ಕ್ರಮಕ್ಕೆ ಆದೇಶಿಸಲು ಸುಪ್ರೀಂಗೆ ಮನವಿ
ಹುಬ್ಬಳ್ಳಿ: ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿಗಳ ವಿರುದ್ಧ ಸುಪ್ರಿಂ ಕೋರ್ಟ್‌ಗೆ ಸತ್ಯಾಂಶ ವರದಿ ಮಾಡುವಲ್ಲಿ ಸಿಇಸಿ ಎಡವಿದ್ದು, ಅಕ್ರಮ ಗಣಿಗಾರಿಕೆ ಮಾಡಿರುವ ಮತ್ತು ಅದಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಲು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಎಸ್ಪಿಎಸ್‌ನ ಎಸ್.ಆರ್. ಹಿರೇಮಠ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಡಿ.ಕೆ. ಶಿವಕುಮಾರ, ಮಾಜಿ ಸಚಿವ ವಿ. ಸೋಮಣ್ಣ, ಎಚ್.ಡಿ. ಕುಮಾರಸ್ವಾಮಿ ಸಹೋದರ ಡಾ. ರಮೇಶ ಮತ್ತು ಬಲ್ದೋಟಾ ಗ್ರೂಪ್‌ನ ಅಕ್ರಮ ಗಣಿಗಾರಿಕೆ ಚಟುವಟಿಕೆ ಬಗ್ಗೆ ಕೇಂದ್ರ ಉನ್ನತಾಧಿಕಾರ ಸಮಿತಿ ಸತ್ಯಾಂಶ ತಿಳಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಬಲ್ದೊಟಾ ಗ್ರೂಪ್ 300 ಹೆಕ್ಟೇರ್‌ನಲ್ಲಿ ಅಕ್ರಮ ಗಣಿಗಾರಿಕೆ ಮಾಡಿದೆ. ಅದೇ ರೀತಿ ದೀಪಚಂದ ಕಿಶನ್‌ಲಾಲ್ 14.5 ಲಕ್ಷ ಮೆಟ್ರಿಕ್ ಟನ್, ಮಾಜಿ ಸಚಿವ ವಿ. ಸೋಮಣ್ಣ ಅವರ ಮಾತಾ ಮಿನರಲ್ಸ್ ಮತ್ತು ಲತಾ ಮಿನರಲ್ಸ್ ತಲಾ 10 ಲಕ್ಷ ಮೆಟ್ರಿಕ್ ಟನ್ ಅಕ್ರಮವಾಗಿ ಗಣಿಗಾರಿಕೆ ನಡೆಸಿವೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದ್ದು, ಈಗಾಗಲೇ ನೀಡಿರುವ ಅಂತಿಮ ತೀರ್ಪನ್ನು ಮರು ಪರಿಶೀಲಿಸುವಂತೆ ಕೊರಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ಕುಷ್ಟಗಿ, ಐ.ಜಿ. ಪುಲ್ಲಿ, ಎಫ್.ಬಿ. ಹಬೀಬ ಇದ್ದರು.