ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬೈಪಾಸ್ ಹೆದ್ದಾರಿಗೆ ಭೂಮಿ ನೀಡಲ್ಲ

Mainashree
Updated On : 7 Jul 2013, 12:15 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 6
ರಾಷ್ಟ್ರೀಯ ಹೆದ್ದಾರಿ 218, 63 ಮತ್ತು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕ ಕಲ್ಪಿಸುವ ಬೈಪಾಸ್ ಹೆದ್ದಾರಿ ನಿರ್ಮಾಣಕ್ಕೆ ಫಲವತ್ತಾದ ಭೂಮಿ ನೀಡುವುದಿಲ್ಲ ಎಂದು ಕುಸುಗಲ್ ಗ್ರಾಮಸ್ಥರು ಹೇಳಿದ್ದಾರೆ.
ಶನಿವಾರ ಕುಸುಗಲ್, ಬಮ್ಮಾಪುರ ಮತ್ತು ಹಳಿಯಾಳ ಗ್ರಾಮಸ್ಥರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತರು, ಉದ್ದೇಶಿತ ಬೈಪಾಸ್ ರಸ್ತೆಗೆ ಹತ್ತಿರದಲ್ಲೇ ಕುಸುಗಲ್ ಹಳಿಯಾಳ ಗ್ರಾಮೀಣ ರಸ್ತೆ ಇದ್ದು, ಇದೇ ರಸ್ತೆಯನ್ನು ಬೈಪಾಸ್ ರಸ್ತೆಯನ್ನಾಗಿ ನಿರ್ಮಿಸಿದರೆ ಸರ್ಕಾರಕ್ಕೆ ನಿರ್ಮಾಣ ವೆಚ್ಚ ಉಳಿಯುತ್ತದೆ ಮತ್ತು ರೈತರ ಜಮೀನು ಕೂಡ ಉಳಿಯುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದರು.
ಉದ್ದೇಶಿತ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಜಮೀನು ನೀಡುವುದಿಲ್ಲ ಎಂದು ಈಗಾಗಲೇ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಮತ್ತು ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ನಮ್ಮ ಮನವಿ ಪುರಸ್ಕರಿಸಿದ ರಾಷ್ಟ್ರೀಯ ಹೆದ್ದಾರಿ ವಿಭಾಗದ ಮುಖ್ಯ ಎಂಜಿನಿಯರ್ ಅವರು ಕುಸುಗಲ್-ಹಳಿಯಾಳ ಬೈಪಾಸ್ ರಸ್ತೆ ನಿರ್ಮಾಣದ ಬಗ್ಗೆ ಸತ್ಯಾಸತ್ಯತೆಯನ್ನು ವರದಿ ಮಾಡುವಂತೆ ಧಾರವಾಡದ ಸೂಪರಿಟೆಂಡೆಂಟ್ ಎಂಜಿನಿಯರ್ ಅವರಿಗೆ ಸೂಚಿಸಿದ್ದಾರೆ. ಆದರೂ ಕೂಡ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಿಂದ ಹೆಚ್ಚಿನ ಭೂಸ್ವಾಧೀನಕ್ಕೆ ಪತ್ರಿಕಾ ಪ್ರಕಟಣೆ ನೀಡಲಾಗಿದೆ. ಸೂಪರಿಟೆಂಡೆಂಟ್ ಎಂಜಿನಿಯರ್ ಅವರು ವರದಿ ನೀಡುವ ಮುನ್ನವೇ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುವುದು ಹಾಸ್ಯಾಸ್ಪದ ಸಂಗತಿ ಎಂದು ರೈತರು ಹೇಳಿದರು.
ಸದ್ಯ ಬಳಕೆಯಲ್ಲಿರುವ ಕುಸುಗಲ್-ಹಳಿಯಾಳ ರಸ್ತೆಯು ಬಿಜಾಪುರ ಮತ್ತು ಗದಗ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಈ ಗ್ರಾಮೀಣ ರಸ್ತೆಯಿಂದ ಕೇವಲ 300 ಮೀಟರ್ ಅಂತರದಲ್ಲಿ ನೂತನ 12 ಕಿ.ಮೀ ಬೈಪಾಸ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಹಳಿಯಾಳ-ಕುಸುಗಲ್ ರಸ್ತೆಯನ್ನೇ ಅಭಿವೃದ್ಧಿ ಪಡಿಸುವುದರಿಂದ ಸರ್ಕಾರ ಕೇವಲ 6 ಕಿ.ಮೀ. ರಸ್ತೆ ಮಾತ್ರ ನಿರ್ಮಿಸಬೇಕಾಗುತ್ತದೆ. ಅದರ ಜೊತೆಗೆ ಕೇಂದ್ರ ಸರ್ಕಾರ ಕೂಡ ಕೃಷಿ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರ ಹಿತಾಸಕ್ತಿ ಕಡೆಗಣಿಸಬಾರದು ಎಂದು ಮಸೂದೆ ರೂಪಿಸಿದೆ. ಆದ್ದರಿಂದ ಕನಿಷ್ಠ ನ್ಯಾಯಾಲಯದ ತೀರ್ಪು ಮತ್ತು ಮಸೂದೆ ಗಮನದಲ್ಲಿರಿಸಿಕೊಂಡು ಬೈಪಾಸ್ ರಸ್ತೆ ನಿರ್ಮಾಣಕ್ಕೆ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ರೈತರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಸುಗಲ್ ರೈತ ಸೇವಾ ಸಂಘದ ಟಿ.ಎಸ್. ಚವನಗೌಡರ, ಶಿವರೆಡ್ಡಿ ಹೊಸಮನಿ, ಸೈದುಸಾಬ್ ನರಗುಂದ ಮತ್ತು ವೀರಭದ್ರಪ್ಪ ಬೆಂಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement