ಕಷ್ಟ-ಸುಖ, ಎಡರು-ತೊಡರುಗಳೇ ಜೀವನ
ಧಾರವಾಡ: ಜೀವನದ ವಿವಿಧ ಹಂತಗಳಲ್ಲಿ ಕಷ್ಟ-ಸುಖ, ಎಡರು-ತೊಡರುಗಳನ್ನು ಅನುಭವಿಸಿದ ಪ್ರತಿಯೊಬ್ಬರೂಯಶಸ್ಸು ಕಾಣಲು ಸಾಧ್ಯ ಎಂದು ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ಶಿಂಗೆ ಹೇಳಿದರು. ಇಲ್ಲಿನ ಕೆಎಲ್ಇ ಸಂಸ್ಥೆಯ ಆರ್ಎಲ್ಎಸ್ ಕಾಲೇಜು ಹಾಗೂ ಪ್ರಾಥಮಿಕ ವಿಭಾಗದ ಶಾಲಾ ಸಂಸತ್ತು ಏರ್ಪಡಿಸಿದ್ದ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಜರುಗುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಅಲ್ಲದೇ, ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಶಿಕ್ಷಕರ ಸಹಕಾರದಿಂದ ಉತ್ತಮವಾಗಿ ಕಲಿಯಬೇಕು. ಸಂಸ್ಥೆ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಅನುಕೂಲವಾಗುವ ದೃಷ್ಠಿಯಿಂದ ಮಕ್ಕಳ ಅಕಾಡೆಮಿ, ಕ್ರೀಡಾ ಅಕಾಡೆಮಿ ಸ್ಥಾಪಿಸಿದೆ ಎಂದರು. ಕಾಲೇಜಿನ ಉಪಪ್ರಾಚಾರ್ಯ ಬಿ.ಎಂ. ಸುರೇಖಾ, ಕಾವೇರಿ ಬೆಂಗೇರಿ, ಆರ್.ಆರ್. ಅಕ್ಕಹಾಳ, ಕೆ.ಸಿ. ಗಿಡಮಲ್ಲನವರ, ಎಂ.ಜಿ. ದೇವಜಿ, ಕೀರ್ತಿ ಕೌವಲದಾರ, ರೂಪಾ ಪಟ್ಯಾಳ, ಎ.ಝಡ್. ಸರಖಾಜಿ, ಎಸ್.ಎಸ್. ಜಂಬಗಿ ಇದ್ದರು.
ಡೆಂಘೀ ಕುರಿತು ಜಾಥಾ
ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಇತ್ತೀಚಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಂಘೀ ಜ್ವರದ ನಿಯಂತ್ರಣ ಕುರಿತು ಜಾಥಾ ನಡೆಸಲಾಯಿತು. ಈಗಾಗಲೇ ತಾಲೂಕಿನ ಕೆಲ ಹಳ್ಳಿಗಳಲ್ಲಿ ಡೆಂಘೀ ಪತ್ತೆಯಾಗಿದ್ದು, ಈ ಕುರಿತು ಹತೋಟಿಗಾಗಿ ತಿಳುವಳಿಕೆ ಮತ್ತು ನಿಯಂತ್ರಣದ ಬಗ್ಗೆ ಗ್ರಾಮದ ಬೀದಿ, ಗಲ್ಲಿಗಳಲ್ಲಿ ಜಾಥಾ ನಡೆಸಿ, ಜ್ವರ ತಡೆಗಟ್ಟಲು ನೀರನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂಬ ಘೋಷಣೆಗಳನ್ನು ಕೂಗುತ್ತ ಮರಳಿ ತಮ್ಮ ಕೇಂದ್ರಕ್ಕೆ ಆಗಮಿಸಿದರು. ಜಾಥಾದಲ್ಲಿ ಡಾ. ರವೀಂದ್ರ ಕಾಡಿರಕೊಪ್ಪ, ಡಾ. ಎಸ್.ಎಂ. ಬಿಂಕದಕಟ್ಟಿ, ಆರ್.ಕೆ. ಗೂಡನಾಯ್ಕರ, ಎನ್.ಜಿ. ದಾಯಪುಲ್ಲೆ, ಎಂ.ಎಂ. ನಾಯಕ, ಎಸ್.ಕೆ. ಕುಲಕರ್ಣಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.