ಮಳೆ ಕೊರತೆ: ರೈತ ಕಂಗಾಲು
ಕನ್ನಡಪ್ರಭ ವಾರ್ತೆ, ನರಗುಂದ, ಜು. 2
ತಾಲೂಕಿನಲ್ಲಿ 2 ವರ್ಷಗಳ ಬರದಿಂದ ಈ ಭಾಗದ ರೈತರು ಚೇತರಿಕೆ ಕಂಡಿಲ್ಲ. ಈ ಸಂದರ್ಭದಲ್ಲಿಯೇ ಮತ್ತೆ 3ನೇ ವರ್ಷವೂ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಈ ಭಾಗದಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನರಗುಂದ ತಾಲೂಕಿನಲ್ಲಿನ ಜನರು ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದು, ಬಹುತೇಕ ಭಾಗ ಮಲಪ್ರಭಾ ಕಾಲುವೆಯ ನೀರಾವರಿ ಸೌಲಭ್ಯ ಹೊಂದಿದ್ದರೂ ಎರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಜಲಾಶಯ ಭರ್ತಿ ಯಾಗದೇ ಕಾಲುವೆಗೂ ನೀರು ಬರುತ್ತಿಲ್ಲ. ಈ ಹಿಂದಿನ ಕಹಿ ದಿನಗಳನ್ನು ಮರೆತು, ಈ ವರ್ಷವಾದರೂ ಉತ್ತಮ ಮಳೆ ಆಗಬಹುದೆಂಬ ನಿರೀಕ್ಷೆಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರು. ಅಂದುಕೊಂಡಂತೆಯೇ ಮುಂಗಾರು ಮಳೆ ಮೊದಲು ಆರ್ಭಟಿಸಿತ್ತು. ಇದನ್ನೇ ನಂಬಿ ಇಲ್ಲಿನ ರೈತರು ಸಾಲ ಸೋಲ ಮಾಡಿ ತಮ್ಮ ಜಮೀನುಗಳನ್ನು ಉತ್ತಮವಾಗಿ ಹದಗೊಳಿಸಿ ಬಿತ್ತಿದ್ದರು. ಆದರೆ, ಬಿತ್ತನೆ ಮಾಡಿ ತಿಂಗಳಾಗುತ್ತಾ ಬಂದರೂ ಅಂದು ಸುರಿದು ಹೋದ ಮಳೆ ಮತ್ತೆ ಬರದೇ ಇರುವುದು ಇಲ್ಲಿನ ರೈತರಲ್ಲಿ ನೋವುಂಟು ಮಾಡಿದೆ. ಮಳೆಗಾಗಿ ನಿತ್ಯ ಚಿಂತೆ ಮಾಡುತ್ತ ಬರಿ ಮೋಡಗಳನ್ನೇ ನೋಡುತ್ತಿದ್ದಾರೆ. ಆದರೆ, ಮಳೆರಾಯ ಮಾತ್ರ ಕರುಣೆ ತೋರುತ್ತಿಲ್ಲ.
ಫಲವತ್ತಾದ ಜಮೀನು: ತಾಲೂಕಿನಲ್ಲಿ ಫಲವತ್ತಾದ ಜಮೀನುಗಳಿದ್ದು, ನೀರಾವರಿಗೆ ಹೊಂದಿಕೊಂಡಿರುವ 31,225 ಹೆಕ್ಟೇರ್ ಜಮೀನಗಳು, ಒಣ ಬೇಸಾಯದ 10,168 ಹೆಕ್ಟೇರ್ ಸೇರಿದಂತೆ ಒಟ್ಟು 41,393 ಹೆಕ್ಟೇರ್ ಕೃಷಿ ಭೂಮಿ ಇದೆ. ಇದರಲ್ಲಿ 67 ಹೆಕ್ಟೇರ್ ಬಿಟಿ ಹತ್ತಿ, 1,865 ಹೆಕ್ಟೇರ್ ಗೋವಿನಜೋಳ, 90 ಹೆಕ್ಟೇರ್ ತೊಗರಿ, 5942 ಹೆಕ್ಟೇರ್ ಹೆಸರು, 15 ಹೆಕ್ಟೇರ್ ಶೇಂಗಾ, ಒಟ್ಟು 8,884 ಹೆಕ್ಟೇರ್ ಪ್ರದೇಶದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆಯಾಗದೇ ಇರುವುದರಿಂದ ಈ ಪ್ರದೇಶದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಇಂದು ಬಾಡಿ ಹೋಗುವ ಹಂತಕ್ಕೆ ತಲುಪಿದ್ದು, ಈ ಭಾಗದ ರೈತ ಸಮುದಾಯವನ್ನು ತೀವ್ರ ಸಂಕಷ್ಟಕ್ಕೀಡುಮಾಡಿದೆ.
ಕಳೆದ ವರ್ಷದಂತೆಯೇ ಈ ವರ್ಷವೂ ಮಳೆಯಾಗದೇ ನಮ್ಮನ್ನೆಲ್ಲ ತೊಂದರೆಗೀಡು ಮಾಡಿದೆ. ಪ್ರಾರಂಭದಲ್ಲಿ ಅಬ್ಬರಿಸಿದ್ದ ರೋಹಿಣಿ ಮಳೆ ನಂಬಿ ನಾವೆಲ್ಲ ಬಿತ್ತನೆ ಮಾಡಿದ್ದೇವೆ. ಒಂದುವರೆ ತಿಂಗಳಿಂದ ಮಳೆಯೇ ಆಗುತ್ತಿಲ್ಲ. ಇದು ನಮಗೆ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ಉಂಟು ಮಾಡುವ ಸ್ಥಿತಿ ಕಂಡು ಬರುತ್ತಿದೆ. ಒಂದು ವಾರದಲ್ಲಿ ಮಳೆಯಾಗದೇ ಇದ್ದಲ್ಲಿ, ಬೆಳೆ ಸಂಪೂರ್ಣ ಒಣಗಿ ಹೋಗುತ್ತವೆ. ದೇವರು ನಮ್ಮ ಮೇಲೆ ಕೃಪೆ ತೋರಬೇಕು.
ಟ ಚಂದ್ರಗೌಡ ಪಾಟೀಲ, ಮುತ್ತನಗೌಡ ಬೆಳವಟಗಿ
(ತಾಲೂಕಿನ ರೈತರು)
ಎರಡು ವರ್ಷ ಬರಗಾಲದಿಂದ ಈ ಭಾಗದ ರೈತರು ತೀವ್ರ ತೊಂದರೆಯಲ್ಲಿ ಸಿಲುಕಿದ್ದರು. ಈ ವರ್ಷ ನಾವು ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿದ್ದೇವೆ. ಆದರೆ, ಮುಂಗಾರು ಮಳೆ ಈ ಪ್ರದೇಶದಲ್ಲಿ ಹೆಚ್ಚು ಬಿಳದೇ ಇರುವುದರಿಂದ ರೈತನು ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗುತ್ತಿವೆ. ಈ ಕುರಿತು ಸಂಬಂಧಿಸಿದ ಮೇಲಧಿಕಾರಿಗಳಿಗೆ ತಿಳಿಸಲಾಗಿದೆ. ಈ ವರ್ಷ ನಾವು ಮುಂಗಾರು ಬಿತ್ತನೆಯಲ್ಲಿ 29.500 ಹೆಕ್ಟೇರ್ ಗುರಿ ಹೊಂದಿದ್ದೇವೆ. ಆದರೆ, ಸಂಪೂರ್ಣವಾಗಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಈಗ ಕೇವಲ 8,884 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
-ಎಸ್.ಎನ್. ಮಂಜುನಾಥ
(ತಾಲೂಕು ಕೃಷಿ ಅಧಿಕಾರಿ)
-ಎಸ್.ಜಿ. ತೆಗ್ಗಿನಮನಿ