ಪರೀಕ್ಷೆ ನಂತರ ಪಾಠ ಕಲಿಸುತ್ತೆ ಬದುಕು
ಹುಬ್ಬಳ್ಳಿ: ಶಾಲೆಯಲ್ಲಿ ಮೊದಲು ಪಾಠ, ನಂತರ ಪರೀಕ್ಷೆ. ಆದರೆ, ಬದುಕು ಮಾತ್ರ ಮೊದಲು ಪರೀಕ್ಷಿಸಿ ನಂತರ ಜೀವನದ ಪಾಠ ಕಲಿಸುತ್ತದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಗುರುವಾರ ಇಲ್ಲಿನ ಬಿ.ವಿ. ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ದಿ. ಪ್ರೊ. ಬಿ.ಸಿ. ಖಾನಾಪುರಿ ಅವರ ಜೀವನ ಚರಿತ್ರೆ 'ಕಾಯಕಯೋಗಿ' ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ ಪಾಲಿಗೆ ಮಹತ್ವದ್ದು: ನನ್ನ ತಂದೆ ಎಸ್.ಆರ್. ಬೊಮ್ಮಾಯಿ ಅವರ ನಿಕಟವರ್ತಿಯಾಗಿದ್ದ ಪ್ರೊ. ಖಾನಾಪುರಿ ಅವರು ನನ್ನ ಎಂಜಿನಿಯರಿಂಗ್ ವಿದ್ಯಾರ್ಥಿ ದೆಸೆಯಲ್ಲಿ ಮೊದಲನೇ ದಿನ ಮತ್ತು ಕೊನೆ ದಿನ ನೀಡಿದ ಮಾರ್ಗದರ್ಶನ ಇಂದಿಗೂ ನನ್ನ ಪಾಲಿಗೆ ಅತ್ಯಂತ ಮಹತ್ವದ್ದು. ಅಂದು ಅವರು ನೀಡಿದ ಮಾರ್ಗದರ್ಶನವೇ ರಾಜಕೀಯದಲ್ಲಿ ಇಂದು ನಾನು ಬೆಳೆಯಲು ಸಾಧ್ಯವಾಯಿತು ಎಂದು ತಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಂಡ ಅವರು, ಬಿವಿಬಿ ಕಾಲೇಜು ಪ್ರಾಚಾರ್ಯರಾಗಿದ್ದ ಖಾನಾಪುರಿ ಅವರಲ್ಲಿನ ದೂರದೃಷ್ಟಿ ಮತ್ತು ಅವರ ಜೀವನದಲ್ಲಿ ನಡೆದ ಘಟನೆಗಳು ಅನೇಕರಿಗೆ ಪಾಠವಾಗಿವೆ. 'ಕಾಯಕಯೋಗಿ' ಜೀವನ ಚರಿತ್ರೆ ಖಾನಾಪುರಿ ಅವರ ವ್ಯಕ್ತಿತ್ವದ ಎಲ್ಲ ಆಯಾಮಗಳನ್ನು ತೆರೆದಿಡುವಂತಹ ಪುಸ್ತಕವಾಗಿದೆ ಎಂದು ಹೇಳಿದರು.
ಮಾದರಿ ವ್ಯಕ್ತಿತ್ವ: ದಿ. ಪ್ರೊ. ಖಾನಾಪುರಿ ಅವರ ಶಿಷ್ಯ ದಯಾನಂದ ಗುರುಕುಲದ ಚಿದ್ರೂಪಾನಂದ ಸ್ವಾಮೀಜಿ ಅವರು, ಪ್ರೊ. ಖಾನಾಪುರಿ ಅವರದ್ದು ಎಲ್ಲರಿಗೂ ಮಾದರಿಯಾಗುವಂತಹ ವ್ಯಕ್ತಿತ್ವ. ಇವರ ಆಡಳಿತಾವಧಿಯಲ್ಲಿ ಬಿವಿಬಿ ಎಂಜಿನಿಯರಿಂಗ್ ಕಾಲೇಜು ಸಾಧಿಸಿದ ಪ್ರಗತಿ, ಕೆಎಲ್ಇ ಸಂಸ್ಥೆಯ ಸಾಧನೆಯ ಹೆಜ್ಜೆ ಗುರುತುಗಳಲ್ಲಿ ಒಂದಾಗಿದೆ. ನಂತರ ಅದ್ಯಾತ್ಮದತ್ತ ತಿರುಗಿದ ಅವರ ಮಾತುಗಳು ಇಂದು ಪ್ರತಿಯೊಬ್ಬರಲ್ಲಿ ಅತೃಪ್ತಿಯ, ಅಭದ್ರತೆಯ ಭಾವನೆ ಕಾಡುತ್ತಿದೆ. ಎಲ್ಲಿಯವರೆಗೆ ಈ ಅಭದ್ರತೆ ಮತ್ತು ಅತೃಪ್ತಿಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಮನುಷ್ಯ ತನ್ನ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿಲ್ಲ. ಇಂದು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಸಮಸ್ಯೆ ಮುಂದೆ ಹಾಕುವ ಯತ್ನ ಮಾಡುತ್ತಿದ್ದೇವೆ. ಅದು ತಾತ್ಕಾಲಿಕವಷ್ಟೇ ವಿನಃ ಶಾಶ್ವತ ಪರಿಹಾರವಲ್ಲ ಎಂದರು.
ಬಸವರಾಜ ಹುಲ್ಲೊಳ್ಳಿ ಅವರು ಗ್ರಂಥಕರ್ತರ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮೀಜಿ, ಬಿವಿಬಿ ಕಾಲೇಜು ಪ್ರಾಚಾರ್ಯ ಡಾ. ಅಶೋಕ ಶೆಟ್ಟರ್, ಶ್ರೀಮತಿ ವಿ.ಬಿ. ಖಾನಾಪುರಿ ಇದ್ದರು. ಪ್ರೊ. ಶ್ರೀವಿದ್ಯಾ ಸ್ವಾಗತಿಸಿದರು, ಡಾ. ಉಮಾ ಪರಿಚಯಿಸಿ, ನಿರೂಪಿಸಿದರು. ವಿ.ಬಿ. ಖಾನಾಪುರಿ ವಂದಿಸಿದರು.