ಸ್ನಾಯು ದೌರ್ಬಲ್ಯಕ್ಕೆ ಸುಂದರ ಮಕ್ಕಳು ಬಲಿ
ಧಾರವಾಡ: ಆ ಇಬ್ಬರು ಮಕ್ಕಳು ಹುಟ್ಟಿನಿಂದ ಏಳು ವರ್ಷದ ವರೆಗೂ ತಮ್ಮ ಗೆಳೆಯ ಗೆಳತಿಯರೊಂದಿಗೆ ಶಾಲೆಗೆ ಹೋಗಿ, ಪಾಠ ಕೇಳಿ, ಆಟವಾಡುತ್ತಾ, ಮನೆಯವರೊಂದಿಗೆ ಚೆನ್ನಾಗಿ ಊಟ ಮಾಡಿಕೊಂಡಿದ್ದರು. ಆದರೆ, ಅದೇಕೋ ಏನೋ ಏಕಾಏಕಿ ಅವರಿಬ್ಬರಿಗೂ ಅಂಗವೈಕಲ್ಯ ಅಂಟಿಕೊಂಡು ಪ್ರಸ್ತುತ ಹಾಸಿಗೆಯಲ್ಲೇ ಕಾಲ ಕಳೆಯುವಂತಾಗಿದೆ.
ಈ ಬಾಲಕನ ಹೆಸರು ಸಚಿನ್, ವಯಸ್ಸು 17. ಪಕ್ಕದಲ್ಲೇ ಕುಳಿತಿರುವ ಬಾಲಕಿ ಸುಪ್ರಿಯಾ, ಈಕೆಯ ವಯಸ್ಸು 18. ಈ ಅಕ್ಕ-ತಮ್ಮಗಂಟಿದ ಅಂಗವೈಕಲ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಒಂದು ಗಂಡು, ಒಂದು ಹೆಣ್ಣು ಮಕ್ಕಳೊಂದಿಗೆ ಅತ್ಯಂತ ಸುಖಿ ಜೀವನ ನಡೆಸುತ್ತಿದ್ದ ಈ ಕುಟುಂಬದ ಸುಖ ನೋಡಲಾಗದ ವಿಧಿ, ಎರಡೂ ಮಕ್ಕಳಿಗೆ ಸ್ನಾಯು ದೌರ್ಬಲ್ಯ ನೀಡಿ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದಾನೆ.
ಧಾರವಾಡದ ಬಸವ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಮೂಲತಃ ಗುಮ್ಮಗೋಳ ಗ್ರಾಮದ ನಿವಾಸಿಗಳಾದ ಶಿವಪುತ್ರಯ್ಯ ಹಾಗೂ ಸರೋಜಾ ಶಿವಪೂಜಿಮಠ ಕುಟುಂಬದ ವ್ಯಥೆಯ ಕಥೆ ಇದು.
ಹೇಗಾಯ್ತು...?: ಸದಾ ಹಾಸಿಗೆಯಲ್ಲಿ ಕಾಲು ಮಡಚಿ ಕುಳಿತುಕೊಂಡಿರುವ ಈ ಅಕ್ಕ-ತಮ್ಮನ ಮುಖದಲ್ಲಿ ಚಂದದ ಕಳೆ ಇದ್ದರೂ ಸ್ನಾಯುಗಳಲ್ಲಿ ಶಕ್ತಿ ಇಲ್ಲ. ಮಕ್ಕಳ ತಂದೆ ಶಿವಪುತ್ರಯ್ಯ ಊರಿನಲ್ಲಿದ್ದ ತುಂಡು ಭೂಮಿಯಲ್ಲಿಯೇ ಕೃಷಿ ಕೆಲಸ ಮಾಡಿಕೊಂಡಿದ್ದವರು. ತಾಯಿ ಸರೋಜ ಮಕ್ಕಳನ್ನು ನೋಡಿಕೊಂಡು ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಿದ್ದಳು. ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳು ಚೆಂದಗೆ ಆಡಿಕೊಂಡು ಇರೋದನ್ನು ವಿಧಿ ಸಹಿಸದೆ ಕ್ರೂರತನ ಮೆರೆಯಿತು. ಏಳು ವರ್ಷದವರೆಗೆ ಚೆನ್ನಾಗಿ ಓಡಾಡಿಕೊಂಡು ಇದ್ದ ಈ ಇಬ್ಬರು ಒಬ್ಬರ ನಂತರ ಒಬ್ಬರು ಇದ್ದಕ್ಕಿದ್ದಂತೆಯೇ ಕುಸಿದು ಬೀಳತೊಡಗಿದರು. ಎರಡೇ ತಿಂಗಳಲ್ಲಿ ಕಾಲಿನಲ್ಲಿ ಶಕ್ತಿಯೇ ಕುಂದಿ ಹೋಯಿತು. ನಡೆಯುವುದು ಅಸಾಧ್ಯವಾಗಿ ಹೋಯಿತು.
ಕುಳಿತಲ್ಲೇ ಎಲ್ಲ ಚಾಕರಿ: ಅಷ್ಟೊತ್ತಿಗೆ ಸುಪ್ರಿಯಾ 3ನೇ ತರಗತಿ, ಸಚಿನ್ 2ನೇ ತರಗತಿ ಓದುತ್ತಿದ್ದರು. ಏಕಾಏಕಿ ಈ ರೀತಿ ಆಗಿರುವುದಕ್ಕೆ ಗಾಬರಿಯಾದ ತಂದೆ-ತಾಯಿ ಅವರಿಗೆ ಚಿಕಿತ್ಸೆ ಕೊಡಿಸುತ್ತಲೇ ವಿದ್ಯಾಭ್ಯಾಸ ಮುಂದುವರಿಸಿದರು. ಇಬ್ಬರನ್ನು ಎತ್ತಿಕೊಂಡು ಶಾಲೆಗೆ ಕರೆದೊಯ್ಯುವುದು ಮಾಡುತ್ತಿದ್ದರು. ಎಸ್ಸೆಸ್ಸೆಲ್ಸಿವರೆಗೂ ಇದೇ ರೀತಿ ನಡೆದು ಇತ್ತೀಚೆಗೆ ಇಬ್ಬರ ದೇಹ ಭಾರವಾಗಿದ್ದರಿಂದ ಮನೆಯಲ್ಲಿಯೇ ಎಲ್ಲವೂ ನಡೆಯುತ್ತಿದೆ. ಒಂದರಿಂದ ಹಿಡಿದು ಎರಡರ ವರೆಗೂ ತಂದೆ-ತಾಯಿಯೇ ಈ ಇಬ್ಬರ ಚಾಕರಿ ಮಾಡಬೇಕಾದ ಸ್ಥಿತಿ ಇದೆ. ಇವರಿಗೆ ಚಿಕಿತ್ಸೆ ಕೊಡಿಸಲೆಂದು ಧಾರವಾಡದಲ್ಲಿರುವ ಅಜ್ಜನ ಬಾಡಿಗೆ ಮನೆಯಲ್ಲಿ ಈ ಕುಟುಂಬ ವಾಸವಿದೆ. ಇದೀಗ ಚಿಕಿತ್ಸೆ ಆರಂಭವಾಗಿ ಹತ್ತು ವರ್ಷ ಕಳೆದರೂ ಪ್ರಯೋಜನವಾಗಿಲ್ಲ.
ಇದ್ದ ಎರಡೇ ಮಕ್ಕಳಿಗೆ ಹೀಗಾಗಿದ್ದು, ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿದ್ದೇವೆ. ಈಗಾಗಲೇ ಸುಮಾರು ರು. 15 ಲಕ್ಷ ಖರ್ಚು ಮಾಡಿದ್ದು, ಇನ್ನು ಮುಂದೆ ನಮ್ಮ ಬಳಿ ಹಣವಿಲ್ಲ. ತಂದೆಯ ಮನೆಯಲ್ಲಿ ಅವರ ನಿವೃತ್ತಿ ಹಣದಿಂದ ಬದುಕುತ್ತಿದ್ದು, ಚಿಕಿತ್ಸೆ ಕೊಡಿಸಲು ನಮ್ಮಿಂದ ಆಗುತ್ತಿಲ್ಲ. ಸಂಬಂಧಿಕರಲ್ಲಿ ಮದುವೆಯಾಗಿದ್ದರಿಂದ ಇಬ್ಬರೂ ಮಕ್ಕಳಿಗೆ ಈ ಸ್ನಾಯು ದೌರ್ಬಲ್ಯ (ಟ್ಡಡ್ಛ್ಡಟಛ್ಠ ಜಣಡಡ್ಠ್ಟಿಝಣ) ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ಖರ್ಚಾಗುವುದರಿಂದ ಸದ್ಯ ನಗರದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಬರಿ ಪಿಜಿಯೋಥೆರಪಿ ಚಿಕಿತ್ಸೆ ಮಾತ್ರ ಕೊಡಿಸುತ್ತಿದ್ದು, ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಹತ್ತಿದೆ ಎಂದು ಕಣ್ಣೀರಿಟ್ಟರು ಮಕ್ಕಳ ತಾಯಿ ಸರೋಜಾ.
ಈ ಮಧ್ಯೆ ಸಚಿನ್‌ಗೆ ಚಿತ್ರಕಲೆಯಲ್ಲಿ ಆಸಕ್ತಿ ಉಂಟು, ತಮ್ಮಿಬ್ಬರು ರೋಗ ಗುಣಮುಖವಾಗಲಿ ಎಂದು ನಿತ್ಯ ಮೂರು ಗಂಟೆ ದೇವರ ನಾಮಸ್ಮರಣೆ ಮಾಡುತ್ತಾನೆ. ಆದರೆ, ಸುಪ್ರಿಯಾಗೆ ಇಂತಹ ಯಾವುದೇ ಹವ್ಯಾಸಗಳು ಸಾಧ್ಯವಾಗುತ್ತಿಲ್ಲ. ಆಕೆಯ ಕೈಗಳ ಸ್ನಾಯುಗಳಲ್ಲಿಯೂ ಇದೀಗ ದೌರ್ಬಲ್ಯ ಉಂಟಾಗಿ ಕೈ ಎತ್ತಲೂ ಆಗುತ್ತಿಲ್ಲ. ಸರ್ಕಾರ ಅಥವಾ ಸಂಘ -ಸಂಸ್ಥೆಗಳು ಈ ಕುಟುಂಬಕ್ಕೆ ಆಸರೆಯಾಗಿ ಮಕ್ಕಳ ಬದುಕಿಗೆ ಹೊಸ ರೂಪ ತಂದು ಕೊಡಲಿ ಎಂಬುದು ಆಶಯ.
ಬಸವರಾಜ ಹಿರೇಮಠ