ಶೈಕ್ಷಣಿಕ ಮಾಸಪತ್ರಿಕೆಗೆ ಶಾಶ್ವತ ಅನುದಾನ ನೀಡಿ
ಧಾರವಾಡ: ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆ ಪ್ರಕಟಣಾ ವೆಚ್ಚಕ್ಕೆ ಸರ್ಕಾರ ಶಾಶ್ವತ ಅನುದಾನ ನೀಡಬೇಕೆಂದು ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ ಹಾಗೂ ಸಾಹಿತಿ ಮೋಹನ ನಾಗಮ್ಮನವರ ಜಿಲ್ಲೆಗೆ ಆಗಮಿಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರಗೆ ಮನವಿ ಸಲ್ಲಿಸಿದರು.
ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಗೆ ವಾರ್ಷಿಕ ರು. 25 ಲಕ್ಷ ಶಾಶ್ವತ ಅನುದಾನವನ್ನು ಸರ್ಕಾರ ಬಜೆಟ್ ಮೂಲಕ ನೀಡಬೇಕು. ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿರುವ ಶಿಕ್ಷಣ ವಾರ್ತೆ ಶೈಕ್ಷಣಿಕ ಮಾಸಪತ್ರಿಕೆಗೆ ರಾಜ್ಯ ಸರ್ಕಾರದ ಲೆಕ್ಕ ಶೀರ್ಷಿಕೆಯಿಂದಲೇ ವಾರ್ಷಿಕವಾಗಿ ಅನುದಾನ ಒದಗಿಸಲಾಗುತ್ತಿದೆ. ಆದರೆ, 148 ವರ್ಷಗಳಿಂದ ಶಿಕ್ಷಕರ ಸಹಕಾರದೊಂದಿಗೆ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಕನ್ನಡ ನಾಡಿನ ಇತಿಹಾಸದ ಭಾಗವೇ ಆಗಿರುವ ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಗೆ ಸರ್ಕಾರದ ಅನುದಾನ ಮಾತ್ರ ಮರೀಚಿಕೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದ್ದರಿಂದ ಸಚಿವರು ಇಲಾಖೆಯ ಅಧಿಕಾರಿಗಳಿಂದ ಈ ಕುರಿತು ಮಾಹಿತಿ ಪಡೆದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಎ.ಎನ್. ಪಾಟೀಲ ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಯನ್ನು ಪ್ರಸ್ತುತ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ 9 ಶೈಕ್ಷಣಿಕ ಜಿಲ್ಲೆಗಳ ಪ್ರತಿಯೊಂದೂ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಂಚೆ ಮೂಲಕ ಒಟ್ಟು 12 ಸಾವಿರ ಪ್ರತಿಗಳನ್ನು ಕಳಿಸಲಾಗುತ್ತಿದ್ದು, ಶಿಕ್ಷಕರ ವರ್ಗ ಬೋಧನೆಗೆ ಪೂರಕವಾಗಬಲ್ಲ, ಎಲ್ಲ ಉಪಯುಕ್ತ ಮಾಹಿತಿಗಳನ್ನು ಪತ್ರಿಕೆ ಒಳಗೊಂಡಿದೆ. ಈಗ ಪತ್ರಿಕೆಯನ್ನು ಸಂಪೂರ್ಣ ವೆಬ್ ಆಫ್ಸೆಟ್ ತಂತ್ರಜ್ಞಾನಕ್ಕೆ ಅಳವಡಿಸಿ ಬಹುವರ್ಣ ಮುದ್ರಣದಲ್ಲಿ ಹೊರತರಲಾಗುತ್ತಿದೆ. ಇಂದಿನ ದುಬಾರಿ ಮುದ್ರಣ ವೆಚ್ಚವನ್ನು ಭರಿಸುವುದು ಕಷ್ಟವಾಗುತ್ತಿದ್ದು, ವಾರ್ಷಿಕವಾಗಿ ಅನುದಾನದ ಅಗತ್ಯವಿದೆ ಎಂದರು. ಈ ಮನವಿಗೆ ಸ್ಪಂದಿಸಿದ ಸಚಿವರು, ಪ್ರಾಥಮಿಕ ಶಿಕ್ಷಣ ಸಂವರ್ಧನೆಗೆ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕೆ ಜೀವನ ಶಿಕ್ಷಣ ಶೈಕ್ಷಣಿಕ ಮಾಸಪತ್ರಿಕೆಗೆ ಪ್ರಕಟಣಾ ವೆಚ್ಚಕ್ಕಾಗಿ ಸರ್ಕಾರದಿಂದ ಶಾಶ್ವತ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಶಿಕ್ಷಣ ಇಲಾಖೆಯ ನಿರ್ದೇಶಕ ಜಿ.ಎಸ್. ನಾಯ್ಕ, ಸಹನಿರ್ದೇಶಕ ಸಿದ್ದರಾಮ ಮನಹಳ್ಳಿ ಹಾಗೂ ಡಯಟ್ ಪ್ರಾಚಾರ್ಯ ಎಚ್.ಎನ್. ಗೋಪಾಲಕೃಷ್ಣ ಹಾಗೂ ಪತ್ರಿಕೆಯ ಸಹ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಸೇರಿದಂತೆ ಅನೇಕರು ಇದ್ದರು.