ಜಾತ್ರೆ ಬಂತೆಂದರೆ ಊರಿಗೆ ಬೇಲಿ!
ಹಗರಿಬೊಮ್ಮನಹಳ್ಳಿ: ಜಾತ್ರೆ ಎಂದರೆ ಗ್ರಾಮದಲ್ಲಿ ತಳಿರು, ತೋರಣ ಕಟ್ಟಿ, ಸಿಂಗರಿಸುತ್ತಾರೆ. ಆದರೆ ಈ ಊರಿನ ಜಾತ್ರೆ ಎಂದರೆ ಊರಿನ ಸುತ್ತಮುತ್ತ ಮುಳ್ಳಿನ ಕಂಟಿಯ ಭದ್ರವಾದ ಬೇಲಿ ಹಾಕುತ್ತಾರೆ. ಈ ಬೇಲಿಯನ್ನು ದಾಟಿ ಯಾರೂ ಒಳ ಹೋಗಿ ಹೊರಬರುವಂತಿಲ್ಲ. ಜಾತ್ರೆ ಆರಂಭವಾಗುವವರೆಗೂ ಊರಿನ ಬಾಲಕಿಯರಾದಿಯಾಗಿ ಯಾವ ಮಹಿಳೆ ಕೂಡ ಹಣೆಗೆ ಕುಂಕುಮ ಹಚ್ಚುವಂತಿಲ್ಲ, ಹೂ ಮುಡಿಯುವಂತಿಲ್ಲ. ಅಲ್ಲದೇ ಗಂಡ-ಹೆಂಡತಿ ಒಂದೇ ಹಾಸಿಯಲ್ಲಿ ಮಲಗುವಂತಿಲ್ಲ. ಇದು ವಿಚಿತ್ರ ಎನಿಸಿದರೂ ಸತ್ಯ.
ಹೌದು.... ಈ ತರಹದ ಪದ್ಧತಿ ಇರುವುದು ತಾಲೂಕಿನ ಮಾದೂರು ಗ್ರಾಮದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ. ಜಾತ್ರೆ ದಿನದಂದು ಇಲ್ಲಿನ ಗ್ರಾಮಸ್ಥರು ಹಾಗೂ ಪರ ಊರಿನಿಂದ ಗ್ರಾಮಕ್ಕೆ ಬರುವವರು ಚಪ್ಪಲಿ ಹಾಕಿಕೊಂಡು ಪುರ ಪ್ರವೇಶಿಸುವಂತಿಲ್ಲ. ಜಾತ್ರೆ ಆರಂಭಕ್ಕೂ ಮುನ್ನ ಏನಾದರೂ ಜನ, ಜಾನುವಾರು ಸಹಿತ ಯಾವುದೇ ಸಾವು ಸಂಭವಿಸಿದರೆ ಗ್ರಾಮದೊಳಗೇ ಅಂತ್ಯಕ್ರಿಯೆ ನೆರವೇರಿಸಬೇಕು.
400 ವರ್ಷದ ಇತಿಹಾಸ: ತಾಲೂಕು ಕೇಂದ್ರದಿಂದ 8 ಕಿ.ಮೀ ದೂರದಲ್ಲಿರುವ ಮಾದೂರು ಗ್ರಾಮಕ್ಕೆ 400 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ ಗ್ರಾಮಸ್ಥರು. ವಿಜಯನಗರ ಅರಸರ ಆಳ್ವಿಕೆಯಲ್ಲಿ ಈ ಗ್ರಾಮಕ್ಕೆ ಸೇರಿದ ಮಲ್ಲೋಜ ಎಂಬ ಹೆಸರಿನ ಯೋಧ ಯುದ್ದಭೂಮಿಯಲ್ಲೇ ಮರಣಹೊಂದಿದ ಸುದ್ದಿ ಕೇಳಿ ಯೋಧನ ಪತ್ನಿ ಗ್ರಾಮದ ಹೊರವಲಯದಲ್ಲಿ ಸ್ವಇಚ್ಛೆಯಿಂದ ಚಿತೆ ಏರ್ಪಡಿಸಿ ಸತಿಸಹಗಮನವಾದಳಂತೆ. ಆ ಯೋಧನ ಪತ್ನಿ ಮಾಸ್ತೆಮ್ಮನ ಹೆಸರಿನಲ್ಲಿ ಗುಡಿ ಕಟ್ಟಿದ್ದಾರೆ. ಅಲ್ಲದೇ ಆಕೆಯ ನೆನಪಿಗಾಗಿ ಗ್ರಾಮದಲ್ಲಿ ಸತಿಕಲ್ಲು ನೆಟ್ಟಿದ್ದಾರೆ. ಗ್ರಾಮಸ್ಥರು ಪ್ರತಿವರ್ಷ ಬಂಧುಣ್ಣಿಮೆ ನಂತರ ದೇವಿ ಹೆಸರಲ್ಲಿ ಜಾತ್ರೆ ಆಚರಿಸುತ್ತಾರೆ. ಈ ವರ್ಷ ಫೆ. 4ರಿಂದ 6ರವರೆಗೆ ಮೂರು ದಿನಗಳ ಕಾಲ ಮಾದೂರು ಮಾಸ್ತೆಮ್ಮ ಜಾತ್ರೆ ನಡೆಯಲಿದೆ.
ಕಟ್ಟಪ್ಪಣೆ ಇದೆ: ಮಾಸ್ತೆಮ್ಮ ದೇವಿ ಜಾತ್ರೆ ಸಮಯದಲ್ಲೇ ಊರಿನ ಸುತ್ತಲೂ ಮುಳ್ಳಿನ ಬೇಲಿ ಕಟ್ಟಲಾಗುತ್ತದೆ. ಈ ಸಮಯದಲ್ಲಿ ಊರ ಅಗಸಿ ಬಾಗಿಲೇ ಇಡೀ ಊರಿಗೆ ಏಕೈಕ ಪ್ರವೇಶ ದ್ವಾರವಾಗಿರುತ್ತದೆ. ಗ್ರಾಮಸ್ಥರು, ಹೊರಗಿನಿಂದ ಗ್ರಾಮಕ್ಕೆ ಬಂದು ಹೋಗುವವರು, ಜಾನುವಾರುಗಳು ಸಹಿತ ಎಲ್ಲರೂ ಈ ಅಗಸಿ ಮೂಲಕ ಬಂದು, ಹೋಗಬೇಕು. ಮುಖ್ಯವಾಗಿ ಪರ ಊರಿನವರು ಗ್ರಾಮದೊಳಕ್ಕೆ ಪ್ರವೇಶಿಸಬೇಕಾದರೆ ಹಣ ಹೊರತುಪಡಿಸಿ ಎಲ್ಲ ವಸ್ತುಗಳನ್ನು ಅಗಸಿ ಬಾಗಿಲಲ್ಲಿ ಕಾವಲು ಕಾಯುವವರ ಹತ್ತಿರ ಇಟ್ಟು ಒಳಗೆ ಬರಬೇಕು. ಜಾತ್ರೆ ಆರಂಭವಾಗಿ ಬೇಲಿ ಕಿತ್ತು ಹಾಕುವವರೆಗೆ ಗ್ರಾಮದಿಂದ ಏನ್ನನ್ನೂ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ ಎಂಬ ಕಟ್ಟಪ್ಪಣೆ ಇದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಮದೂರು ಮಹೇಶ.
ಈ ಜಾತ್ರೆಗೆ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜಾತಿ, ಧರ್ಮ ಲೆಕ್ಕಿಸಿದೆ ಸಾವಿರಾರು ಭಕ್ತರು ಆಗಮಿಸಿ, ಮಾಸ್ತೇಮ್ಮನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಬೇಡಿದ ವರವನ್ನು ನೀಡುವ ಶಕ್ತಿ ದೇವತೆ ಎಂಬ ಭಾವ ಈ ಭಾಗದಲ್ಲಿ ಜನತೆಯಲ್ಲಿದೆ. ಹೀಗಾಗಿ ಜಾತ್ರೆ ಆರಂಭಕ್ಕೂ ಮುನ್ನ ಏಳು ದಿನಗಳ ಕಾಲ ಎಲ್ಲ ಕಟ್ಟುಪಾಡುಗಳನ್ನು ಚಾಚೂ ತಪ್ಪದೆ ಅನುಸರಿಸುವ ಮೂಲಕ ಮಾಸ್ತೆಮ್ಮನಿಗೆ ನೂರಾರು ವರ್ಷಗಳಿಂದಲೂ ಮಾದೂರು ಗ್ರಾಮಸ್ಥರು ಸೇರಿದಂತೆ ನಾಡಿನ ಜನತೆ ಗೌರವ ಸಲ್ಲಿಸುತ್ತಾ ಬಂದಿದ್ದಾರೆ.