ಕೌನ್ಸೆಲಿಂಗ್ ವರ್ಗಾವಣೆ
ಧಾರವಾಡ: ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಲ್ಲಿಯ ಡಯಟ್ ಆವರಣದಲ್ಲಿರುವ ಡೆಪ್ಯೂಟಿ ಚನ್ನಬಸಪ್ಪ ಸಮಾವೇಶ ಭವನದಲ್ಲಿ ಆರಂಭವಾದ ಪ್ರಸಕ್ತ ಸಾಲಿನ ಶಿಕ್ಷಕರ ಪರಸ್ಪರ ವರ್ಗಾವಣೆಯ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ 241 ಶಿಕ್ಷಕರು ಪಾಲ್ಗೊಂಡಿದ್ದರು.
3 ಜೋಡಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ 238 ಜೋಡಿ ಪ್ರಾಥಮಿಕ ಶಾಲಾ ಶಿಕ್ಷಕರು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪಡೆದುಕೊಂಡರು. ಇಲಾಖೆಯ ಅಪರ ಆಯುಕ್ತ ಎ.ಎನ್. ಪಾಟೀಲ ಸಾಂಕೇತಿಕವಾಗಿ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಉದ್ಘಾಟಿಸಿ, ನಿಯಮಾನುಸಾರ ಎಲ್ಲ ವರ್ಗವಣೆಗಳನ್ನು ಕೌನ್ಸೆಲಿಂಗ್ ಮೂಲಕ ಜರುಗಿಸಲಾಗುತ್ತಿದ್ದು, ವರ್ಗಾವಣೆ ಬಯಸಿರುವ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಕ-ಶಿಕ್ಷಕಿಯರು ಪಾರದರ್ಶಕವಾಗಿ ನಡೆಯುವ ಈ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಗೆ ಸಹಕರಿಸಬೇಕೆಂದರು. ಇಲಾಖೆಯ ನಿರ್ದೇಶಕ ಜಿ.ಎಸ್. ನಾಯ್ಕ, ಸಹ ನಿರ್ದೇಶಕ ಸಿದ್ದರಾಮ ಮನಹಳ್ಳಿ, ಉಪನಿರ್ದೇಶಕ ಕೆ.ಎಸ್. ಮಣಿ, ಹಿರಿಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಕೌನ್ಸೆಲಿಂಗ್ ಇ-ವಿಭಾಗದ ಬಿ.ಎಂ. ಬಡಿಗೇರ ಇದ್ದರು. ಜು. 22ರ ವರೆಗೆ ನಿರಂತರವಾಗಿ ಈ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಜರುಗಲಿದೆ. ಕಂದಾಯ ಜಿಲ್ಲೆಗಳಾದ ಬಿಜಾಪೂರ, ಬಾಗಲಕೋಟ, ಬೆಳಗಾವಿ, ಕಾರವಾರ, ಗದಗ ಹಾಗೂ ಧಾರವಾಡ, ಶೈಕ್ಷಣಿಕ ಜಿಲ್ಲೆಗಳಾದ ಶಿರಸಿ ಮತ್ತು ಚಿಕ್ಕೋಡಿ ಜಿಲ್ಲೆಗಳ ವ್ಯಾಪ್ತಿಯ ಶಿಕ್ಷಕ-ಶಿಕ್ಷಕಿಯರು ಈ ವರ್ಗಾವಣೆಯಲ್ಲಿ ಭಾಗವಹಿಸಿದ್ದರು.