ಬರಹಗಾರರಿಗೆ ಹೆಚ್ಚು ಸಂಭಾವನೆ ನೀಡಿ
ಆಂಗ್ಲ ಲೇಖಕರಿಗಿರುವ ಪ್ರೋತ್ಸಾಹ ಕನ್ನಡ ಬರಹಗಾರರಿಗಿಲ್ಲ. ಪ್ರಕಾಶಕರು ಕನ್ನಡ ಬರಹಗಾರರಿಗೆ ನೀಡುತ್ತಿರುವ ಸಂಭಾವನೆ ಕಡಿಮೆ.
ಕ.ಪ್ರ. ವಾರ್ತೆ, ಹುಬ್ಬಳ್ಳಿ, ಜು.5-
ಆಂಗ್ಲ ಲೇಖಕರಿಗಿರುವ ಪ್ರೋತ್ಸಾಹ ಕನ್ನಡ ಬರಹಗಾರರಿಗಿಲ್ಲ. ಪ್ರಕಾಶಕರು ಕನ್ನಡ ಬರಹಗಾರರಿಗೆ ನೀಡುತ್ತಿರುವ ಸಂಭಾವನೆ ಕಡಿಮೆ. ಪ್ರಕಾಶಕರು ತಮ್ಮ ಲಾಭದ ಇನ್ನೂ ಹೆಚ್ಚಿನ ಪಾಲನ್ನು ಲೇಖಕರಿಗೆ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ಅಭಿಪ್ರಾಯಪಟ್ಟರು.
ನಗರದ ಕಾಯಿನ್ ರಸ್ತೆಯ ಲಕ್ಷ್ಮೀ ಮಾಲ್‌ನಲ್ಲಿ ಸಪ್ನ ಬುಕ್‌ಹೌಸ್‌ನ 10ನೇ ಶಾಖೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಹಿಂದಿಗೆ ಹೋಲಿಸಿದಾಗ ಕನ್ನಡ ಪುಸ್ತಕಗಳ ಬೆಲೆ ತುಸು ಹೆಚ್ಚು. ಹೀಗಾಗಿ ಕಡಿಮೆ ದರದಲ್ಲಿ ಕನ್ನಡ ಪುಸ್ತಕಗಳು ಓದುಗರ ಕೈಸೇರುವ ಕೆಲಸವಾಗಬೇಕು. ಈ ಕಾರ್ಯಕ್ಕೆ ಸಪ್ನ ಬುಕ್‌ಹೌಸ್ ಮುಂದಾಗಲಿ ಎಂದರು.
ಓದುವ ಹವ್ಯಾಸ ಬೆಳೆಸಿಕೊಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಪುಸ್ತಕ ಓದುವ ಹವ್ಯಾಸದಿಂದ ವ್ಯಕ್ತಿ ಮಾನಸಿಕವಾಗಿ ಪ್ರಬುದ್ಧನಾಗುತ್ತಾನೆ. ದುಶ್ಚಟಗಳೂ ಹತ್ತಿರ ಸುಳಿಯುವುದಿಲ್ಲ. ಆದರೆ, ಇತ್ತೀಚಿಗೆ ಪುಸ್ತಕ ಓದುವ ಹವ್ಯಾಸ ಕುಂದುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
ತಾಲೂಕಿಗೊಂದು ಪುಸ್ತಕ ಮಳಿಗೆ ತೆರೆಯಲಿ: ಪಡಿತರ ಅಂಗಡಿ ಮಾದರಿಯಲ್ಲಿಯೇ ಪ್ರತಿ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸರ್ಕಾರವೇ ಪುಸ್ತಕ ಮಾರಾಟ ಮಳಿಗೆಗಳನ್ನು ತೆರೆಯುವಂತಾಗಲಿ. ಈ ಮಳಿಗೆಗಳಲ್ಲಿನ ಪುಸ್ತಕ ಮಾರಾಟದಿಂದ ಬರುವ ಲಾಭವನ್ನು ಸರ್ಕಾರ ರಾಜ್ಯದ ಅಭಿವೃದ್ಧಿಗೆ ಮೀಸಲಿಡಲಿ ಎಂದು 'ಕನ್ನಡಪ್ರಭ' ಮತ್ತು 'ಸುವರ್ಣ ನ್ಯೂಸ್'ನ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸಲಹೆ ನೀಡಿದರು.
ರಾಜ್ಯದಲ್ಲಿ ಪುಸ್ತಕ ಮಳಿಗೆಗಳಿಗಿಂತ ಬಾರ್‌ಗಳೇ ಹೆಚ್ಚಾಗಿವೆ. 9,600 ಬಾರ್‌ಗಳಿದ್ದು, ಬೆಂಗಳೂರು ಮಹಾನಗರವೊಂದರಲ್ಲಿಯೇ 2,200 ಬಾರ್‌ಗಳಿವೆ. ಆದರೆ ಬೆಂಗಳೂರಿನಲ್ಲಿರುವ ಪುಸ್ತಕ ಮಳಿಗೆಗಳ ಸಂಖ್ಯೆ ಕೇವಲ 14. ಕೋಲಾರ, ಚಿತ್ರದುರ್ಗಗಳಲ್ಲಿ ಪುಸ್ತಕ ಮಾರಾಟ ಮಳಿಗೆಗಳೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇವಲ ಮೂರು ಪುಸ್ತಕ ಮಳಿಗೆಗಳಿವೆ. ಇಡೀ ರಾಜ್ಯದಲ್ಲಿ ಪುಸ್ತಕ ಮಾರಾಟ ಮಳಿಗೆಗಳ ಸಂಖ್ಯೆ 50 ಮೀರಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಓದುಗರಿಲ್ಲ, ಪುಸ್ತಕಗಳು ಮಾರಾಟವಾಗೋದಿಲ್ಲವೆಂಬ ಮಾತುಗಳಿವೆ. ಆದರೆ ಓದುವವರ ದೊಡ್ಡ ವರ್ಗವೇ ರಾಜ್ಯದಲ್ಲಿದೆ. ಕನ್ನಡ ಪುಸ್ತಕ ಪ್ರೀತಿಸುವವರಿದ್ದಾರೆ. ಕನ್ನಡದ ಪುಸ್ತಕಗಳು ಓದುಗರಿಗೆ ತಕ್ಷಣ ಸಿಗುತ್ತಿಲ್ಲ. ಪುಸ್ತಕಗಳು ಮುದ್ರಣಗೊಂಡ ನಂತರ ಕೆಲವೇ ನಗರಗಳಲ್ಲಿ ಮಾರಾಟಕ್ಕೆ ದೊರೆಯುತ್ತವೆ. ರಾಜ್ಯದ ಇತರ ಪುಸ್ತಕ ಅಂಗಡಿಗಳಿಗೆ ಈ ಪುಸ್ತಕಗಳು 6-7 ತಿಂಗಳ ನಂತರ ತಲುಪುತ್ತವೆ. ಅಷ್ಟರಲ್ಲಿ ಓದುಗನ ಆಸಕ್ತಿಯೇ ಕಡಿಮೆಯಾಗಿರುತ್ತದೆ. ಹೀಗಾಗಿ ಪ್ರಕಾಶಕರು ತ್ವರಿತವಾಗಿ ಓದುಗನ ಕೈಗೆ ಪುಸ್ತಕ ತಲುಪಿಸುವತ್ತ ನಿಗಾ ವಹಿಸಬೇಕು ಎಂದರು.
ಸಾಹಿತಿಗಳಾದ ನಾಡೋಜ ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಹಂಪ ನಾಗರಾಜಯ್ಯ, ಚಂದ್ರಶೇಖರ ಪಾಟೀಲ, ಜಿ.ಎಸ್. ಆಮೂರು, ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಕರ್ನಾಟಕ ವಿವಿ ಕುಲಪತಿ ಪ್ರೊ. ಎಚ್.ಬಿ. ವಾಲಿಕಾರ ಹಾಗೂ ಸಪ್ನ ಬುಕ್ ಹೌಸ್‌ನ ಮಾಲೀಕ ನಿತಿನ್ ಶಾ ಮತ್ತಿತರರು ಉಪಸ್ಥಿತರಿದ್ದರು. ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.