ಹುಬ್ಬಳ್ಳಿಗೆ ಉದ್ಯಮ ಕ್ಷೇತ್ರದ ದಿಗ್ಗಜ್ಜರು
ಟ ಸತೀಶ ಪಾಗಾದ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ.28
ಕೈಗಾರಿಕೆ ಮತ್ತು ವ್ಯಾವಹಾರಿಕ ನೆಲೆಗಟ್ಟಿನಲ್ಲಿ ನಿರ್ಲಕ್ಷಿತ ಪ್ರದೇಶ, ಅವಕಾಶಗಳಿಲ್ಲದ ಕ್ಷೇತ್ರ ಎಂದು ಬಿಂಬಿತವಾಗುತ್ತಿರುವ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಹುಬ್ಬಳ್ಳಿ ಕೇಂದ್ರ ಸ್ಥಾನದಲ್ಲಿ ಇಂದಿನಿಂದ ಅವಕಾಶಗಳ ಸುಗ್ಗಿ.
ಉದ್ಯಮ ಕ್ಷೇತ್ರದ ದಿಗ್ಗಜರು ನವೋದ್ಯಮಿಗಳಿಗೆ ಉದ್ಯಮದ ಕಲೆಯನ್ನು ತಿಳಿಸಿಕೊಡಲಿದ್ದಾರೆ. ಜ. 29 ರಿಂದ ಫೆ. 1 ರವರೆಗೆ ನಾಲ್ಕು ದಿನಗಳ ಕಾಲ ಇಲ್ಲಿ ಭರಪೂರ ಅನುಭವ ಸಿಗಲಿದೆ. ತನ್ಮೂಲಕ ಕರ್ನಾಟಕದ ವಿಶೇಷವಾಗಿ ಉತ್ತರ ಕರ್ನಾಟಕದ ನವೋದ್ಯಮಿಗಳಿಗೆ ಉದ್ಯಮ ಕ್ಷೇತ್ರದಲ್ಲಿ ಹೊಸ ಆಯಾಮ ಒದಗಿ ಬರಲಿದೆ. ಈ ಅಭೂತಪೂರ್ವ ಗಳಿಗೆಗೆ ಸಾಕ್ಷಿಯಾಗಲು ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಸಜ್ಜಾಗಿದೆ.
ಏನೇನುಂಟು?: ಜ.29 ರಂದು ಮೊದಲನೇ ದಿನ ಟೈಕಾನ್-2013 ನವೋದ್ಯಮಿಗಳು ಮತ್ತು ಸಾಧಕ ಉದ್ಯಮಿಗಳೊಂದಿಗೆ ಸಂವಾದ, ಸಮಾವೇಶ ನಡೆಯಲಿದ್ದು, ಇದಕ್ಕಾಗಿ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿರುವ ದೇಶಪಾಂಡೆ ಫೌಂಡೇಷನ್ ಫಾರ್ ಸೋಷಿಯಲ್ ಎಂಟರ್‌ಪ್ರನರ್‌ಷಿಪ್ ಸಭಾಭವನದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಅವಧಿಯಲ್ಲಿ ವಿವಿಧ ನವೋದ್ಯಮಿಗಳು ಮತ್ತು ಸಾಧಕ ಉದ್ಯಮಿಗಳು ಈ ಭಾಗದಲ್ಲಿ ಲಭ್ಯವಿರುವ ಸಂಪನ್ಮೂಲ ಮತ್ತು ಅದರ ಬಳಕೆ ಕುರಿತು ಮಾತನಾಡಲಿದ್ದಾರೆ.
ಔದ್ಯಮಿಕ ಬೆಳವಣಿಗೆಯಲ್ಲಿ ಅವಕಾಶಗಳಿದ್ದರೂ ಔದ್ಯಮಿಕ ಮನೋಭಾವದ ಕೊರತೆ ಕಾರಣ ಹಿಂದುಳಿದಿರುವ ಇಲ್ಲಿನ ಪ್ರದೇಶದ ವ್ಯಾಪಾರಿಗಳಲ್ಲಿ, ಉದ್ಯಮಿಗಳಲ್ಲಿ ಔದ್ಯಮಿಕ ಮನೋಭಾವನೆ ಬೆಳೆಯಬೇಕಿದೆ. ಇನ್ನು ಕೆಲವರು ಈ ಕ್ಷೇತ್ರದಲ್ಲಿದ್ದರೂ ಪರಿಪೂರ್ಣರಾಗಿ ಬೆಳೆಯದೇ ಅವಕಾಶ ವಂಚಿತರಾಗುತ್ತಿದ್ದಾರೆ. ಜ.29ರಂದು ನಡೆಯಲಿರುವ ಟೈಕಾನ್ ಸಮಾವೇಶದಲ್ಲಿ ಶೂನ್ಯದಿಂದ ಸಾಧನೆಯ ಶಿಖರಕ್ಕೆ ಏರಿದ ಹಲವರು ಆ ಹಾದಿಯಲ್ಲಿ ನಡೆದಾಗ ಎದುರಿಸಿದ ಸವಾಲುಗಳು, ಸೋಲುಗಳ ಕುರಿತು ಇದೀಗ ಬೆಳಕಿಗೆ ಬರುತ್ತಿರುವ ಉದ್ಯಮಿಗಳೊಂದಿಗೆ ಮಾತನಾಡಲಿದ್ದಾರೆ. ಬೆಳಗ್ಗೆ ನಡೆಯುವ ಸಂವಾದ ಮತ್ತು ಉಪನ್ಯಾಸದಲ್ಲಿ ಸುಮಾರು 400ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ 1500 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಮುಕ್ತ ವೇದಿಕೆಯಲ್ಲಿ ಎರಡೂ ಕಾರ್ಯಕ್ರಮಗಳು ನಡೆಯಲಿವೆ.
ಟೈ ಏಕೆ?: ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಆರ್ಥಿಕ ಸಂಪತ್ತಿನ ರಚನೆ ತನ್ಮೂಲಕ ನಾಡು ನುಡಿಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು 'ಟೈ' ಉದ್ದೇಶ. ಈ ನಿಟ್ಟಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಉದ್ಯಮಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಟೈನ ಉದ್ದೇಶಗಳಲ್ಲಿ ಒಂದು. ಕರ್ನಾಟಕದಲ್ಲಿ ಟೈ ಹುಬ್ಬಳ್ಳಿ ಮುಖಾಂತರ ಪ್ರವೇಶಿಸಿ 200 ಸದಸ್ಯರನ್ನು ಹೊಂದಿದೆ. ಸದಸ್ಯರ ಮುಖಾಂತರ ಈ ಭಾಗದ ಅಭಿವೃದ್ಧಿಗೆ ವಿಶೇಷ ಉಪನ್ಯಾಸ, ಚರ್ಚಾಕೂಟ, ಶೈಕ್ಷಣಿಕ ಅಧ್ಯಯನ ಹಮ್ಮಿಕೊಳ್ಳಲಾಗುತ್ತಿದೆ. ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ಡಾ. ಎನ್.ಆರ್. ನಾರಾಯಣಮೂರ್ತಿ, ವಿಜ್ಞಾನಿ ಡಾ. ರಘುನಾಥ ಮಾಶೇಲ್ಕರ್ ಟೈಕಾನ್ 2013 ಉದ್ಘಾಟಿಸುವರು. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಚಿನಾಯ್, ಇಟ್ಟಿಯಾಂ ಸಿಸ್ಟಂನ ಶ್ರೀನಿರಾಜಂ ಮತ್ತು 'ನನ್ನ ಉದ್ಯಮಶೀಲತೆಯ ಜೈತ್ರಯಾತ್ರೆ' ಕುರಿತು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಜೈನ್ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ. ಚೆನರಾಜ್ ಜೈನ್ ಮಾತನಾಡಲಿದ್ದಾರೆ.
ವರ್ಧನೆಗೆ ತಿರುವು: ಆಶಯದೊಂದಿಗೆ ಜ.30ರಂದು ನಡೆಯಲಿರುವ ಅಭಿವೃದ್ಧಿ ಸಂವಾದಕ್ಕೆ ಈ ಬಾರಿ ಸಾಕ್ಷಿಯಾಗುತ್ತಿರುವುದು ಟಾಟಾ ಸನ್ಸ್‌ನ ನಿಕಟಪೂರ್ವ ಅಧ್ಯಕ್ಷ ರತನ್ ಟಾಟಾ. ಇವರೊಂದಿಗೆ ಮೂರು ದಿನ ನಡೆಯಲಿರುವ ಅಭಿವೃದ್ಧಿ ಸಂವಾದದಲ್ಲಿ ಉದ್ಯಮ ಕ್ಷೇತ್ರದ ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ಡಾ. ಎನ್.ಆರ್. ನಾರಾಯಣಮೂರ್ತಿ, ಸುಧಾಮೂರ್ತಿ, ರಶ್ಮಿ ಬನ್ಸಾಲ್, ವಿಜ್ಞಾನಿ ಡಾ. ರಘುನಾಥ ಮಾಶೇಲ್ಕರ್, ದಿಲೀಪ್ ಚಿನಾಯ್, ರಾಮಜಿ ರಾಘವನ್, ಚಂಚಲಪತಿ ದಾಸ್, ನಾರಾಯಣ ಜಿ. ಹೆಗಡೆ, ಸಿ.ಪಿ. ವಿಶ್ವನಾಥ, ಆನಂದ ಸುದರ್ಶನ, ಚನ್ನಬಸಪ್ಪ ಕೊಂಬ್ಳಿ, ಬಿ.ಎಂ. ನಂದೀಶ, ಎಲ್. ನಾರಾಯಣ ರೆಡ್ಡಿ ಸೇರಿದಂತೆ ಹಲವು ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಅಭಿವೃದ್ಧಿ ಸಂವಾದದಲ್ಲಿ ಸ್ವಸಹಾಯ ಸಂಘಗಳ ಘಟಕ ಹಣಕಾಸು ವ್ಯವಸ್ಥೆ, ಮಾಹಿತಿ ತಂತ್ರಜ್ಞಾನ ಸೇವೆ, ನೈಸರ್ಗಿಕ ಕೃಷಿ, ಮಳೆ ನೀರು ಕೊಯ್ಲು, ಅಂತರ್ಜಲ ಮರುಪೂರಣ, ಸಾವಯವ ಕೃಷಿ, ಕಾರ್ಪೋರೇಟ್ ಮುಖಾಂತರ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆ ಮತ್ತು ಅಧ್ಯಯನ ಕುರಿತಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮತ್ತು ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಹುಬ್ಬಳ್ಳಿಯಲ್ಲಿ ಉದ್ಯಮ ಕ್ಷೇತ್ರದ ಹಲವು ದಿಗ್ಗಜರು ಒಂದೆಡೆ ಸೇರುತ್ತಿರುವುದರಿಂದ ಸಹಜವಾಗಿ ಕುತೂಹಲ ಮನೆ ಮಾಡಿದೆ. ಈ ಸುಸಂಧಿಯ ಸದವಕಾಶ ಪಡೆಯಲು ನವೋದ್ಯಮಿಗಳು ಉತ್ಸುಕರಾಗಿದ್ದಾರೆ.