ವಾಹನಕ್ಕೆ ಕೆಂಪು ದೀಪ ಎಲ್ಲರೂ ಬಳಸುವಂತಿಲ್ಲ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 1
ನಿರ್ದಿಷ್ಟ ಗಣ್ಯ ವ್ಯಕ್ತಿಗಳನ್ನು ಹೊರತುಪಡಿಸಿ ಇನ್ನು ಮುಂದೆ ಯಾವುದೇ ವ್ಯಕ್ತಿಗಳಾಗಲಿ ಅಥವಾ ಸರ್ಕಾರಿ ಅಧಿಕಾರಿಗಳಾಗಲಿ ತಮ್ಮ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.
ಗಣ್ಯ, ಅತಿ ಗಣ್ಯ ಹಾಗೂ ಸರ್ಕಾರಿ ಅಧಿಕಾರಿಗಳ ವಾಹನಗಳ ಮೇಲೆ ಕೆಂಪು ದೀಪ ಉಪಯೋಗಿಸುವುದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 25237/2010ರ ಪ್ರಕರಣದಲ್ಲಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಇದುವರೆಗೂ ಈ ಕುರಿತು ಹೊರಡಿಸಿದ್ದ ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ.
ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಮಂತ್ರಿ ಮಂಡಲದ ಸಚಿವರು, ವಿಧಾನಸಭೆ ಸಭಾಧ್ಯಕ್ಷರು, ವಿಧಾನ ಪರಿಷತ್ ಸಭಾಪತಿ, ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು, ನ್ಯಾಯಾಧೀಶರಷ್ಟೇ ತಮ್ಮ ಅಧಿಕೃತ ವಾಹನಗಳ ಮೇಲೆ ಮಾತ್ರ ವಿಐಪಿ ರೆಡ್ ಟಾಪ್ ಲೈಟ್ ಬಳಸಲು ರಾಜ್ಯ ಸರ್ಕಾರ 5-6-2013ರಂದು ಅಧಿಸೂಚನೆ ಹೊರಡಿಸಿದೆ. ಈ ಕುರಿತ ಮಾಹಿತಿಯನ್ನು ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಾಧ್ಯಮಗಳಿಗೆ ಈಚೆಗೆ ಬಿಡುಗಡೆಗೊಳಿಸಿದ್ದಾರೆ.
ಸಚಿವರುಗಳ ಸಮಾನ ಸ್ಥಾನಮಾನ ಹೊಂದಿರುವ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಮುಖ್ಯಸ್ಥರು ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಮಾನ ಸ್ಥಾನಮಾನ ಹೊಂದಿರುವ ನ್ಯಾಯಮಂಡಳಿ ಅಥವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ. ಇದೇ ರೀತಿ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳೂ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಮತ್ತು ಇತರ ಗಣ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.
ಪ್ರತಿಷ್ಠಿತ ವ್ಯಕ್ತಿಗಳ ಭದ್ರತೆಗೆ ಉಪಯೋಗಿಸುವ ಪೊಲೀಸ್ ಎಸ್ಕಾರ್ಟ್ ವಾಹನಗಳು ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 108 (3)ರನ್ವಯ ನೀಲಿ ಬಣ್ಣದ ದೀಪ ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಕೆ. ಬೀರೇಶ್ ಸೂಚಿಸಿದ್ದಾರೆ.