ಕಿಮ್ಸ್ ವೈದ್ಯರ ಮೇಲೆ ಹಲ್ಲೆ: ಪ್ರಕರಣ ದಾಖಲು
ಧಾರವಾಡ: ಕಳೆದ ಜೂನ್ 9ರಂದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರ ಮೇಲೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.
ಈ ಕುರಿತಾಗಿ ಮಾನವ ಹಕ್ಕುಗಳ ಆಯೋಗದ ಸದಸ್ಯ ಚಂದ್ರಶೇಖರ ಹುನಗುಂದ ಶನಿವಾರ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ಘಟನೆಯನ್ನು ತೀವ್ರವಾಗಿ ಪರಿಗಣಿಸಿ ಆಯೋಗ ಪತ್ರಿಕೆಗಳಲ್ಲಿನ ವರದಿಗಳನ್ನು ಆಧರಿಸಿ ಶಾಸಕರ ಮೇಲೆ ಪ್ರಕರಣ ದಾಖಲಿಸಿದೆ. ಅಲ್ಲದೇ, ಕಿಮ್ಸ್ ವೈದ್ಯ ಡಾ. ದೇವರಾಜ ರಾಯಚೂರ ಅವರು ಡೆಂಘೀ ಪೀಡಿತ ತಾಲೂಕಿನ ಲಕಮಾಪುರ ಗ್ರಾಮದ ಬಾಲಕಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದ್ದರಿಂದ ಅವರ ಮೇಲೆಯೂ ಪ್ರಕರಣ ದಾಖಲಿಸಿದೆ ಎಂದರು.
ವೈದ್ಯರು ಚಿಕಿತ್ಸೆ ಒದಗಿಸುವಲ್ಲಿ ತಪ್ಪು ಮಾಡಿರಬಹುದು. ಆದರೆ, ಶಾಸಕ ಸ್ಥಾನದಲ್ಲಿದ್ದು ವೈದ್ಯರ ಮೇಲೆ ಹಲ್ಲೆ ಮಾಡುವುದು ನಾಗರಿಕ ಸಮಾಜದ ವಿರೋಧ ಧೋರಣೆ. ಇದನ್ನು ಯಾವ ಸಮಾಜವೂ ಸ್ವೀಕರಿಸದು. ಆದ್ದರಿಂದ ಪ್ರಕರಣವನ್ನು ಪರಿಗಣಿಸಿ ಕ್ರಮ ತೆಗೆದುಕೊಳ್ಳಲು ಆಯೋಗವು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಿಫಾರಸ್ಸು ಮಾಡಿದೆ. ಹಾಗೆಯೇ, ಕಿಮ್ಸ್ ಮುಖ್ಯಸ್ಥ ಹಾಗೂ ಪೊಲೀಸ್ ಆಯುಕ್ತರಿಗೆ ಪ್ರಕರಣದ ಸಮಗ್ರ ವಿವರ ನೀಡುವಂತೆಯೂ ಆದೇಶಿಸಿದೆ ಎಂದರು.