ರಸ್ತೆ ನಿರ್ಮಾಣ: ಪರಿಹಾರಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಅಣ್ಣಿಗೇರಿ, ಜು. 2
ದಕ್ಷಿಣ ಭಾಗದ ಕಡೆಯಿರುವ 4 ಎಕರೆಯಷ್ಟು ಜಮೀನನ್ನು ಲೋಕೋಪಯೋಗಿ ಇಲಾಖೆ (ನವಲಗುಂದ) ಅತಿಕ್ರಮಣ ಮಾಡಿ ಹಳ್ಳಿಕೇರಿ-ಬಸಾಪುರ ಕೂಡು ರಸ್ತೆ ನಿರ್ಮಿಸಿದೆ. ಸ್ವಾಧೀನ ಮಾಡಿಕೊಂಡ 4 ಎಕರೆಯಷ್ಟು ಜಮೀನು ಕಳೆದುಕೊಂಡಿದ್ದರಿಂದ ಪ್ರತಿ ಎಕರೆಗೆ ರೈತರಿಗೆ ರು. 8 ಲಕ್ಷ ಪರಿಹಾರ ದೊರಕಿಸಿಕೊಡುವಂತೆ ನ್ಯಾಯವಾದಿ ಬಿ.ಎಸ್. ದುಂದೂರ ಒತ್ತಾಯಿಸಿದ್ದಾರೆ.
ಅಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಹಳ್ಳಿಕೇರಿ-ಬಸಾಪುರ ವರೆಗಿನ ಕೂಡು ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಹೊಲದ ಮಾಲೀಕರಿಗೆ ನೋಟಿಸ್ ನೀಡದೆ ಏಕಾಏಕಿ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿತ್ತು. ಪ್ರಸ್ತುತ ಕಾಮಗಾರಿಯಿಂದ ಆಳೆತ್ತರದ ಬದುವುಗಳು ನೆಲಸಮಗೊಂಡವು. ಬದುವುಗಳಲ್ಲಿ ಮಣ್ಣು ಕಡಿದು ರಸ್ತೆ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ.
ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ರೈತರ ಜಮೀನನ್ನು ತಕ್ಷಣವೇ ಅವರ ಕಬ್ಜಾಕೆ ಕೊಡಬೇಕು. ಒಂದೊಮ್ಮೆ ಅತಿಕ್ರಮಣ ಮಾಡಿದ ಜಮೀನು ಕೊಡಲು ಸಾಧ್ಯವಾಗದಿದ್ದರೆ ಈಗಿನ ಮಾರುಕಟ್ಟೆ ಬೆಲೆಗೆ ಅನುಸರಿಸಿ ಪ್ರತಿ ಎಕರೆಗೆ ರು. 8 ಲಕ್ಷ ಪರಿಹಾರ ದೊರಕಿಸಿಲು ಲೋಕೋಪಯೋಗಿ ಇಲಾಖೆ ಮುಂದಾಗಬೇಕು. ಇಲ್ಲವಾದರೆ ಲೋಕೋಪಯೋಗಿ ಇಲಾಖೆ ವಿರುದ್ಧ ಕಾನೂನು ಸಮರ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಶಾಸಕರಿಗೆ, ಜಿಲ್ಲಾ ಉಸ್ತವಾರಿ ಸಚಿವರಿಗೆ, ಲೋಕೋಪಯೋಗಿ ಮುಖ್ಯ ಎಂಜಿನಿಯರರಿಗೆ, ಅಧೀಕ್ಷಕ ಅಭಿಯಂತರಿಗೆ, ಕಾರ್ಯನಿವಾರ್ಹಕ ಎಂಜಿನಿಯರರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.