ಸುದ್ದಿ ಸಂಕ್ಷೇಪ
ತಿದ್ದುಪಡಿ ನಿಯಮ ಕಿತ್ತು ಹಾಕಲು ಹೈ ಆದೇಶ
ಧಾರವಾಡ: ಸಹಕಾರ ಸಂಘಗಳ ಲೆಕ್ಕಪರಿಶೋಧನೆಯನ್ನು ಸರ್ಕಾರ ಸೂಚಿಸಿದ ಲೆಕ್ಕ ಪರಿಶೋಧಕರಿಂದಲೇ ಮಾಡಿಸಬೇಕೆಂದು ಸಹಕಾರ ಸಂಘಗಳ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಪ್ರಶ್ನಿಸಿ 45 ವಿವಿಧ ಸಹಕಾರಿ ಸಂಘಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಸಂಚಾರಿ ಪೀಠ ಪುರಸ್ಕರಿಸಿದೆ. ಸಹಕಾರ ಸಂಘಗಳ ಕಾಯ್ದೆಯ ಕಲಂ 63 (1) ನಿಯಮದ ಅಡಿ ಈ ತಿದ್ದುಪಡಿ ತರಲಾಗಿದ್ದು, ಅದರ ಅನ್ವಯ ಸಹಕಾರಿ ಸಂಘಗಳ ನಿಬಂಧಕರು ಪ್ರತಿ ಸಹಕಾರಿ ಸಂಘಕ್ಕೆ 10 ಜನ ಲೆಕ್ಕ ಪರಿಶೋಧಕರ ಪಟ್ಟಿಯನ್ನು ಕಳುಹಿಸಿ ಆ ಪೈಕಿ ಒಬ್ಬರಿಂದ ಲೆಕ್ಕಪರಿಶೋಧನೆ ಮಾಡಿಸಬೇಕೆಂದು ಸೂಚಿಸಲಾಗಿತ್ತು. ಇದು ಸಹಕಾರಿ ಸಂಘಗಳಿಗೆ ಆರ್ಥಿಕವಾಗಿ ಹೊರೆಯಾಗುತ್ತದೆ ಎಂದು ಹಲವು ಸಂಘಗಳು ರಿಟ್ ಅರ್ಜಿ ಸಲ್ಲಿಸಿದ್ದವು. ಶುಕ್ರವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಜಿ. ರಮೇಶ ಅವರಿದ್ದ ನ್ಯಾಯಪೀಠ, ಇಂತವರಿಂದಲೇ ಲೆಕ್ಕ ಪರಿಶೋಧನೆ ಮಾಡಿಸಬೇಕೆಂದು ಸರ್ಕಾರ ಸೂಚಿಸಲು ಕಾನೂನಿನಲ್ಲಿ ಅಧಿಕಾರವಿಲ್ಲ. ಅಲ್ಲದೆ, ತಂದಿರುವ ತಿದ್ದುಪಡಿಗೆ ಸಾವಿಂಧಾನಿಕ ಸಿಂಧುತ್ವ ಇಲ್ಲವೆಂದು ಅಭಿಪ್ರಾಯಿಸಿ ತಿದ್ದುಪಡಿ ನಿಯಮ ಕಿತ್ತು ಹಾಕಲು ಆದೇಶಿಸಿತು. ಅರ್ಜಿದಾರರ ಪರವಾಗಿ ಶಿವರಾಜ ಬೆಳ್ಳಕ್ಕಿ, ಶಿವರಾಜ ಮುಧೋಳ, ಎಸ್.ಎಸ್. ಬೇತೂರಮಠ, ಎನ್.ವಿ. ವಿವೇಕ ಮೆಹತಾ ಮತ್ತಿತರ ವಕೀಲರು ವಕಾಲತ್ತು ವಹಿಸಿದ್ದರು.
ಇಂದು ಸನ್ಮಾನ ಕಾರ್ಯಕ್ರಮ
ಧಾರವಾಡ: ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಘದ ವತಿಯಿಂದ ದಿ.ಡಿ.ಕೆ. ನಾಯ್ಕ ಅವರ 87ನೇ ಜನ್ಮದಿನದ ನಿಮಿತ್ತ ಜು. 7ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಜಿಲ್ಲೆಯ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸುವರು. ಮೂಲ ಸೌಕರ್ಯ ಮತ್ತು ವಾರ್ತಾ ಸಚಿವ ಸಂತೋಷ ಲಾಡ್, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಶಾಸಕರಾದ ಸಿ.ಎಸ್. ಶಿವಳ್ಳಿ, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ಎಸ್.ಆರ್. ಮೋರೆ, ಕೆ.ಎನ್. ಗಡ್ಡಿ, ಡಾ. ಮಹೇಶ ನಾಲವಾಡ, ಅಜ್ಜಂಪೀರ ಖಾದ್ರಿ, ಎಸ್.ಎಂ. ಚಿಕ್ಕಣ್ಣವರ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನವೋದಯ ಶಾಲೆಗೆ ಆಯ್ಕೆ
ಧಾರವಾಡ: ಇಲ್ಲಿನ ಮಾಳಮಡ್ಡಿಯ ಕೆ.ಇ. ಬೋರ್ಡಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಾದ ರಕ್ಷಿತಾ ಬಸವರಾಜ ಚಲವಾದಿ, ಮೈತ್ರಿ ಮಹೇಶ ಕಲ್ಲಿಕರೆಣ್ಣವರ ಹಾಗೂ ಶ್ರೀಲಕ್ಷ್ಮಿ ನಾರಾಯಣ ಭಾಗವತ ಪ್ರಸಕ್ತ ಸಾಲಿಗಾಗಿ ನವೋದಯ ಶಾಲೆಗೆ ಆಯ್ಕೆಯಾಗಿದ್ದಾರೆ.