ಮತ್ತೆ ಖಾಲಿ ಆಯ್ತು ಡಿಸಿಪಿ ಹುದ್ದೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 4
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹುದ್ದೆ ಮತ್ತೆ ಖಾಲಿಯಾಗಿದೆ.
ಏಕೆಂದರೆ ಗುರುವಾರ ತಡರಾತ್ರಿ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಕೇವಲ ಮೂರು ದಿನಗಳ ಹಿಂದೆಯಷ್ಟೆ ಹು-ಧಾ ಪೊಲೀಸ್ ಕಮಿಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದ ರಮೇಶ ಬಾನೋಟ್ ಅವರನ್ನು ಸರ್ಕಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂದು ವರ್ಗಾವಣೆ ಮಾಡಿದ್ದು, ಹು-ಧಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹುದ್ದೆಯನ್ನು ವಹಿಸಿಕೊಳ್ಳುವಂತೆ ಸರ್ಕಾರ ಇನ್ನು ಯಾರಿಗೂ ಸೂಚಿಸಿಲ್ಲ.
ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ನ್ಯಾಯಾಲಯದ ಆದೇಶದ ಮೇರೆಗೆ ಅದೇ ತಾನೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ. ರಮೇಶ ಅವರು ವರ್ಗಾವಣೆಗೊಂಡಿದ್ದರು. ಚುನಾವಣೆ ಅನಂತರ ಮತ್ತೆ ಅದೇ ಸ್ಥಾನಕ್ಕೆ ಬಂದಿದ್ದ ಅವರನ್ನು ಸರ್ಕಾರ ಈಗ ಐಪಿಎಸ್ ಅಧಿಕಾರಿಗಳ ಸಾಮೂಹಿಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಸೇರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆ ಮಾಡಿದೆ. ಇದೇ ವೇಳೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಎಸ್. ರವಿಕುಮಾರ್ ಅವರನ್ನು ಕೂಡ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂದು ವರ್ಗಾವಣೆ ಮಾಡಿದೆ.
ವರ್ಗಾವಣೆ ಕುರಿತು 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಐಪಿಎಸ್ ಅಧಿಕಾರಿ ಬಿ. ರಮೇಶ ಅವರು, ಈ ಹಿಂದೆ ನ್ಯಾಯಾಲಯದ ಆದೇಶದ ಮೇರೆಗೆ ವರ್ಗಾವಣೆಯಾಗಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಹು-ಧಾ ಕಮಿಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರ ವಹಿಸಿಕೊಂಡಿದ್ದೆ. ಆದರೆ, ಸರ್ಕಾರ ನಿಯಮಾವಳಿ ಪ್ರಕಾರ ವರ್ಗಾವಣೆ ಮಾಡಿದೆ ಎಂದರು.
ಸರ್ಕಾರದ ಈ ದಿಢೀರ್ ವರ್ಗಾವಣೆ ಆದೇಶದಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು ಎರಡು ಐಪಿಎಸ್ ಮಟ್ಟದ ಹುದ್ದೆಗಳು ಖಾಲಿಯಾಗಿದ್ದು, ಅದರಲ್ಲೂ ಕಮಿಷನರೇಟ್ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹುದ್ದೆ ಮೊದಲಿನಿಂದಲೂ ಐಪಿಎಸ್ ಅಧಿಕಾರಿಗಳಿಗೆ ದಕ್ಕುವುದೇ ಇಲ್ಲ ಎಂಬ ಮಾತು ಮತ್ತೊಮ್ಮೆ ನಿಜವಾದಂತಾಗಿದೆ.