ಜಮೀನು ವಿವಾದ: ಘರ್ಷಣೆ
ಧಾರವಾಡ: ಜಮೀನಿನ ಕುರಿತು ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಘಟನೆ ತಾಲೂಕಿನ ಕಲ್ಲೂರ ಗ್ರಾಮದ ಬಳಿ ಗುರುವಾರ ರಾತ್ರಿ ನಡೆದಿದೆ. ಈ ಕುರಿತಂತೆ ಶುಕ್ರವಾರ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿನ್ನಪ್ಪ ರಾಯಪ್ಪ ಕುಂದಗೋಳ ಹಾಗೂ ಇತರ 15 ಜನ ತಮ್ಮ ಹಾಗೂ ತಮ್ಮ ಗುಂಪಿನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಶಂಕರ ಉಡಕೇರಿ ದೂರು ನೀಡಿದ್ದಾರೆ. ಆದರೆ, ಜಿನ್ನಪ್ಪ ಅವರು ತಮ್ಮ ಮೇಲೆ ಉಡಿಕೇರಿ ಕುಟುಂಬ ಹಲ್ಲೆ ನಡೆಸಿದೆ ಎಂದು ಪ್ರತಿ ದೂರು ನೀಡಿದೆ. ಘಟನೆಯಲ್ಲಿ ಶಂಕರ ಉಡಿಕೇರಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿದ ಗರಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.