ಕೃಷ್ಣಮೃಗಗಳನ್ನು ರಕ್ಷಿಸಿದ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 8
ಗುಂಪಿನಿಂದ ತಪ್ಪಿಸಿಕೊಂಡಿದ್ದ ಎರಡು ಕೃಷ್ಣಮೃಗಗಳನ್ನು ನಾಗರಿಕರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಪ್ರತ್ಯೇಕ ಘಟನೆ ಕುಂದಗೋಳ ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಸುಮಾರು 20 ದಿನಗಳ ಹಿಂದೆ ಜನಿಸಿದ್ದ ಕೃಷ್ಣಮೃಗದ ಮರಿ ಹಾಗೂ ಸುಮಾರು ಒಂದೂವರೆ ವರ್ಷದ ಕೃಷ್ಣಮೃಗಗಳನ್ನು ಕಚ್ಚಲು ಬೆನ್ನಟ್ಟಿದ್ದ ನಾಯಿಗಳಿಂದ ನಾಗರಿಕರು ರಕ್ಷಿಸಿದ್ದಾರೆ. ಮಳಲಿ ಗ್ರಾಮದ ಹೊಲದಲ್ಲಿ ಗುಂಪಿನಿಂದ ಪ್ರತ್ಯೇಕವಾಗಿದ್ದ 20 ದಿನಗಳ ಕೃಷ್ಣಮೃಗದ ಮರಿಯನ್ನು ಅದೇ ಗ್ರಾಮದ ನಿಂಗನಗೌಡ ಪಾಟೀಲ ಎಂಬುವವರು ರಕ್ಷಿಸಿದ್ದಾರೆ. ಬೆಳಗ್ಗೆ ಹೊಲಕ್ಕೆ ತೆರಳಿದ್ದ ನಿಂಗನಗೌಡ ಪಾಟೀಲ ಅವರು ಹೊಲದ ಬದುವಿನಲ್ಲಿ ನಿಂತಿದ್ದ ಕೃಷ್ಣಮೃಗದ ಮರಿಯನ್ನು ರಕ್ಷಿಸಿ, ಹುಬ್ಬಳ್ಳಿ ಅರಣ್ಯ ವಲಯ ಕಚೇರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಹೊಲದಲ್ಲಿ ನಾಯಿಗಳು ಬೆನ್ನಟ್ಟಿದ್ದ ಸುಮಾರು ಒಂದೂವರೆ ವರ್ಷದ ಕೃಷ್ಣಮೃಗವನ್ನು ಗುಡಗೇರಿ ಹೊರ ಠಾಣೆ ಪೊಲೀಸರು, ನಾಗರಿಕರ ಸಹಕಾರದಿಂದ ರಕ್ಷಿಸಿದ್ದಾರೆ. ನಾಯಿಗಳನ್ನು ಹೊಡೆದೋಡಿಸಿದ ಪೊಲೀಸರು ಹಾಗೂ ನಾಗರಿಕರು, ಕೃಷ್ಣಮೃಗವನ್ನು ಹಿಡಿಯುವಲ್ಲಿ ಸಫಲರಾದರು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹೊಲದ ಬದುವಿನಲ್ಲಿ ಬೆಳೆಯುವ ಹುಲ್ಲು ಹಾಗೂ ಮೊಳಕೆ ಒಡೆದಿರುವ ಬೆಳೆ ಮೇಯಲು ಕೃಷ್ಣಮೃಗಗಳು ಗುಂಪುಗುಂಪಾಗಿ ರಾತ್ರಿ ಸಮಯದಲ್ಲಿ ಹೊಲದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಗುಂಪುಗಳಿಂದ ಎರಡೂ ಕೃಷ್ಣಮೃಗಗಳು ತಪ್ಪಿಸಿಕೊಂಡಿದ್ದು, ನಾಗರಿಕರು ಅವುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ವಾಹನವಿಲ್ಲ: ಕೃಷ್ಣಮೃಗಗಳನ್ನು ರಕ್ಷಿಸಿದ ಮಾಹಿತಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬೆಳಗ್ಗೆಯೇ ತಲುಪಿದ್ದರೂ, ವಾಹನದ ಸೌಲಭ್ಯ ಇರದ ಕಾರಣ ಸಿಬ್ಬಂದಿ ಗುಡಗೇರಿ ಹಾಗೂ ಮಳಲಿ ಗ್ರಾಮ ತಲುಪಲು ತಡವಾಯಿತು.
ಕೃಷ್ಣಮೃಗಗಳನ್ನು ವಾಹನದಲ್ಲಿ ಹುಬ್ಬಳ್ಳಿಗೆ ಕರೆತಂದ ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರಿಂದ ಎರಡೂ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸಿದರು. ನಂತರ ನೃಪತುಂಗ ಬೆಟ್ಟದ ಬಳಿ ಇರುವ ಹುಬ್ಬಳ್ಳಿ ಅರಣ್ಯ ವಲಯ ಕಚೇರಿಗೆ ಕೃಷ್ಣಮೃಗಗಳನ್ನು ಕರೆತಂದು ಬಾಟಲಿ ಮೂಲಕ ಹಾಲು ಕುಡಿಸಿದರು.
ಅರಣ್ಯಕ್ಕೆ ಬಿಡಲಾಗುವುದು: ಗದಗ ಬಳಿಯ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯದಲ್ಲಿ ಎರಡೂ ಕೃಷ್ಣಮೃಗಗಳನ್ನು ಬಿಡಲಾಗುವುದು. ಪ್ರಾಣಿ ಸಂಗ್ರಹಾಲಯದಲ್ಲಿನ ಕೃಷ್ಣಮೃಗಗಳೊಂದಿಗೆ ಈ ಎರಡೂ ರಕ್ಷಿತ ಪ್ರಾಣಿಗಳು ಬೆರೆತ ನಂತರ ಸಮೀಪದ ಅರಣ್ಯಕ್ಕೆ ಬಿಡಲಾಗುವುದು ಎಂದು ಹುಬ್ಬಳ್ಳಿ ಅರಣ್ಯ ವಲಯದ ವಲಯಾಧಿಕಾರಿ ರಾಜೇಂದ್ರ ಪತ್ತಾರ 'ಕನ್ನಡಪ್ರಭ'ಕ್ಕೆ ತಿಳಿಸಿದರು.