ಇಂದು ನಾಮಕರಣ, ಉದ್ಘಾಟನೆ ಸಮಾರಂಭ
ಅಣ್ಣಿಗೇರಿ: ಸ್ಥಳೀಯ ಗಣೇಶ ನಗರದಲ್ಲಿರುವ ಅಣ್ಣಿಗೇರಿ ಲಯನ್ಸ್ ಶಿಕ್ಷಣ ಸಂಸ್ಥೆಗೆ ಶ್ರೀ ಭೀಮರಡ್ಡಿ ಫಕ್ಕೀರಡ್ಡಿ ದ್ಯಾವನೂರು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಾಗೂ ಪ್ರೌಢಶಾಲೆ ಎಂದು ನಾಮಕರಣ, ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ಜು. 3ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ. ದಾಸೋಹಮಠದ ಶಿವಕುಮಾರ ಶ್ರೀಗಳು ಸಾನ್ನಿಧ್ಯ ವಹಿಸುವರು. ಜಿ.ಎಫ್. ದ್ಯಾವನೂರು ಅಧ್ಯಕ್ಷತೆ ವಹಿಸುವರು. ಶಾಸಕ ಎನ್.ಎಚ್. ಕೋನರಡ್ಡಿ ಶಾಲೆ ನಾಮಫಲಕ ಉದ್ಘಾಟಿಸುವರು. ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸಮಾರಂಭ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರ್ಯ ಆಗಮಿಸಲಿದ್ದು, ಮಾಜಿ ಸಚಿವ ಕೆ.ಎನ್. ಗಡ್ಡಿ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಎಚ್.ವಿ. ಮಾಡಳ್ಳಿ, ರಾವಸಾಹೇಬ ಬಿ. ದೇಶಪಾಂಡೆ, ಶಿಕ್ಷಣ ರತ್ನ ಪುರಸ್ಕೃತ ಎಸ್.ಎಸ್. ಹರ್ಲಾಪುರ ಭಾಗವಹಿಸಲಿದ್ದಾರೆ. ಇಂದ್ರಮ್ಮ ಪಾಂಡಪ್ಪ ದ್ಯಾವನೂರು, ಬಸಟ್ಟೆಪ್ಪ ಪರಪ್ಪ ಸುರಕೋಡ ಅವರಿಗೆ ಗೌರವ ಸನ್ಮಾನ ಜರುಗಲಿದೆ. ವಾಸಣ್ಣ ವೆಂಕಪ್ಪ ಹೆಬಸೂರು, ಏಕನಾಥ ಡಿ. ಆಕಳವಾಡಿ, ವಿನಾಯಕ ವೈದ್ಯ ಅವರಿಗೆ ಸನ್ಮಾನ ಹಾಗೂ ಪುರಸಭೆ ನೂತನ ಸದಸ್ಯರಿಗೂ ಆಯೋಜಕರು ಸನ್ಮಾನ ಮಾಡಲಿದ್ದಾರೆ. ಆಡಳಿತ ಮಂಡಳಿ ಸದಸ್ಯ ಅರ್ಜುನ ಎನ್. ಕಲಾಲ ಸರ್ವರಿಗೂ ಭೋಜನೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು, ಶಿಕ್ಷಣ ಸಂಸ್ಥೆ ಆಡಳಿತ, ಶಿಕ್ಷಕರ ವರ್ಗ, ಆರ್ಯ ವೈಶ್ಯ ಸಮಾಜ, ವಿಪ್ರ ಸಮಾಜದವರು ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಸರ್ವರಿಗೂ ವಿನಂತಿಸಿದ್ದಾರೆ.
ಬೈಕ್ ಕಳ್ಳತನ
ಹುಬ್ಬಳ್ಳಿ: ಇಲ್ಲಿನ ಆನಂದ ನಗರ ಬಡಾವಣೆಯ ಮನೆಯೊಂದರ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆನಂದ ನಗರದ ಸೋಮಶೇಖರ ಕರಿಯಪ್ಪ ಮೂಕನ್ನವರ ಅವರು ತಮ್ಮ ಮನೆ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಹುಬ್ಬಳ್ಳಿ: ಕಾಯಿಲೆಯಿಂದ ಬಳಲುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬ ಇಲ್ಲಿನ ಹಳೇ ಬಸ್ ನಿಲ್ದಾಣದ ಹತ್ತಿರದ ಫುಟ್ಪಾಥ್ ಮೇಲೆ ಸಾವನ್ನಪ್ಪಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಯಿಲೆಯಿಂದ ನರಳುತ್ತಿದ್ದ ಅಪರಿಚಿತ ವ್ಯಕ್ತಿ ಮದ್ಯ ಸೇವನೆ ಮಾಡಿ ಫುಟ್ಪಾತ್ನಲ್ಲಿ ಕುಳಿತಿದ್ದ ವೇಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮಹಾದೇವಪ್ಪ ನಿಧನ
ನವಲಗುಂದ: ಇಲ್ಲಿಯ ಸಿದ್ದಾಪುರ ಓಣಿಯ ನಿವಾಸಿ ಮಹಾದೇವಪ್ಪ ಬಸಪ್ಪ ಬಳ್ಳೊಳ್ಳಿ ಮಂಗಳವಾರ ಸಂಜೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಪತ್ನಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಬುಧವಾರ ಬೆಳಗ್ಗೆ ನವಲಗುಂದದಲ್ಲಿ ನಡೆಯಲಿದೆ.