ಬೆಂಕಿ ಹಚ್ಚಿ ಮಹಿಳೆ ಕೊಲೆ: ದೂರು
ಹುಬ್ಬಳ್ಳಿ: ತಾಲೂಕಿನ ಬಂಡಿವಾಡ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಪತಿ, ಪತಿ ಸಂಬಂಧಿಕರು ಸೇರಿಕೊಂಡು ತಮ್ಮ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಭದ್ರಾಪುರ ಗ್ರಾಮದ ಬಸವರಾಜ ಹುಬ್ಬಳ್ಳಿ ಎಂಬುವರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುಮಾರು 5 ವರ್ಷಗಳ ಹಿಂದೆ ಬಂಡಿವಾಡ ಗ್ರಾಮದ ನಾಗಪ್ಪ ಕಮತರ ಎನ್ನುವವರಿಗೆ ತಮ್ಮ ಮಗಳು ಮಂಜುಳಾ ಅವರನ್ನು ವಿವಾಹ ಮಾಡಿಕೊಡಲಾಗಿತ್ತು. ಮದುವೆ ಆದ ದಿನದಿಂದ ಮಂಜುಳಾ ಅವರ ಪತಿ ನಾಗಪ್ಪ ಮತ್ತು ಅವರ ಕುಟುಂಬದವರು ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಮಂಜುಳಾ ಅವರ ವೈವಾಹಿಕ ಜೀವನ ಸರಿಪಡಿಸುವುದಕ್ಕೆ ಹಲವು ಬಾರಿ ಬಂಡಿವಾಡ ಮತ್ತು ಭದ್ರಾಪುರ ಗ್ರಾಮದ ಹಿರಿಯರು ಮತ್ತು ಸಂಬಂಧಿಕರು ಪ್ರಯತ್ನಿಸಿದ್ದರು. ಆದರೂ ಪದೇ ಪದೇ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ.
ಈಗ್ಗೆ ಎರಡು ದಿನಗಳ ಹಿಂದೆ 'ನೀನು ನನಗೆ ಬೇಡ, ನಾನು ಬೇರೆಯವಳನ್ನು ಮದುವೆಯಾಗುತ್ತೇನೆ. ಆದ್ದರಿಂದ ನೀನು ತವರು ಮನಗೆ ಹೋಗು' ಎಂದು ಹೇಳಿದ್ದ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಮಂಜುಳಾ ಅವರು ಮನೆಯಲ್ಲಿ ಒಬ್ಬಳೇ ಇದ್ದ ಸಮಯ ಸಾಧಿಸಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ತಹಸೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಮಂಜುಳಾ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಿಮ್ಸ್ಗೆ ರವಾನಿಸಲಾಗಿದೆ.