ನಾಯ್ಕರವರಿಂದ ಶೋಷಿತರ ಅಭಿವೃದ್ಧಿ
ಧಾರವಾಡ: ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ದಿ. ಡಿ.ಕೆ. ನಾಯ್ಕರ ಅವರು ತಮ್ಮ ರಾಜಕೀಯ ಜೀವನದಲ್ಲಿ ವಿವಿಧ ಸಮಾಜದ ಶೋಷಿತ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರು ಎಂದು ಮೂಲ ಸೌಕರ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಹೇಳಿದರು.
ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಘದ ವತಿಯಿಂದ ಇಲ್ಲಿನ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಭಾನುವಾರ ನಡೆದ ದಿ. ಡಿ.ಕೆ. ನಾಯ್ಕರ ಅವರ 87ನೇ ಜನ್ಮದಿನದ ನಿಮಿತ್ತ ಸಮಾಜದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ, ಜಿಲ್ಲೆಯ ನೂತನ ಶಾಸಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಯ್ಕರ್ ಅವರು ನೇರ, ನಿಷ್ಠುರ ಮಾತುಗಳನ್ನಾಡುವ ಮೂಲಕ ಜನರ ಮನಸ್ಸನ್ನು ಗೆದ್ದವರು ಎಂದರು.
ವಕೀಲರಾಗಿದ್ದ ನಾಯ್ಕರ್ ಅವರು ನಂತರ ದಿನಗಳಲ್ಲಿ ರಾಜಕೀಯ ಜೀವನಕ್ಕೆ ಕಾಲಿಟ್ಟು ಮಂತ್ರಿಗಳಾಗಿ ಸಮಾಜಕ್ಕೆ ತಮ್ಮ ಸೇವೆ ಸಲ್ಲಿಸಿದವರು. ರಾಜಕೀಯ ಹಾಗೂ ಸಮಾಜದ ಹಿತಕ್ಕಾಗಿ ಕೆಲಸ ಮಾಡಿದರು. ಧಾರವಾಡದಲ್ಲಿ ಹೈಕೋರ್ಟ್ ಸ್ಥಾಪನೆಯಾಗಬೇಕೆಂದು ಮೊದಲ ಬಾರಿ ಪ್ರಸ್ತಾಪ ಮಾಡಿದವರು ಅವರು. ಅದರಂತೆ ಇದೀಗ ಧಾರವಾಡದಲ್ಲಿ ಹೈಕೋರ್ಟ್ ಸ್ಥಾಪನೆಯಾಗಿದೆ ಎಂದು ಲಾಡ್ ಹೇಳಿದರು.
ಶಾಸಕ ವಿನಯ ಕುಲಕರ್ಣಿ ಮಾತನಾಡಿ, ದಿ. ಡಿ.ಕೆ. ನಾಯ್ಕರ ಅವರು ಮಾಡುತ್ತಿದ್ದ ಅಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪ್ರಸ್ತುತ ಅಹವಾಲುಗಳನ್ನು ಮುಂದಿಟ್ಟುಕೊಂಡು ಬರುವ ಜನರಿಗೆ ಇಂದಿನ ರಾಜಕಾರಣಿಗಳು ಅವರನ್ನು ಸಮಾಧಾನಪಡಿಸಲು ಆಗದಿರುವ ಕೆಲಸಕ್ಕೂ ನಾಳೆ ಬಾ ಎಂಬುದನ್ನು ಹೇಳುತ್ತಿರುತ್ತಾರೆ. ಆದರೆ, ನಾಯ್ಕರ ಅವರು ತಮ್ಮ ನೇರವಾದ ಮಾತುಗಳಿಂದ ಅಹವಾಲುಗಳ ಕುರಿತಂತೆ ಅಹವಾಲುದಾರನ ಎದುರಿಗೆ ಆಗುತ್ತೆ ಅಥವಾ ಇಲ್ಲ ಎಂದು ಹೇಳುತ್ತಿದ್ದರು. ಪ್ರಸ್ತುತ ರಾಜಕಾರಣಿಗಳು ಒತ್ತಡದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಜನತೆಯನ್ನು ಸಮಾಧಾನಪಡಿಸುವುದ್ದಾಕ್ಕಾಗಿ ರಾಜಕಾರಣಿಗಳು ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ಜನತೆಯೂ ಸಹ ರಾಜಕಾರಣಿಗಳ ಜೊತೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಚಿವ ಎಸ್.ಆರ್. ಮೋರೆ, ಶಾಸಕ ಅಬ್ಬಯ್ಯ ಪ್ರಸಾದ, ಶಾಸಕ ಸಿ.ಎಸ್. ಶಿವಳ್ಳಿ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಮಾಜಿ ಸಚಿವ ಕೆ.ಎನ್. ಗಡ್ಡಿ, ಕೆ.ಬಿ. ಕಲ್ಲಣ್ಣವರ, ಎಲ್ಲಮ್ಮ ನಾಯ್ಕರ, ಎಸ್.ಎಂ. ಚಿಕ್ಕಣ್ಣವರ, ಮಹೇಶ ನಾಲವಾಡ, ದೀಪಕ ಚಿಂಚೋರೆ ಇದ್ದರು.