ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಿಂಚಣಿ ಅದಾಲತ್ ಆರಂಭ

Mainashree
Updated On : 6 Jul 2013, 10:46 am

ಧಾರವಾಡ: ಸಾಮಾಜಿಕ ಭದ್ರತೆ ಅಡಿ ಸರ್ಕಾರದಿಂದ ವಿವಿಧ ಫಲಾನುಭವಿಗಳಿಗೆ ನೀಡುವ ಮಾಸಾಶನಗಳು ಹಲವು ಕಾರಣಗಳಿಂದ ಕೆಲ ಫಲಾನುಭವಿಗಳಿಗೆ ಬಂದ್ ಆಗಿದ್ದು, ಅರ್ಹ ಫಲಾನುಭವಿಗಳಿದ್ದರೆ ಅವರಿಗೆ ಮತ್ತೇ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪಿಂಚಣಿ ಅದಾಲತ್ ಆರಂಭಿಸಲಾಗುತ್ತಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ, ಅಂಗವಿಕಲ, ವೃದ್ಯಾಪ್ಯ, ವಿಧವಾ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆ ಅಡಿ ಫಲಾನುಭವಿಗಳಿಗೆ ಮಾಸಾಶನವಿದ್ದು, ಅನರ್ಹರು ಸಹ ಈ ಯೋಜನೆಯಡಿ ಫಲಾನುಭವಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಚಾರಣೆ ನಡೆಸಿ ಸಾಕಷ್ಟು ಸಂಖ್ಯೆಯಲ್ಲಿ ಮಾಸಾಶನಗಳನ್ನು ರದ್ದುಗೊಳಿಸಲಾಗಿತ್ತು. ಈ ಪೈಕಿ ಕೆಲ ಅರ್ಹ ಫಲಾನುಭವಿಗಳ ಮಾಸಾಶನ ರದ್ದಾಗಿದ್ದು, ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುವಂತೆ ಮಾಡಲು ಮುಖ್ಯಮಂತ್ರಿಗಳ ನಿರ್ದೇಶನದ ಮೇಲೆ ಈ ಪಿಂಚಣಿ ಅದಾಲತ್ ಆರಂಭಿಸಲಾಗುತ್ತಿದೆ ಎಂದರು.
ಸಮಿತಿ ರಚನೆ: ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ನಿಗದಿ ಪಡಿಸಿದ ದಿನದಂದು ಸಭೆ ಕರೆಯಲಾಗುವುದು. ಅಲ್ಲದೇ, ಯೋಜನೆಗೆ ಅರ್ಹರಿದ್ದು, ಅನರ್ಹರಾಗಿದ್ದರೆ ಅವರು ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು. ಪಿಂಚಣಿ ಅದಾಲತ್‌ನಲ್ಲಿ ಅರ್ಜಿಯನ್ನು ಪರಿಗಣಿಸಿ ಸತ್ಯಾಸತ್ಯತೆ ನೋಡಿ ಫಲಾನುಭವಿಗಳಿಗೆ ಮತ್ತೆ ಸೌಲಭ್ಯ ಕಲ್ಪಿಸಲಾಗುವುದು. ಪ್ರತಿ ಸೋಮವಾರ, ಬುಧವಾರ, ಶನಿವಾರ ಈ ಅದಾಲತ್ ಏರ್ಪಡಿಸಲಾಗುತ್ತಿದ್ದು,  ಸೋಮವಾರ ಧಾರವಾಡ, ಜು. 10ರಂದು ಹುಬ್ಬಳ್ಳಿ, 13ರಂದು ಕುಂದಗೋಳ, 15ರಂದು ನವಲಗುಂದ, 17ರಂದು ಕಲಘಟಗಿ, ದುಮ್ಮವಾಡ ಹೀಗೆ ಐದು ತಾಲೂಕುಗಳಲ್ಲಿನ 14 ಹೋಬಳಿಗಳಲ್ಲಿ ನಿಗದಿಪಡಿಸಿದ ದಿನ ಅದಾಲತ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಒತ್ತುವರಿಗೆ ಕ್ರಮ...: ಜಿಲ್ಲಾದ್ಯಂತ ವಿವಿಧೆಡೆ ಕೆರೆ ಅಂಗಳ, ಗೋಮಾಳ ಇನ್ನಿತರೆ ಸರ್ಕಾರಿ ಜಮೀನು ಒತ್ತುವರಿಯಾಗಿದ್ದು, ಈ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಇಂತಹ ಜಮೀನು ಗುರುತಿಸಿ ಅಳತೆ ಮಾಡಿ ಸಂಬಂಧಿಸಿದವರಿಗೆ ನೋಟಿಸ್ ನೀಡುವ ಮೂಲಕ ಒತ್ತುವರಿಯನ್ನು ಬಿಡಿಸಿಕೊಳ್ಳಲಾಗುವುದು. ಈ ಕಾರ್ಯ ಜು. 8ರಿಂದ ನಡೆಯಲಿದೆ. ಅಲ್ಲದೇ, ಅಗತ್ಯ ಸಂದರ್ಭಗಳಿಗೆ ಭೂಮಿ ಹಂಚಲು ಸರ್ಕಾರ ಈಗಾಗಲೇ ಭೂ ಬ್ಯಾಂಕ್‌ಗೆ ಭೂಮಿಯನ್ನು ಸ್ವಾಧೀನಪಡಿಸುವ ಕಾರ್ಯವು ನಡೆದಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಪ ವಿಭಾಗಾಧಿಕಾರಿಗಳು, ಭೂ ಮಾಪನ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ. ಜಮೀನು ಅಳತೆ ಮಾಡುವ ಸರ್ಕಾರಿ ಸರ್ವೇಯರ್‌ಗಳ ಸಂಖ್ಯೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ವಿಳಂಬವಾಗುತ್ತಿದ್ದು, ಇತ್ತೀಚಿಗಷ್ಟೇ ತರಬೇತಿ ಪಡೆದ ಸರ್ವೇಯರ್‌ಗಳು ಕೆಲಸಕ್ಕೆ ಬಂದರೆ ಎಲ್ಲವೂ ಸರಳವಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement