ನಾಳೆಯಿಂದ ಅನ್ನಭಾಗ್ಯ ಯೋಜನೆ ಜಾರಿ
ಧಾರವಾಡ: ರಾಜ್ಯ ಸರ್ಕಾರವು ಬಿಪಿಎಲ್ ಪಡಿತರದಾರರಿಗೆ ಕೆಜಿ ಅಕ್ಕಿಗೆ ರು. 1 ದರದಲ್ಲಿ ಆಹಾರ ಧಾನ್ಯ ಒದಗಿಸುವ ಅನ್ನಭಾಗ್ಯ ಯೋಜನೆ ಜು. 10ರಿಂದ ಜಿಲ್ಲೆಯಲ್ಲಿ ಆರಂಭವಾಗಲಿದೆ.
ಅಂದು ಮಧ್ಯಾಹ್ನ 12ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಆಹಾರ ಇಲಾಖೆಗಳ ಸಹಯೋಗದಲ್ಲಿ ಮೂಲಭೂತ ಸೌಕರ್ಯ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಫಲಾನುಭವಿಗಳಿಗೆ ಅಕ್ಕಿ ವಿತರಿಸಿ ಯೋಜನೆಗೆ ಚಾಲನೆ ನೀಡುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಶೇಷ ಅತಿಥಿಗಳಾಗಿ ಭಾಗವಹಿಸುವರು.
ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಸಿ.ಎಸ್. ಶಿವಳ್ಳಿ, ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ವಿಧಾನ ಪರಿಷತ್ತಿನ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ. ಜಿಪಂ ಅಧ್ಯಕ್ಷೆ ರತ್ನವ್ವಾ ಕಳ್ಳಿಮನಿ, ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ ಭಾಗವಹಿಸುತ್ತಾರೆ.
ಏನಿದು ಯೋಜನೆ: ರಾಜ್ಯ ಸರ್ಕಾರವು ಬಡತನ ರೇಖೆಯ ಕೆಳಗಿರುವ ಕುಟುಂಬಗಳಿಗಾಗಿ ಆಹಾರ ಭದ್ರತೆ ನೀಡುವುದಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ 2011ರ ಜನಗಣತಿ ರೀತ್ಯ 3,82,700 ಕುಟುಂಬಗಳಿದ್ದು, 30,419 ಅಂತ್ಯೋದಯ ಹಾಗೂ 2,64,408 ಬಿಪಿಎಲ್ ಪಡಿತರ ಚೀಟಿಗಳಿವೆ. ಅನ್ನಭಾಗ್ಯ ಯೋಜನೆಯಡಿ ಒಬ್ಬ ಸದಸ್ಯರಿದ್ದಲ್ಲಿ 10 ಕಿ.ಲೋ., ಇಬ್ಬರು ಇದ್ದಲ್ಲಿ 20 ಹಾಗೂ 3ಕ್ಕಿಂತ ಹೆಚ್ಚಿದ್ದಲ್ಲಿ ಗರಿಷ್ಠ 30 ಕಿ.ಲೋ. ಅಕ್ಕಿಯ ಕಿ.ಲೋ.ಗೆ ರು. 1ರಂತೆ ದೊರೆಯಲಿದೆ. ಇದಲ್ಲದೆ ಅಂತ್ಯೋದಯ ಪಡಿತರದಾರರಿಗೆ ರು. 1ಕ್ಕೆ 29 ಕಿ.ಲೋ. ಅಕ್ಕಿ, ರು. 2ಕ್ಕೆ 6 ಕಿ.ಲೋ. ಗೋದಿ ನೀಡಲಾಗುತ್ತದೆ. ಈ ಯೋಜನೆಗೆ ಅಗತ್ಯದ ಆಹಾರ ಧಾನ್ಯ ಸಂಗ್ರಹಣೆಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 12 ಹೆಚ್ಚುವರಿ ಉಗ್ರಾಣಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇವು ಒಟ್ಟಾರೆ 9,340 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿವೆ. ಕರ್ನಾಟಕ ಆಹಾರ ನಿಗಮದ ಏಳು ಹಾಗೂ ಸಿಸಿಡಬ್ಲ್ಯುದ ಒಂದು ಸಗಟು ಆಹಾರ ಧಾನ್ಯ ವಿತರಣಾ ಕೇಂದ್ರಗಳು ಜಿಲ್ಲೆಯಲ್ಲಿವೆ. ಹುಬ್ಬಳ್ಳಿ ಪಡಿತರ ಪ್ರದೇಶದ ಎಲ್ಲ 144 ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಇ-ಪಡಿತರ ಯಂತ್ರಗಳನ್ನು ಅಳವಡಿಸಲಾಗಿದೆ. ಜಿಲ್ಲೆಯ ಉಳಿದ ಪ್ರದೇಶಗಳ ನ್ಯಾಯಬೆಲೆ ಅಂಗಡಿಗಳಲ್ಲಿ ಜುಲೈ ಅಂತ್ಯದೊಳಗಾಗಿ ಈ ಯಂತ್ರಗಳ ಅಳವಡಿಕೆಗೆ ಸಂಬಂಧಿತ ಎಜೆನ್ಸಿಯವರಿಗೆ ಸೂಚಿಸಿದೆ. ಪಡಿತರ ವಿತರಣೆಯನ್ನು ಬಯೋ ಎಲೆಕ್ಟ್ರಾನಿಕ್ ಯಂತ್ರಗಳ ಮೂಲಕವೇ ಮಾಡಲು ನಿರ್ದೇಶನ ನೀಡಲಾಗಿದೆ.
ಈ ಯೋಜನೆಯ ಯಶಸ್ವಿ ಜಾರಿಗಾಗಿ ಪ್ರತಿ ನ್ಯಾಯಬೆಲೆ ಅಂಗಡಿ, ಗ್ರಾಪಂ, ತಾಪಂ ಸ್ಥಳೀಯ ಸಂಸ್ಥೆಗಳ ಹಾಗೂ ಜಿಲ್ಲಾ ಮಟ್ಟದಲ್ಲಿ ಜಾಗ್ರತ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳ ಸದಸ್ಯರಿಗೆ ಆಹಾರ ಧಾನ್ಯ ಎತ್ತುವಳಿ ಆದ ತಕ್ಷಣವೇ ಆ ಕುರಿತು ಎಸ್‌ಎಂಎಸ್ ಸಂದೇಶ ರವಾನೆ ಮಾಡುವ ವ್ಯವಸ್ಥೆ ಜಾರಿಗೊಳ್ಳಲಿದೆ. ಈ ಸಮಿತಿಗಳ ಹೊರತಾಗಿ ಜಿಲ್ಲಾ ಮಟ್ಟದಲ್ಲಿ ಉಪ-ವಿಭಾಗಾಧಿಕಾರಿಗಳ ಹಾಗೂ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ವಿಚಕ್ಷಣಾ ಸಮಿತಿ ನೇಮಿಸಲಾಗಿದೆ. ಉದ್ದೇಶಿತ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ಸೂಚಿತ ದರದಲ್ಲಿ ವಿತರಣೆ ಆಗುವಂತೆ ನೋಡಿಕೊಳ್ಳಲು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ಕೆ.ಎಸ್. ಕಲ್ಲನಗೌಡರ ಪತ್ರಿಕೆಗೆ ತಿಳಿಸಿದ್ದಾರೆ.