ಹೊಸ ತಾಲೂಕುಗಳ ರಚನೆಗೆ ಕೈ ಬ್ರೇಕ್
ಕನ್ನಡಪ್ರಭ ವಾರ್ತೆ, ಧಾರವಾಡ, ಜು. 5
ತಮ್ಮ ಅಧಿಕಾರವಧಿಯಲ್ಲಿ ಒಟ್ಟು 46 ನೂತನ ತಾಲೂಕುಗಳನ್ನು ರಚನೆ ಮಾಡಲಾಗಿತ್ತು. ಉತ್ತರ ಕರ್ನಾಕ ಭಾಗದಲ್ಲಿ 36 ಹಾಗೂ ದಕ್ಷಿಣ ಕರ್ನಾಟಕದಲ್ಲಿ 10 ನೂತನ ತಾಲೂಕುಗಳ ರಚನೆಗೆ ತಾವು ಸಹಮತಿ ನೀಡಿದ್ದೆವು. ಆದರೆ, ಇದೀಗ ಆಡಳಿತಾರೂಢ ಕಾಂಗ್ರೆಸ್ ಅವುಗಳನ್ನು ಕೈಬಿಡುವ ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದರು.
ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬಿಜೆಪಿ ಧಾರವಾಡ- 71 ಗ್ರಾಮೀಣ ಘಟಕ ನೂತನ ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಸಂಕಷ್ಟ ಹಾಗೂ ಅಲೆದಾಟ ತಪ್ಪಿಸುವ ಹಾಗೂ ಆಡಳಿತ ವಿಕೇಂದ್ರಿಕರಣ, ಆಡಳಿತದಲ್ಲಿ ಪಾರದರ್ಶಕತೆ ತರಬೇಕೆನ್ನುವ ಉದ್ದೇಶದಿಂದ ತಪ್ಪಿಸಲು ಬಿಜೆಪಿ ಸರ್ಕಾರ ಕೈಗೊಂಡ ಈ ಯೋಜನೆಯನ್ನು ಕಾಂಗ್ರೆಸ್ ಕೈ ಬಿಡುವ ಚಿಂತನೆ ನಡೆಸಿದೆ. ನೂತನವಾಗಿ ಘೋಷಣೆಗೊಂಡ ತಾಲೂಕಗಳ ಬಗ್ಗೆ ಕಾಂಗ್ರೆಸ್ನ ಯಾರೊಬ್ಬರೂ ಚಕಾರವೆತ್ತದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ತಾಲೂಕುಗಳನ್ನು ರದ್ದುಗೊಳಿಸುವ ನಿರ್ಧಾರ ನಿಜವಾದದಲ್ಲಿ ಜನರೇ ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಪಡಿತರ ಚೀಟಿಗಳ ಗೊಂದಲಕ್ಕೆ ತೆರೆಬಿದ್ದಿಲ್ಲ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜು. 10ರಂದು ಅಕ್ಕಿ ವಿತರಿಸಲು ಸಜ್ಜಾಗಿದ್ದಾರೆ. ಪ್ರಸ್ತುತ ಅಕ್ಕಿ ಸಂಗ್ರಹಿಸಲು ಸರಿಯಾದ ಉಗ್ರಾಣಗಳ ವ್ಯವಸ್ಥೆಯಿಲ್ಲ. ಅಲ್ಲದೆ, ವಿತರಣೆ ಕುರಿತಂತೆ ಪೂರ್ವ ತಯಾರಿಯೇ ಇಲ್ಲದೆ ತರಾತುರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ ಎಂದರು.
ಪಕ್ಷದ ಶಕ್ತಿ ತೋರಿಸಿ: ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, ರಾಜಕೀಯ ಚುಣಾವಣೆ ಅಖಾಡದಲ್ಲಿ ಸೋಲು- ಗೆಲವು ಮನೆಯಲ್ಲಿನ ಜನನ- ಮರಣಗಳಂತೆ, ಅವುಗಳಿಂದ ತಪ್ಪಿಸಲು ಸಾಧ್ಯವಿಲ್ಲ. ಆದರೆ, ಅವುಗಳನ್ನು ಎದುರಿಸಿ ನಿಲ್ಲುವ ಕಾಲ ಸಮೀಪದಲ್ಲಿಯೇ ಇದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಶಕ್ತಿ ತೋರಿಸಲು ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕೇಂದ್ರದ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ. ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಚುಕ್ಕಾಣಿ ಹಿಡಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಳ್ಳಿ-ಹಳ್ಳಿಗಳಿಗೆ ತೆರಳಿ ಕಾಂಗ್ರೆಸ್ ಭ್ರಷ್ಟಾಚಾರ ಕುರಿತು ಜನರಿಗೆ ಕರಪತ್ರ ಹಂಚುವ ಮೂಲಕ ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಷಣ್ಮುಖ ಗುರಿಕಾರ, ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿದರು. ಈಶ್ವರ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಪ್ರೇಮಾ ಕೋಮಾರದೇಸಾಯಿ, ಶಶಿ ಕುಲಕರ್ಣಿ, ಮಲ್ಲನಗೌಡ ಪಾಟೀಲ, ಸುರೇಶ ಬೇದ್ರೆ, ಶಂಕರಣ್ಣ ಅವರಾದಿ, ಶಂಕರ ಶೇಳಕೆ ಇದ್ದರು.
ಇದೇ ಸಂದರ್ಭದಲ್ಲಿ ಬಿಜೆಪಿ ಧಾರವಾಡ-71 ಗ್ರಾಮೀಣ ಘಟಕದ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಮಡಿವಾಳಪ್ಪ ಉಳವಣ್ಣವರ ನೇಮಕ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಗಾಣಗೇರ, ಸುನೀಲ ಗುಡಿ, ಯುವ ಮೋರ್ಚಾ ಅಧ್ಯಕ್ಷರನ್ನಾಗಿ ಮಂಜುನಾಥ ಮಸೂತಿ ಹಾಗೂ ಶಿವಾನಂದ ಗುಂಡಗೋವಿ ಅವರನ್ನು ನೇಮಕ ಮಾಡಲಾಯಿತು.