ನೊಂದವರಿಗೆ ನ್ಯಾಯ, ಅತ್ಯಾಚಾರಿಗಳಿಗೆ ಶಿಕ್ಷೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 4
ದೆಹಲಿಯ ಯುವತಿಯೋರ್ವಳ ಮೇಲೆ ಡಿಸೆಂಬರ್ ತಿಂಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಪ್ರೇರಣೆ ಎನ್ನುವಂತೆ ಧಾರವಾಡ ಜಿಲ್ಲೆಯಲ್ಲಿ ಇತ್ತೀಚಿನ ನಾಲ್ಕೈದು ತಿಂಗಳಲ್ಲಿ ಸಾಲು ಸಾಲಾಗಿ ಅತ್ಯಾಚಾರಗಳು ನಡೆದವು.
ಜನವರಿ ತಿಂಗಳ ಒಂದೇ ವಾರದಲ್ಲಿ ಅಮ್ಮಿನಬಾವಿ ಹಾಗೂ ಚಿಕ್ಕಮಲ್ಲಿಗವಾಡದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಅಮಾನವೀಯ ಅತ್ಯಾಚಾರ ಪ್ರಕರಣಗಳಂತೂ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದವು. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಶೀಘ್ರ ನ್ಯಾಯದಾನದ ತೀರ್ಮಾನ ಮಾಡಿದ್ದು, ಮುಂದಾಗುವ ದೌರ್ಜನ್ಯದಂತಹ ಪ್ರಕರಣಗಳಿಗೆ ಈ ತೀರ್ಪುಗಳು ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.
ಯಾವವು?: ಜ. 5ರಂದು ಅಮ್ಮಿನಬಾವಿಯ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ತಾಲೂಕಿನ ಶಿಬಾರಗಟ್ಟಿಯ ಶಿವಪ್ಪ ಮಾದರನನ್ನು ಪೊಲೀಸರು ಅಂದೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಶೀಘ್ರ ತನಿಖೆ ಹಿನ್ನೆಲೆಯಲ್ಲಿ ಜೂನ್ 28ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು. 2012ರಲ್ಲಿ ಜಾರಿಗೆ ಬಂದ ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕಲಂ 6ರ ಪ್ರಕಾರ ನ್ಯಾಯಾಧೀಶರಾದ ಕೆ. ನಟರಾಜನ್ ಅವರು ಆರೋಪಿಗೆ ಜೀವಾವಧಿ ಶಿಕ್ಷೆ, ರು. 10 ಸಾವಿರ ದಂಡ, ಒಂದು ತಿಂಗಳೊಳಗೆ ದಂಡ ತುಂಬದಿದ್ದರೆ ಒಂದು ವರ್ಷ ಸಾದಾ ಸಜೆ ಹಾಗೂ ಬಾಲಕಿ ತಂದೆಗೆ ರು. 1 ಲಕ್ಷ ಪರಿಹಾರ ನೀಡಬೇಕೆಂದು ಆದೇಶಿಸಿದ್ದರು. ಈ ತೀರ್ಪು ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕಲಂ 6ರ ಪ್ರಕಾರ ಗರಿಷ್ಠ ಶಿಕ್ಷೆಯಾಗಿದೆ ಎಂಬುದು ಮಹತ್ವದ್ದು.
ಇನ್ನು, ಅಮ್ಮಿನಬಾವಿ ಅತ್ಯಾಚಾರ ಘಟನೆ ಬೆನ್ನಲ್ಲೇ ಜ. 13ರಂದು ಹಿರೇಮಲ್ಲಿಗವಾಡದ 2ನೇ ತರಗತಿ ಓದುತ್ತಿರುವ ಬಾಲಕಿ ಕಾವೇರಿ (ಹೆಸರು ಬದಲಾಯಿಸಿದೆ)ಗೆ ಚಾಕಲೇಟ್ ಕೊಡಿಸುತ್ತೇನೆಂದು ಹೇಳಿ ಹೊಲಕ್ಕೆ ಕರೆದೊಯ್ದ ಬಾಲಕಿಯ ಚಿಕ್ಕಪ್ಪ ಶಿವಪ್ಪ ಬಸಪ್ಪ ಕಲ್ಲೂರ (35) ಕುಡಿದ ಅಮಲಿನಲ್ಲಿ ತನ್ನ ಪೈಶಾಚಿಕ ಕೃತ್ಯ ಮೆರೆದಿದ್ದನು. ಇನ್ನೂ ಜಗತ್ತನ್ನೇ ಅರಿಯದ ಆ ಬಾಲಕಿಯ ತುಟಿ, ಕೈ, ಎದೆ, ಹೊಟ್ಟೆಯನ್ನು ಕಚ್ಚಿದ್ದ ಕ್ರೂರಿ ಶಿವಪ್ಪ ಮಾರನೆ ದಿನ ಗ್ರಾಮೀಣ ಠಾಣೆ ಪೊಲೀಸರ ಬಂಧಿಯಾಗಿದ್ದ.
ಶಿವ್ಯಾ, ನಮ್ಮ ಕಾಕನ ಮಗಾ ರೀ. ಈಗ ಮಗಳ ಮ್ಯಾಲ ಅತ್ಯಾಚಾರ ಮಾಡ್ಯಾನ. ಈ ಹಿಂದ್ ವಾಚಮನ್ ಕೆಲಸಾ ಮಾಡುವವನ ಹೆಂಡ್ತಿ ಮ್ಯಾಲ್ಯೂ ಅಂವ್ ಅತ್ಯಾಚಾರ ಮಾಡಿದ್ದ. ದುಡ್ಡು ಕೊಟ್ಟ ಬಚಾವ್ ಆಗ್ಯಾನ್ರಿ. ಬಾಳ ಮಂದಿ ಹೆಣ್ಮಕ್ಕಳ ಕೊಳ್ಳಾಗಿನ ಸರಾ ಕದ್ದಾನರಿ. ಅಂವ ನನ್ನ ಕೈಯಾಗ ಸಿಕ್ರ ಸೀಳೆ ಹಾಕತ್ತಿನ್ರಿ ಎಂದು ಆಕ್ರೋಶ ಭರಿತವಾಗಿ ಬಾಲಕಿ ತಂದೆ ಬಸಪ್ಪ ನುಡಿದಿದ್ದರು.
ಇನ್ನು, ಮಗಳ ಮೇಲೆ ನಡೆದಿರುವ ಅತ್ಯಾಚಾರದಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯ ತಾಯಿ ಮಾನಸಿಕವಾಗಿ ತೀರಾ ಕುಗ್ಗಿ ಹೋಗಿದ್ದರು.
ಇದೀಗ ಆರೋಪಿ ಶಿವಪ್ಪನಿಗೆ ಶಿಕ್ಷೆ ನೀಡುವ ಸಮಯ ಬಂದಿದ್ದು, ನೊಂದ ಬಾಲಕಿ ಹಾಗೂ ಪಾಲಕರು ಆತನ ಶಿಕ್ಷೆಗಾಗಿಯೇ ಕಾಯುತ್ತಿದ್ದಾರೆ.
2013ರಲ್ಲಿ ಏಳು ಅತ್ಯಾಚಾರ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತು ಪಡಿಸಿ ಇಡಿ ಜಿಲ್ಲೆಯಲ್ಲಿ 10 ವರ್ಷಗಳಲ್ಲಿ ಬರೋಬ್ಬರಿ 60 ಅತ್ಯಾಚಾರ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಬೇಸರದ ಸಂಗತಿ ಏನೆಂದರೆ, 2013ರ ಜನವರಿ ತಿಂಗಳಿಂದ ಜುಲೈ ತಿಂಗಳ ವರೆಗೆ 7 ಅತ್ಯಾಚಾರ ಪ್ರಕರಣಗಳು ನಡೆದಿವೆ. ಈ ಪೈಕಿ 6 ಅಪ್ರಾಪ್ತ ಬಾಲಕಿಯರ ಮೇಲೆ ನಡೆದರೆ, ಒಂದು ಪ್ರಕರಣ 20 ವಯಸ್ಸಿನ ಯುವತಿ ಮೇಲೆ ನಡೆದಿದೆ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ, ಹಿರೇಮಲ್ಲಿಗವಾಡ ಪ್ರಕರಣಗಳು ಜನವರಿ ತಿಂಗಳಲ್ಲಿ ನಡೆದರೆ, ಫೆಬ್ರವರಿ 1ರಂದು ಕುಂದಗೋಳದ ಸಂಶಿಯಲ್ಲಿ 15ರ ಬಾಲಕಿ ಮೇಲೆ ಅತ್ಯಾಚಾರ ನಡೆಯಿತು. ಮಾರ್ಚ್ 1ರಂದು ಕಲಘಟಗಿ ತಾಲೂಕಿನ ಮಿಶ್ರಿಕೋಟಿಯಲ್ಲಿ 20 ವರ್ಷದ ಯುವತಿಯನ್ನು ಅಪಹರಿಸಿ ಹಜರತಅಲಿ ಖಾಸೀಮಸಾಬ ಮೀರಾನವರ ಎಂಬಾತ ಮಾನಭಂಗ ಮಾಡಿದ. ಏ. 4ರಂದು ನವಲಗುಂದ ತಾಲೂಕಿನ ಅಣ್ಣಿಗೇರಿ ಸುಲಭ ಶೌಚಾಲಯದಲ್ಲಿ 16 ವಯಸ್ಸಿನ ಬಾಲಕಿ ಅಲ್ಲಾಭಕ್ಷ ಇಟಗಿ ಎಂಬಾತನಿಂದ ಅತ್ಯಾಚಾರಕ್ಕೊಳಗಾದಳು. ಧಾರವಾಡ ತಾಲೂಕಿನ ಬೇಲೂರಿನಲ್ಲಿ ಓಡಿಶಾದ 14 ವಯಸ್ಸಿನ ಬಾಲಕಿ ಮೇಲೆ ಏಳೆಂಟು ತಿಂಗಳಿಂದ ಹನುಮಂತ ಮಾದರ ಎಂಬಾತ ನಿರಂತರವಾಗಿ ಅತ್ಯಾಚಾರ ನಡೆಸಿ ಆಕೆಯು ಗರ್ಭ ಧರಿಸಲು ಕಾರಣನಾದ. ಈ ಪ್ರಕರಣ ಮೇ 14ರಂದು ತಡವಾಗಿ ಬೆಳಕಿಗೆ ಬಂದಿದೆ. ಇವು ಬರೀ ಆರು ತಿಂಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು.
ಅಭಿನಂದನೀಯ ಕೆಲಸ
ಅಮ್ಮಿನಬಾವಿ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ನೀಡಿದ ತೀರ್ಪು ಸಮಾಜದಲ್ಲಿ ವಿಕೃತ ಕೆಲಸ ಮಾಡುವವರಿಗೆ ಎಚ್ಚರಿಕೆ ಗಂಟೆ. ಇದು ಅಭಿನಂದನೀಯ ಕೆಲಸ. ಸಹಜ ವ್ಯಕ್ತಿ ಅತ್ಯಾಚಾರದಂಥ ಕೆಲಸದಲ್ಲಿ ತೊಡಗಲ್ಲ. ಮನುಷ್ಯ ತನ್ನ ನಡುವಳಿಕೆ ಮೇಲಿನ ಹಿಡಿತ ತಪ್ಪಿದಾಗ ಇಂಥ ಕ್ರೂರ ಕೆಲಸ ಮಾಡುತ್ತಾನೆ. ಮಾನಸಿಕ ಸ್ಥಿಮಿತ ಕಳೆದುಕೊಳ್ಳದೆ ಮನುಷ್ಯನಾಗಿ ವರ್ತಿಸಬೇಕಿದೆ.
-ಡಾ. ಆನಂದ ಪಾಂಡುರಂಗಿ, ಖ್ಯಾತ ಮನೋರೋಗ ತಜ್ಞ
ನಿರ್ದೇಶನ ನೀಡಬೇಕು
ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ವಿಳಂಬ ಮಾಡದೆ ಶೀಘ್ರವೇ ನ್ಯಾಯ ಪ್ರಕಟಿಸುತ್ತಿರುವುದು ಸಂತಸದ ಸಂಗತಿ. ಕುಡಿದ ಅಮಲಿನಲ್ಲಿ ಹಿರೇಮಲ್ಲಿಗವಾಡದ ಬಾಲಕಿ ಮೇಲೆ ಅಮಾನವೀಯ ಕೃತ್ಯ ಎಸಗಿದ ಶಿವಪ್ಪ ಬಸಪ್ಪ ಕಲ್ಲೂರಗೆ ಕಠಿಣ ಶಿಕ್ಷೆ ನೀಡಬೇಕು.
- ಲಕ್ಷ್ಮಣ ಜಡಗನ್ನವರ, ಜಿಲ್ಲಾಧ್ಯಕ್ಷರು, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್, ಆರ್ಗನೈಸೇಷನ್
-ಬಸವರಾಜ ಹಿರೇಮಠ