ಬಡವರ ಹೊಟ್ಟೆಗೆ ಕಿಚ್ಚಿಟ್ಟ ತರಕಾರಿ ದರ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 2
ದಿನದಿಂದ ದಿನಕ್ಕೆ ಏರುತ್ತಿರುವ ತರಕಾರಿ ದರ ಬಡ ಹಾಗೂ ಮಧ್ಯಮ ವರ್ಗದ ಹೊಟ್ಟೆಗೆ ಕಿಚ್ಚಿಟ್ಟಿದೆ.
ಕಳೆದ ಹಲವು ತಿಂಗಳಿನಿಂದ ತರಕಾರಿ ದರ ಹೆಚ್ಚುತ್ತಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಸದ್ಯ ಮಳೆ ಸುರಿಯುತ್ತಿದ್ದರೂ ತರಕಾರಿ ದರ ಮಾತ್ರ ಇಳಿಯುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ. ಒಂದು ತಿಂಗಳ ಹಿಂದಷ್ಟೇ ಪ್ರತಿ ಒಂದು ಕೆಜೆ ಉಳ್ಳಾಗಡ್ಡಿ ರು. 12 ರಿಂದ 15ಕ್ಕೆ ಸಿಗುತ್ತಿತ್ತು. ಇದೀಗ ಪ್ರತಿ ಒಂದು ಕೆಜಿ ಉಳ್ಳಾಗಡ್ಡಿಯ ದರ ರು. 30 ದಾಟಿದೆ.
ಹೆಚ್ಚುತ್ತಿರುವ ಸಾರಿಗೆ ವೆಚ್ಚ ತರಕಾರಿ ದರ ಏರಿಕೆಗೆ ಒಂದು ಕಾರಣವಾದರೆ, ಮಧ್ಯವರ್ತಿಗಳ ವ್ಯವಹಾರವೂ ದರ ಏರಿಕೆಗೆ ಮತ್ತೊಂದು ಕಾರಣ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ತರಕಾರಿ ತರಬೇಕಾದರೆ ರೈತರು ಪ್ರತಿ ಒಂದು ಬುಟ್ಟಿಗೆ ರು. 10 ರಿಂದ 20 ನೀಡಲೇಬೇಕು.
ಮಾರುಕಟ್ಟೆಗೆ ಬರುವ ತರಕಾರಿ ತುಂಬಿದ ಬುಟ್ಟಿಗಳನ್ನು ಇಳಿಸಲು ಹಮಾಲಿಗಳಿಗೆ ಹಣ ನೀಡುವುದಲ್ಲದೇ, ದಲ್ಲಾಳಿಗಳಿಗೂ ಕಮಿಶನ್ ತೆರಬೇಕು. ಇಷ್ಟೆಲ್ಲವಾದರೂ ರೈತರಿಗೆ ತಾವು ಬೆಳೆದ ತರಕಾರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಆದರೂ ಮಾರುಕಟ್ಟೆಯಲ್ಲಿ ಮಾತ್ರ ದರ ಏರುತ್ತಲೇ ಇದೆ.
ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ತರಕಾರಿ ನೀರಾವರಿ ಸೌಲಭ್ಯ ಇರುವ ರೈತರು ಬೆಳೆದದ್ದು. ನದಿ ಅಥವಾ ನೀರು ಹರಿಯುವ ರಸ್ತೆ ಪಕ್ಕದ ಒಣಬೇಸಾಯ ವ್ಯವಸ್ಥೆಯುಳ್ಳ ರೈತರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ತರಕಾರಿ ಬೆಳೆದಿಲ್ಲ. ಮಳೆಯನ್ನೇ ನೆಚ್ಚಿರುವ ರೈತರು, ಮಳೆಗಾಲದಲ್ಲಷ್ಟೇ ತರಕಾರಿ ಬೆಳೆಯುತ್ತಾರೆ. ಸದ್ಯ ಒಣಬೇಸಾಯ ವ್ಯವಸ್ಥೆ ಹೊಂದಿರುವ ರೈತರೂ ತರಕಾರಿ ಬೀಜ ನೆಡುತ್ತಿದ್ದು, ಮುಂದಿನ ಎರಡ್ಮೂರು ತಿಂಗಳ ನಂತರವಷ್ಟೇ ಹೆಚ್ಚುವರಿ ತರಕಾರಿ ಮಾರುಕಟ್ಟೆಗೆ ಬರಲಿದೆ.
ತರಕಾರಿ ಸಂಗ್ರಹಿಸಿಡುವ ಗೋದಾಮುಗಳ ಕೊರತೆ ಇರುವುದರಿಂದ ಹೆಚ್ಚುವರಿ ಬೆಳೆಯನ್ನು ಹೊರ ರಾಜ್ಯಗಳಿಗೆ ರವಾನಿಸಲಾಗುತ್ತಿದೆ. ಹೆಚ್ಚುವರಿ ತರಕಾರಿ ಸಂಗ್ರಹಿಸಿಡುವ ಗೋದಾಮುಗಳನ್ನು ನಿರ್ಮಿಸಿದ್ದೇ ಆದಲ್ಲಿ ಅವಶ್ಯಕತೆಗೆ ತಕ್ಕಂತೆ ರೈತರು ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಬಹುದು.
ಮದ್ಯವರ್ತಿಗಳ ಹಾವಳಿ ತಪ್ಪಿಸುವುದಕ್ಕಾಗಿ ರೈತರು ಮತ್ತು ಗ್ರಾಹಕರ ಮಧ್ಯೆ ನೇರ ವ್ಯಾಪಾರ ಮಾಡಲು ಅನುಕೂಲವಾಗುವುದಕ್ಕಾಗಿ ಹುಬ್ಬಳ್ಳಿಯಲ್ಲಿ ರೈತರ ಸಂತೆ ಸ್ಥಾಪಿಸಲಾಯಿತಾದರೂ, ನಿರೀಕ್ಷಿತ ಸಾಧನೆ ಮಾಡಲಾಗದೇ ಎರಡೇ ವರ್ಷಗಳಲ್ಲಿ ಈ ಸಂತೆ ಮುಚ್ಚಿ ಹೋಯಿತು. ಸದ್ಯ ಹಾಪ್ಕಾಮ್ಸ್ ನಿರ್ಮಾಣಕ್ಕೆ ಜಾಗ ನೀಡುವಂತೆ ಧಾರವಾಡ ಜಿಲ್ಲಾ ತೋಟಗಾರಿಕಾ ಇಲಾಖೆ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಹಾಪ್ಕಾಮ್ಸ್ ನಿರ್ಮಾಣದಿಂದ ರೈತರು ನಿಗದಿತ ಸ್ಥಳದಲ್ಲಿ ತರಕಾರಿ ಮಾರಾಟ ಮಾಡಬಹುದು. ಇದರಿಂದ ಮದ್ಯವರ್ತಿಗಳ ಹಾವಳಿ ತಪ್ಪುವ ಜತೆಗೆ ಉತ್ತಮ ಬೆಲೆ ದೊರೆಯುತ್ತದೆ. ಗ್ರಾಹಕರೂ ಹೆಚ್ಚಿನ ಬೆಲೆ ತೆತ್ತು ತರಕಾರಿ ಕೊಳ್ಳುವುದು ತಪ್ಪುತ್ತದೆ.
ತರಕಾರಿ ಬೆಲೆ ಪ್ರತಿ ಕೆಜಿಗೆ
ಉಳ್ಳಾಗಡ್ಡಿ 25
ಆಲೂಗಡ್ಡೆ 30
ಚವಳೆಕಾಯಿ 40
ಸವತೆಕಾಯಿ 40
ಮೆಣಸಿನಕಾಯಿ 50
ಹೀರೆಕಾಯಿ 40
ಬದನೆಕಾಯಿ 50
ಟೊಮೆಟೋ 60
ಬೀನ್ಸ್ 40
-ವಿಶೇಷ ವರದಿ