ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಠ್ಯಪುಸ್ತಕ, ಸಮವಸ್ತ್ರ ವಿಳಂಬ: ವಿಷಾದ

Mainashree
Updated On : 7 Jul 2013, 12:15 pm

ಕನ್ನಡಪ್ರಭ ವಾರ್ತೆ, ಧಾರವಾಡ, ಜು. 6
ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ವಿಳಂಬವಾಗಿರುವುದು ವಿಷಾದದ ಸಂಗತಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಅವ್ವ ಸೇವಾ ಟ್ರಸ್ಟ್ ಹಾಗೂ ಹು-ಧಾ ನಾಗರಿಕ ಪರಿಸರ ಸಮಿತಿ ಜಂಟಿಯಾಗಿ ನಗರದ ವಿದ್ಯಾವರ್ಧಕ ಸಂಘದಲ್ಲಿ ಶನಿವಾರ ಏರ್ಪಡಿಸಿದ್ದ ಶಾಲಾ ವನಸಿರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಠ್ಯಪುಸ್ತಕ, ಸಮವಸ್ತ್ರ ವಿತರಣೆಯಲ್ಲಿ ಉಂಟಾದ ವಿಳಂಬದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಸಚಿವನಾಗಿ ತಿಂಗಳು ಕಳೆದಿದೆ. ಇಲಾಖೆಯ ಎಲ್ಲ  ಮಾಹಿತಿ ಕಲೆ ಹಾಕುತ್ತಿದ್ದು, ಇನ್ನು ಮುಂದೆ ಈ ರೀತಿಯ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತೇನೆ. ಪ್ರತಿ ಸೆಪ್ಟೆಂಬರ್‌ನಲ್ಲಿ ಇಲಾಖೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಸಿದ್ಧತೆಯನ್ನು ಕಡ್ಡಾಯವಾಗಿ ಮುಗಿಸಬೇಕು. ಮೇ ಅಂತ್ಯದೊಳಗೆ ರಾಜ್ಯದ ಎಲ್ಲ ಶಾಲೆಗಳಿಗೂ ವಿತರಣೆಯಾಗಿ ಜೂನ್ 1ಕ್ಕೆ ಮಕ್ಕಳ ಕೈಯಲ್ಲಿರಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಶಾಲೆಗಳು ಪ್ರಾರ್ಥನಾ ಮಂದಿರ: ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಅನೇಕ ರೀತಿಯ ಸಮಸ್ಯೆಗಳಿವೆ. ಈ ಸಮಸ್ಯೆ ಬಗೆಹರಿಸಲು ಜನರು, ಸ್ವಯಂ ಸೇವಾ ಸಂಘಗಳೂ ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞರ, ಇಲಾಖೆ ಆಯುಕ್ತರ, ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ನಿರ್ಣಯಕ್ಕೆ ಬರಲಾಗುವುದು. ಮಕ್ಕಳಿಗೆ ಶಾಲೆಗಳು ಪ್ರಾರ್ಥನಾ ಮಂದಿರಗಳಾಗಬೇಕು. ಮಕ್ಕಳು ಗುಣಮಟ್ಟದ ಹಾಗೂ ಆರೋಗ್ಯಪೂರ್ಣ ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕು ಎಂಬುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಪ್ರಯತ್ನ ಮಾಡಬೇಕೆಂದರು.
ಎಲ್ಲ ಶಾಲೆಗಳಲ್ಲೂ ವನಸಿರಿ: ಅವ್ವ ಸೇವಾ ಟ್ರಸ್ಟ್ ಸ್ವಯಂ ಪ್ರೇರಿತವಾಗಿ ಶಾಲಾ ವನಸಿರಿ ಮೂಲಕ ಸರ್ಕಾರಿ ಶಾಲೆಗಳಲ್ಲಿ ಸಸಿ ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ರಾಜ್ಯದ ಎಲ್ಲ ಶಾಲೆಗಳಲ್ಲೂ ಈ ರೀತಿಯ ಯೋಜನೆ ಜಾರಿ ಮಾಡುವ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಶಿಕ್ಷಣ ಇಲಾಖೆ ಆಯುಕ್ತ ಎ.ಎನ್. ಪಾಟೀಲ, ಡಿಡಿಪಿಐ ಡಾ. ಬಿ.ಕೆ.ಎಸ್. ವರ್ಧನ ಹಾಗೂ ಜಿಲ್ಲೆಯ ಎಲ್ಲ ಶಿಕ್ಷಣಾಧಿಕಾರಿಗಳಿಗೆ ಸಸಿಗಳನ್ನು ವಿತರಿಸಿ, ಪ್ರತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಸಿ ಬೆಳವಣಿಗೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಆಯಾ ಶಾಲೆಯ ಶಿಕ್ಷಕರಿಗೆ ಸೂಚನೆ ನೀಡುವ ಮೂಲಕ ಪರಿಸರ ಉಳಿಸುವ ಕೆಲಸವಾಗಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ನೀರು ಹಾಗೂ ಕಾಂಪೌಂಡ್ ವ್ಯವಸ್ಥೆ ಇರುವ ಜಿಲ್ಲೆಯ 400 ಶಾಲೆಗಳಲ್ಲಿ ಸುಮಾರು 8 ಸಾವಿರ ವಿವಿಧ ಜಾತಿಯ ಸಸಿಗಳನ್ನು ನಡೆಲಾಗುತ್ತಿದೆ. ಎರಡು ವರ್ಷಗಳ ಬಳಿಕ ಪರಿಸರವಾದಿಗಳ ಹಾಗೂ ಅರಣ್ಯ ಇಲಾಖೆ ಸಮಿತಿಯೊಂದಿಗೆ ಸಸಿಗಳ ಬೆಳವಣಿಗೆ ಪರಿಶೀಲಿಸಿ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು.
ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಯಿ ಮಮತೆ
ಸಚಿವ ಸಂತೋಷ ಲಾಡ್ ಅವರು ತಾವು ಉತ್ತರಾಖಂಡದ ಪ್ರವಾಹ ಸಂದರ್ಭದಲ್ಲಿ ರಾಜ್ಯದ ಪ್ರವಾಸಿಗಳನ್ನು ರಕ್ಷಿಸಲು ಹೋದಾಗ ನಡೆದ ತಾಯಿಯ ಮಮತೆಯ ಕುರಿತ ಘಟನೆಯೊಂದನ್ನು ಸ್ಮರಿಸಿಕೊಂಡರು.
ಬದರಿನಾಥದ ಮೇಲುಗಡೆ ರಕ್ಷಣಾ ಕಾರ್ಯಕ್ಕೆ ಹೋದಾಗ ಮಗುವೊಂದು ಪ್ರವಾಹದಲ್ಲಿ ಅಸುನೀಗಿತ್ತು. ಮಗುವಿನ ಕಳೆಬರ ಸಹ ಸಿಕ್ಕಿತ್ತು. ಆದರೆ, ಮುಖ ಮಾತ್ರ ಗುರುತು ಸಿಗುವಂತಿರಲಿಲ್ಲ. ಆದರೆ ಮಗುವಿನ ತಾಯಿ, ಆಕೆಯ ಸಂಬಂಧಿಕರಿಗೆ ಇದೇ ತಮ್ಮ ಮಗುವೆಂದು ಗೊತ್ತಿತ್ತು. ಆದರೂ ನನ್ನ ಮಗು ಇನ್ನೂ ಬದುಕಿರಬಹುದೆಂಬ ಭರವಸೆಯಿಂದ ಮಗುವಿನ ಶವ ನನ್ನದಲ್ಲ ಎನ್ನುತ್ತಿದ್ದಳು ಆ ತಾಯಿ. ಇದು ತಾಯಿಯ ಮಮತೆ ಎಂದು ಲಾಡ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement