ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬೆಳೆಗೆ ಬೇಕಾದ ಸಂಪನ್ಮೂಲ ಪ್ರಕೃತಿಯಲ್ಲಿದೆ

Lingaraj Badiger
Updated On : 3 Jul 2013, 11:58 am

ಧಾರವಾಡ: ಬೆಳೆ ಬೆಳೆಯಲು ಬೇಕಾದ ಎಲ್ಲ ಸಂಪನ್ಮೂಲಗಳನ್ನು ಸೃಷ್ಟಿ ತನ್ನಲ್ಲಿ ಹೊಂದಿದ್ದು, ಯಾವುದೇ ರಾಸಾಯನಿಕ ಸಿಂಪಡಣೆಯಿಂದ ಕೇವಲ ವ್ಯತಿರಿಕ್ತ ದುಷ್ಪರಿಣಾಮಗಳು ಉಂಟಾಗುವುದೇ ವಿನಃ ಶಾಶ್ವತ ಕೃಷಿ ಪದ್ಧತಿ ಅಲ್ಲ ಎಂದು ಕೃಷಿ ವಿಶ್ವವಿದ್ಯಾಲಯದ ಸಾವಯವ ಕೃಷಿ ಕೇಂದ್ರದ ಮುಖ್ಯಸ್ಥ ಡಾ.ಎಚ್.ಬಿ. ಬಬಲಾದ ಇಲ್ಲಿ ಹೇಳಿದರು.
ಗ್ರೀನ್ ಆರ್ಗಾನಿಕ್ಸ್ ಸಂಸ್ಥೆಯು ತಾಲೂಕಿನ ನರೇಂದ್ರದ ರೈತ ಮಂಜುನಾಥ ದಾಬಡಿ ಅವರ ಹೊಲದಲ್ಲಿ ಹಮ್ಮಿಕೊಂಡಿದ್ದ ಸಾವಯವ ಕೃಷಿ ಜಾಗೃತಿ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿಯೇ ಅತಿಹೆಚ್ಚು ಕೃಷಿ ಬೆಳೆಯನ್ನು ಬೆಳೆಯುತ್ತಿದ್ದ ಪಂಜಾಬ್‌ನಲ್ಲಿ ಈಗ ರಾಸಾಯನಿಕ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮವನ್ನು ಕಾಣಬಹುದು. ಪ್ರತಿನಿತ್ಯ ಪಂಜಾಬಿನಲ್ಲಿ ಸರಾಸರಿ 36 ಹೊಸ ಕ್ಯಾನ್ಸರ್ ರೋಗಿಗಳು ಕಂಡು ಬರುತ್ತಿದ್ದು, ಇದಕ್ಕೆ ಇಷ್ಟು ದಿನ ಅಲ್ಲಿಯ ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಸಿಂಪಡಣೆ ಪರಿಣಾಮವೇ ಕಾರಣ ಎಂದು ಸಂಶೋಧನೆಗಳು ದೃಢಪಡಿಸಿವೆ ಎಂದರು.
ಕ್ಷೇತ್ರೋತ್ಸವವೇ ಸಾಕ್ಷಿ: ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಕೆ. ಪಾಟೀಲ ಮಾತನಾಡಿ, ರಾಸಾಯನಿಕ ಕೀಟನಾಶಕಗಳು ಎರಡನೇ ಮಹಾಯುದ್ಧದ ನಂತರ ಕಂಡುಬಂದಂತಹ ಪದಾರ್ಥಗಳಾಗಿದ್ದು, ಅವುಗಳಿಂದ ಆಗುವ ಉಪಯೋಗಕ್ಕಿಂತ ದುಷ್ಪರಿಣಾಮಗಳೇ ಹೆಚ್ಚು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರೀನ್ ಆರ್ಗಾನಿಕ್ಸ್ ಸಂಸ್ಥೆಯ ನಿರ್ದೇಶಕ ಸದಾನಂದ ಕರಿಯಪ್ಪನವರ, ಸಾವಯವ ಉತ್ಪನ್ನಗಳಿಂದ ಅತೀ ಹೆಚ್ಚಿನ ಫಸಲನ್ನು ಪಡೆದು, ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಸಾಧ್ಯ ಎಂಬುದಕ್ಕೆ ಈ ಕ್ಷೇತ್ರೋತ್ಸವವೇ ಸಾಕ್ಷಿ ಎಂದರು.
ಇದಾದ ನಂತರ ಗ್ರೀನ್ ಆರ್ಗಾನಿಕ್ಸ್ ಉತ್ಪನ್ನಗಳಿಂದ ಅತೀ ಉತ್ತಮ ಫಸಲು ಪಡೆದ ಕೃಷಿಕರಾದ ಮಂಜುನಾಥ ದಾಬಡಿ ಹಾಗೂ ಪ್ರಕಾಶ ಮುತ್ತಗಿ ಅನಿಸಿಕೆಗಳನ್ನು ಹಂಚಿಕೊಂಡರು. ಮಾಜಿ ಮೇಯರ್ ಸುನೀಲ ಪಾಟೀಲ, ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಡಿ.ಎನ್. ಯಲ್ಲಟ್ಟಿ, ಮುಮ್ಮಿಗಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪರ್ವತಪ್ಪ ಹಾರೋಬಿಡಿ ಹಾಗೂ ಗ್ರೀನ್ ಆರ್ಗಾನಿಕ್ಸ್ ಧಾರವಾಡ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ಶೆಟ್ಟಿ ಇದ್ದರು.
ಗ್ರೀನ್ ಆರ್ಮಿ ತಂಡದ ಅಧ್ಯಕ್ಷ ಪ್ರಕಾಶ ಗೌಡರ ನಿರೂಪಿಸಿದರು. ಖಜಾಂಚಿ ನಂದೀಶ ಕಡಕೋಳ ವಂದಿಸಿದರು.
ನಂತರ ಸಾವಯವ ಪದ್ಧತಿ ಮೂಲಕ ಬೆಳೆದ ಸೌತೆಕಾಯಿ ಬೆಳೆಯ ಉತ್ತಮ ಫಸಲಿನ ವಿವರವನ್ನು ರೈತರಿಗೆ ಮನವರಿಕೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement