ಪೇದೆ ಕೈಗೆ ಡಿಜಿಟಲ್ ಕ್ಯಾಮೆರಾ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 2
ಸಂಚಾರಿ ನಿಯಮ ಉಲ್ಲಂಘಿಸುವವರೇ ಎಚ್ಚರ...!
ನೀವು ಟ್ರಾಫಿಕ್ ಸಿಗ್ನಲ್ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಂಡರೂ ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲಾಗದು. ಕಾರಣ, ಪೊಲೀಸರು ನಿಯಮ ಉಲ್ಲಂಘಿಸಿ ಸಾಗುವ ವಾಹನದ ಫೋಟೋ ಕ್ಲಿಕ್ಕಿಸಲಿದ್ದಾರೆ. ಆ ಬಳಿಕ ಇ-ಚಲನ್ ಮುಖೇನ ದಂಡ ಪಾವತಿ ಮಾಡುವಂತೆ ಸೂಚಿಸಿರುವ ಅಂತರ್ದೇಶಿ ಪತ್ರವನ್ನು ನಿಮ್ಮ ಮನೆಗೆ ರವಾನಿಸಲಿದ್ದಾರೆ.
ಹೌದು. ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಮಹಾನಗರ ಪೊಲೀಸ್ ಇಲಾಖೆ ಬೆಂಗಳೂರನ್ನು ಮಾದರಿಯಾಗಿ ತೆಗೆದುಕೊಂಡಿದೆ. ಹುಬ್ಬಳ್ಳಿ-ಧಾರವಾಡದ ಬಹುತೇಕ ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಸಿಗ್ನಲ್ ನಿಯಮ ಉಲ್ಲಂಘಿಸುವವರ ಫೋಟೋ ಈ ಕ್ಯಾಮೆರಾದಲ್ಲಿ ದಾಖಲಾಗುತ್ತಿದೆ. ನಿಯಮ ಉಲ್ಲಂಘಿಸುವವರ ಮನೆಗೆ ಇ-ಚಲನ್ ಮೂಲಕ ದಂಡ ಪಾವತಿಯ ಸೂಚನೆ ಬರುತ್ತಿದೆ.
ಸಿಸಿ ಕ್ಯಾಮೆರಾ ಅಳವಡಿಸಿದ್ದಾಗಿಯೂ ಅನೇಕ ವಾಹನ ಸವಾರರು ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯುಂಟು. ಇನ್ನು ಸಿಸಿ ಕ್ಯಾಮೆರಾಗಳಿಲ್ಲದ ಸ್ಥಳದಲ್ಲಂತೂ ವಾಹನ ಸವಾರರು ಹೆಲ್ಮೆಟ್ ರಹಿತವಾಗಿ, ನೋ ಎಂಟ್ರಿಗಳಲ್ಲಿ ನುಗ್ಗುವ ಮೂಲಕ ನಿಯಮ ಉಲ್ಲಂಘಿಸಿದ್ದು ಗಮನಕ್ಕೆ ಬರುವುದೇ ಇಲ್ಲ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಿಯಮ ಉಲ್ಲಂಘಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಡಿಜಿಟಲ್ ಕ್ಯಾಮೆರಾ: ಸಂಚಾರಿ ಪೇದೆಗಳ ಕೈಗೆ ಇಲಾಖೆ ಡಿಜಿಟಲ್ ಕ್ಯಾಮೆರಾ ನೀಡಲಿದೆ. ಈಗಾಗಲೇ ನಾಲ್ಕು ಸಂಚಾರಿ ಠಾಣೆಯ ಪೇದೆಗಳಿಗೆ ಪ್ರಾಯೋಗಿಕವಾಗಿ 20 ಡಿಜಿಟಲ್ ಕ್ಯಾಮೆರಾ ನೀಡಿದೆ. ಟ್ರಾಫಿಕ್ ನಿಯಂತ್ರಿಸುವ ಪೊಲೀಸ್ ಪೇದೆಗಳು ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ಕ್ಲಿಕ್ಕಿಸಲಿದ್ದಾರೆ. ಸದ್ಯಕ್ಕೆ ಈ ಪ್ರಯೋಗ ನಡೆಯಲಿದ್ದು, ತದನಂತರ ಸಂಚಾರಿ ವಿಭಾಗ ಪೊಲೀಸರಿಗೆ ಅಗತ್ಯವಿರುವಷ್ಟು ಡಿಜಿಟಲ್ ಕ್ಯಾಮೆರಾ ಒದಗಿಸಲಿದೆ.
ಹೀಗಿದೆ ಕಾರ್ಯ: ನಿಯಮ ಉಲ್ಲಂಘಿಸುವ ವಾಹನಗಳ ಫೋಟೊ ಕ್ಲಿಕ್ಕಿಸಿಕೊಳ್ಳುವ ಪೊಲೀಸ್ ಪೇದೆಗಳು ಅದೇ ದಿನ ರಾತ್ರಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಕಂಟ್ರೋಲ್ ರೂಂಗೆ ತೆರಳಿ ಫೋಟೋ ಡೌನ್ಲೋಡ್ ಮಾಡಲಿದ್ದಾರೆ. ಆ ಬಳಿಕ ವಾಹನದ ಮಾಲೀಕರ ಹೆಸರಿಗೆ ಇ-ಚಲನ್ ಮೂಲಕ ದಂಡದ ನೋಟಿಸ್ ಮನೆಗೆ ರವಾನಿಸಲಿದ್ದಾರೆ.
ವಾದ-ವಿವಾದಕ್ಕೆ ಆಸ್ಪದವಿಲ್ಲ: ಈ ಹೊಸ ಯೋಜನೆ ಪೊಲೀಸರ ಪಾಲಿಗೆ ಅನುಕೂಲ ಸಿಂಧುವಾಗಿದೆ. ಏಕೆಂದರೆ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರು ಅದೆಷ್ಟೋ ಸಂದರ್ಭದಲ್ಲಿ ಪೊಲೀಸರೊಂದಿಗೆ ವಿವಾದಕ್ಕಿಳಿಯುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ನಿಯಮ ಉಲ್ಲಂಘಿಸಿ ತಪ್ಪು ಮಾಡಿದ್ದಲ್ಲದೇ ರಾಜಕೀಯ ಪ್ರಭಾವವೋ, ಹಿರಿಯ ಅಧಿಕಾರಿಗಳ ಹೆಸರು ಹೇಳಿಕೊಂಡು ತಮ್ಮನ್ನು ಪೊಲೀಸ್ ಪೇದೆಗಳೊಂದಿಗೆ ವಾಹನ ಸವಾರರು ಜಗಳ ಕಾದಿರುವ ಸಾಕಷ್ಟು ಉದಾಹರಣೆಗಳಿವೆ. ಅಲ್ಲದೇ, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಪ್ಪು ಮಾಡಿದವರನ್ನು ಬಿಟ್ಟು ಕಳುಹಿಸಿದ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುತ್ತವೆ. ಆದರೆ ಫೋಟೋ ಕ್ಲಿಕ್ಕಿಸಿ ಇ-ಚಲನ್ ಮೂಲಕ ದಂಡ ವಿಧಿಸುವುದರಿಂದ ವಾದ-ವಿವಾದಕ್ಕೆ ಆಸ್ಪದವಿರುವುದಿಲ್ಲ. ತಪ್ಪು ಮಾಡಿದ ಎಲ್ಲರ ಮನೆಗೂ ಸದ್ದು ಗದ್ದಲವಿಲ್ಲದೆ ದಂಡ ಪಾವತಿ ಮಾಡುವಂತೆ ನೋಟಿಸ್ ಬರುವುದು ಗ್ಯಾರಂಟಿ.
ನಿಯಮ ಪಾಲಿಸಲಿ
ಮಹಾನಗರದ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ಹದ್ದಿನಕಣ್ಣು ನೆಟ್ಟಿರುವುದರಿಂದ ನಿಯಮ ಉಲ್ಲಂಘಿಸಿ ತಪ್ಪಿಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ವಾಹನ ಸವಾರರು ನಿಯಮ ಪಾಲಿಸುವ ಮೂಲಕ ಸಂಚಾರಿ ವ್ಯವಸ್ಥೆ ಸುಗಮಗೊಳಿಸಲು ಸಾಥ್ ನೀಡುವುದೇ ಒಳಿತು. ಸಂಚಾರಿ ನಿಯಮ ಬಿಗಿಗೊಳಿಸುವ ನಿಟ್ಟಿನಲ್ಲಿ ಪೇದೆಗಳಿಗೆ ಡಿಜಿಟಲ್ ಕ್ಯಾಮೆರಾ ನೀಡಲಾಗುತ್ತಿದೆ. ಪ್ರಸ್ತುತ ಪ್ರಾಯೋಗಿಕವಾಗಿ ಕ್ಯಾಮೆರಾ ನೀಡಲಾಗಿದ್ದು, ಹಂತ ಹಂತವಾಗಿ ಇದನ್ನು ವಿಸ್ತರಿಸಲಾಗುವುದು. ಹೊಸ ಯೋಜನೆಯಿಂದ ನಿಯಮ ಉಲ್ಲಂಘಿಸುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತಾಗಲಿದೆ.
- ಶ್ರೀನಾಥ ಜೋಶಿ, ಸಂಚಾರಿ ಡಿಸಿಪಿ
-ಪ್ರಕಾಶ ಎಸ್. ಶೇಟ್