ರು. 3 ಕೋಟಿ ವೆಚ್ಚದಲ್ಲಿ ರಾಮನಗರ ಆಸ್ಪತ್ರೆ ಅಭಿವೃದ್ಧಿ: ನೇಮರಾಜ ನಾಯ್ಕ
ಹಗರಿಬೊಮ್ಮನಹಳ್ಳಿ: ತಾಲೂಕು ಕೇಂದ್ರ ಹಗರಿಬೊಮ್ಮನಹಳ್ಳಿ ಪಟ್ಟಣದ ರಾಮನಗರದ ಗಂಗಾವತಿ ವೆಂಕೋಬಣ್ಣ ಸರ್ಕಾರಿ ಆಸ್ಪತ್ರೆಯನ್ನು 3 ಕೋಟಿ ವೆಚ್ಚದಲ್ಲಿ ಉನ್ನತಿಕರಣಗೊಳಿಸುವ ಮೂಲಕ ತಾಲೂಕಿನ ಜನತೆಯ ಆರೋಗ್ಯ ರಕ್ಷಣೆಗೆ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಕೆ. ನೇಮಿರಾಜನಾಯ್ಕ ಹೇಳಿದ್ದಾರೆ.
ಗುರುವಾರ ಪಟ್ಟಣದ ರಾಮನಗರದ ಗಂಗಾವತಿ ವೆಂಕೋಬಣ್ಣ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೆ ರು. 3 ಕೋಟಿ ಅನುದಾನ ಸರ್ಕಾರದಿಂದ ಮಂಜೂರಾಗಿದ್ದು, ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ಟೆಂಡರ್‌ನ್ನು ಅದಷ್ಟು ಬೇಗ ಕರೆದು ಕಾಮಗಾರಿ ಆರಂಭಿಸಲಾಗುವುದು ಎಂದರು.
ಶಾಸಕನಾಗಿ ಆಯ್ಕೆಯಾದ ಸಮಯದಲ್ಲಿ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯಡಿ ರು. 1.5 ಕೋಟಿ ಅನುದಾನ ಮುಂಜೂರು ಮಾಡಿಸಿ ಈ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ್ದೆ. ಈಗ ಕಟ್ಟಡ ಉದ್ಘಾಟಿಸುತ್ತಿದ್ದೇನೆ ಎಂದರು.
ಹಳೇಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠಾಧೀಶರಾದ ಹಾಲಶಂಕರಸ್ವಾಮಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಸಿನಿಮಾ ಮಂಜಣ್ಣ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ಕುರುಬರ ನಾಗರತ್ನ ವೆಂಕಟೇಶ, ತಾಪಂ ಸದಸ್ಯರಾದ ಬಿ. ಗಂಗಮ್ಮ ಹನುಮಂತಪ್ಪ, ಸಾವಿತ್ರಮ್ಮ, ಲೋಹಿತ್ ಸಿದ್ದಪ್ಪ, ಭಾರತಮ್ಮ ಬೆಲ್ಲದ್, ಎಂ.ಎಂ. ಶಿವಕುಮಾರ, ಉಮೇಶ, ಬೆಣಕಸಲ್ ಪ್ರಕಾಶ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಹನಸಿದೇವರಾಜ, ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಪ್ರಕಾಶರೆಡ್ಡಿ, ತಾಪಂ ಇಓ ಜಿ. ಗೋಪ್ಯಾನಾಯ್ಕ, ತಹಸೀಲ್ದಾರ ನಾಗರಾಜಭಟ್, ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ ಇದ್ದರು.
ಪರುಶುರಾಮಪ್ಪ ಸ್ವಾಗತಿಸಿದರು. ಪರಮೇಶ್ವರಯ್ಯ ಸೋಪ್ಪಿಮಠ ನಿರೂಪಿಸಿದರು.