳಾಂತರಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ತಿಳಿಸಿದರು. ಹಾಕರ್ಸ್ ಝೋನ್ ನಿರ್ಮಾಣದ ನಂತರ ಸುಪರ್ ಮಾರ್ಕೆಟ್‌ನಲ್ಲಿರುವ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದೇ ಎಂಬ ಕಾಂಗ್ರೆಸ್‌ನ ದೀಪಕ್ ಚಿಂಚೋರೆ ಪ್ರಶ್ನೆಗೆ ಆಯುಕ್ತರು ಉತ್ತರಿಸಿದರು. ಸುಪರ್ ಮಾರ್ಕೆಟ್‌ನಲ್ಲಿರುವ ವ್ಯಾಪಾರಸ್ಥರಿಗೆ ಹಾಕರ್ಸ್ ಝೋನ್‌ನಲ್ಲಿ ಸ್ಥಳಾವಕಾಶ ಕಲ್ಪಿಸಿಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಬೀದಿ ವ್ಯಾಪಾರಿಗಳಿಗೆ ಮಾತ್ರ ಇದರ ಪ್ರಯೋಜನ ದೊರೆಯಲಿದೆ. ಯಾರಿಗೆ ಹಾಕರ್ಸ್ ಝೋನ್‌ನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬುದಕ್ಕೆ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಿದ್ದು ಅದರಂತೆಯೇ ಪಾಲಿಕೆ ನಡೆದುಕೊಳ್ಳಲಿದೆ ಎಂದರು. ನಗರದ ಈಜುಗೋಳ ನವೀಕರಣ ಕಾರ್ಯ ಭರದಿಂದ ಸಾಗಿದ್ದು ಫೆ. 15ರೊಳಗಾಗಿ ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಪಾಟೀಲ ತಿಳಿಸಿದರು.




ಹೆಗ್ಗೇರಿ ಕ್ರೀಡಾಂಗಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದರಿಂದ ಆ ಪ್ರದೇಶದ ಜನರು ಸೇರಿದಂತೆ ಹೊರಗಡೆಯಿಂದ ಬರುವವರು ಮೈದಾನದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.
- ಲಕ್ಷ್ಮಣ ಗಂಡಗಾಳೇಕರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement