ಕಾಮೆಡ್-ಕೆ ಪ್ರಕ್ರಿಯೆ ಖಂಡಿಸಿ ಪ್ರತಿಭಟನೆ
ಹುಬ್ಬಳ್ಳಿ: ವಿವಾದಿತ ವಿಟಿಯು ಕುಲಪತಿ ಡಾ. ಮಹೇಶಪ್ಪ ಅವರ ಪುನರ್ ನೇಮಕಾತಿ ರದ್ದುಪಡಿಸಲು ಆಗ್ರಹಿಸಿ ಹಾಗೂ ಸರ್ಕಾರಿ ಸಿಇಟಿಗಿಂತ ಕಾಮೆಡ್-ಕೆ ಪ್ರವೇಶ ಪ್ರಕ್ರಿಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿವಾದಿತ ಕುಲಪತಿ ಮಹೇಶಪ್ಪ ಅವರ ಪುನರ್ ನೇಮಕ ಮಾಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ರಾಜ್ಯಪಾಲರು ಅವಮಾನ ಮಾಡಿದ್ದಾರೆ. ಮಹೇಶಪ್ಪ ಅವರ ಅರ್ಹತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳಿದ್ದು, ಎಬಿವಿಪಿ ಇದನ್ನು ವಿರೋಧಿಸುತ್ತದೆ.
ರಾಜ್ಯಪಾಲರು ಈ ವಿವಾದಗಳ ತನಿಖೆಗೆ ನಿಯೋಗ ರಚಿಸಿದ್ದಾರೆ. ತನಿಖಾ ವರದಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತನಿಖೆ ನಡೆಯುತ್ತಿರುವಾಗಲೇ ಮಹೇಶಪ್ಪರನ್ನು ಪುನರ್ ನೇಮಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೀಟುಗಳ ಪಟ್ಟಿಯನ್ನು ತಡವಾಗಿ ಪ್ರಕಟಿಸಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯನ್ನುಂಟು ಮಾಡಿದೆ ಎಂದು ಆರೋಪಿಸಿದರು. ಸರ್ಕಾರ ಒಂದು ವೇಳೆ ಕಾಮೆಡ್-ಕೆ ಕೌನ್ಸ್ಸೆಲಿಂಗ್ ಮುಂದುವರೆಸಿದರೆ ಸರ್ಕಾರಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಕಾಮೆಡ್-ಕೆ ನಡೆಸುವ ಕೌನ್ಸ್ಸೆಲಿಂಗ್‌ನ್ನು ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಎಬಿವಿಪಿಯ ಮನೋಹರ ಜಮಾದಾರ, ಸಿದ್ದು ಸಾಲಿಮಠ, ಆದರ್ಶ ಪಾಟೀಲ, ಪ್ರವೀಣ ವಾಕರೆ, ರಮೇಶ ಕೆ. ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.