ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀರಿಗಾಗಿ ಪ್ರಯಾಣಿಕರ ಪರದಾಟ

Mainashree
Updated On : 7 Jul 2013, 12:16 pm

ಪಟ್ಟಣದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಹು ವಿಶಾಲವಾದ ನರಗುಂದ ಶಹರ ಬಸ್ ನಿಲ್ದಾಣದಲ್ಲಿ ಮಳೆಗಾಲದಲ್ಲೂ ಪ್ರಯಾಣಿಕರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.
ನಿತ್ಯ ಸಾವಿರಾರು ಜನರು ಆಗಮಿಸುವ ನಿಲ್ದಾಣದಲ್ಲಿ ಸೂಕ್ತ ನೀರಿನ ವ್ಯವಸ್ಥೆ ಇಲ್ಲ. ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಬಸ್ ನಿಲ್ದಾಣದ ಮೇಲ್ವಿಚಾರಕರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ವಾಯವ್ಯ ಸಾರಿಗೆ ಸಂಸ್ಥೆಯವರು ಪ್ರಯಾಣಿಕರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಬಸ್ ನಿಲ್ದಾಣದಲ್ಲಿ 2 ನಲ್ಲಿಗಳುಳ್ಳ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಆದರೆ, ಹಲವು ತಿಂಗಳುಗಳಿಂದ ಈ ನಲ್ಲಿಯಲ್ಲಿ ನೀರೇ ಇಲ್ಲ. ಈ ಬಸ್ ನಿಲ್ದಾಣ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಇಲ್ಲಿ ನಿತ್ಯ ಬರುವ ಪ್ರಯಾಣಿಕರಿಗೆ ಕುಡಿಯಲು ನೀರು ಸಿಗದೇ ತೊಂದರೆ ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿಯೇ ಹೀಗೆ ಸಮಸ್ಯೆಯಿದ್ದರೆ, ಇನ್ನು ಬೇಸಿಗೆಯಲ್ಲಿ ಇಲ್ಲಿನ ಪರಿಸ್ಥಿತಿ ಆ ದೇವರೇ ಬಲ್ಲ.
ಚಹಾ ಕುಡಿದರೆ ಮಾತ್ರ ನೀರು..!
ಬಸ್ ನಿಲ್ದಾಣದಲ್ಲಿ ಹೊಟೇಲ್ ಇದೆ. ಆದರೆ, ಈ ಹೊಟೇಲ್‌ನಲ್ಲಿ ಪುಕ್ಕಟೆ ನೀರು ಸಿಗುವುದು ಕನಸಿನ ಮಾತು. ಇಲ್ಲಿ ನೀರು ಬೇಕಾದರೆ ಚಹಾ ಅಥವಾ ಏನಾದರೂ ತಿಂಡಿ ತಿಂದರೆ ಮಾತ್ರ ಇಲ್ಲಿ ಕುಡಿಯಲು ನೀರು ಸಿಗುತ್ತದೆ. ಹೀಗಾಗಿ ಪ್ರಯಾಣಿಕರು ನೀರಿಗಾಗಿ ಚಹಾ ಅಥವಾ ತಿಂಡಿಯನ್ನು ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ ಬಡವರು ಮಾತ್ರ ಹೊಟೇಲ್‌ಗೆ ಹೋಗಿ ಹಣ ನೀಡಿ, ನೀರು ಕುಡಿಯುವ ಗೋಜಿಗೆ ಹೊಗದೇ ಹಾಗೆಯೇ ತಮ್ಮ ಊರಿಗೆ ತೆರಳುತ್ತಾರೆ. ಬಸ್ ನಿಲ್ದಾಣದ ನೀರಿನ ಸಮಸ್ಯೆ ಕುರಿತು ಈಗಾಗಲೇ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಜನತೆ ದೂರುತ್ತಾರೆ.  
ಸ್ವಚ್ಛತೆಯ ಕೊರತೆ: ನರಗುಂದ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಎಲ್ಲಿ ನೋಡಿದರಲ್ಲಿ ಬೀಸಾಕಿರುವ ಕಸ, ಅಲ್ಲಲ್ಲಿ ಮಲ, ಮೂತ್ರ ವಿಸರ್ಜನೆ, ಬಸ್ ನಿಲ್ದಾಣದ ತುಂಬ ಎಲೆ, ಅಡಿಕೆ ಉಗುಳಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಪ್ರಯಾಣಿಕರು ಈ ಬಸ್ ನಿಲ್ದಾಣಕ್ಕೆ ಬಂದರೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿರುವ ಬೀಡಿ, ಸಿಗರೇಟು, ಡಬ್ಬಾ ಅಂಗಡಿಯವರು ಹಾಗೂ ಸಾರ್ವಜನಿಕರು ತಮ್ಮ ತ್ಯಾಜ್ಯ ವಸ್ತುಗಳನ್ನು ಈ ಬಸ್ ನಿಲ್ದಾಣದಲ್ಲಿಯೇ ಬಿಸಾಕಿ ಹೋಗುತ್ತಿದ್ದು, ಈ ಕಸವನ್ನು ಹಂದಿಗಳು ತಿನ್ನುತ್ತಾ ಬಸ್ ನಿಲ್ದಾಣದ ತುಂಬ ಹರಡುತ್ತಿವೆ. ಇದರಿಂದ ನರಗುಂದ ಬಸ್ ನಿಲ್ದಾಣವು ಕಸದ ತೊಟ್ಟಿಯಾಗುತ್ತಿದೆ. ನಿಲ್ದಾಣದ ಸ್ವಚ್ಛತೆ ಬಗ್ಗೆ  ನಿಲ್ದಾಣದ ವ್ಯವಸ್ಥಾಪಕರು ಲಕ್ಷ್ಯವಹಿಸದ್ದ ರಿಂದ ಈ ಸಮಸ್ಯೆ ಹೆಚ್ಚು ಉಲ್ಬಣಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement