ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನೀರಸಾಗರಕ್ಕೆ ನೀರಿನ ಬರ!

Lingaraj Badiger
Updated On : 9 Jul 2013, 11:43 am

ಹುಬ್ಬಳ್ಳಿ: ಕರಾವಳಿ ಮತ್ತು ಮಲೆನಾಡ ತಪ್ಪಲಿನಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದರೆ, ಧಾರವಾಡ ಜಿಲ್ಲೆಯಲ್ಲಿ ಮಳೆಯ ಅಭಾವದಿಂದಾಗಿ ನೀರಸಾಗರ ಜಲಾಶಯದ ನೀರಿನ ಸಂಗ್ರಹ ಬರಿದಾಗುತ್ತಿದೆ.
ಹುಬ್ಬಳ್ಳಿಯ ಅರ್ಧಭಾಗ ಕುಡಿಯುವ ನೀರಿಗೆ ಆಶ್ರಯಸಿದ್ದು ನೀರಸಾಗರ ಜಲಾಶಯವನ್ನೇ. ಆದರೆ, ಮಳೆಯ ಅಭಾವದಿಂದಾಗಿ ಜಲಾಶಯದಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹಳೇ ಹುಬ್ಬಳ್ಳಿ ಸಂಪೂರ್ಣ ಪ್ರದೇಶ ಸೇರಿದಂತೆ ತಾರಿಹಾಳ, ಗೋಕುಲ ಗ್ರಾಮ ಹಾಗೂ ಸುತ್ತಲಿನ ಪ್ರದೇಶ, ವಿಮಾನ ನಿಲ್ದಾಣದ ಸುತ್ತಲಿನ ಪ್ರದೇಶ ಸೇರಿದಂತೆ ಹುಬ್ಬಳ್ಳಿಯ ಅರ್ಧಭಾಗಕ್ಕೆ ಈ ಜಲಾಶಯದಿಂದಲೇ ನೀರು ಪೂರೈಸಲಾಗುತಿತ್ತು.
ಆದರೆ, ಕಳೆದ ಕೆಲ ದಿನಗಳಿಂದ ತಾರಿಹಾಳ, ಗೋಕುಲ ಗ್ರಾಮ ಹಾಗೂ ವಿಮಾನ ನಿಲ್ದಾಣ ಸುತ್ತಲಿನ ಪ್ರದೇಶಗಳಿಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಹಳೇ ಹುಬ್ಬಳ್ಳಿಗೆ ಸವದತ್ತಿ ಮಲಪ್ರಭಾ ಜಲಾಶಯದ ನೀರು ಪೂರೈಕೆಯಾಗುತ್ತಿದೆ.
ನೀರಸಾಗರ ಜಲಾಶಯದಿಂದ ನೀರು ಪೂರೈಕೆಯಾಗುವ ಪ್ರದೇಶ ಹೊರತುಪಡಿಸಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಇನ್ನಿತರ ಭಾಗಗಳಿಗೆ ಮಲಪ್ರಭಾ ಜಲಾಶಯದ ನೀರು ಪೂರೈಕೆಯಾಗುತ್ತದೆ. ಅವಳಿ ನಗರಕ್ಕೆ ನೀರು ಪೂರೈಸಲು ಮಲಪ್ರಭಾ ಜಲಾಶಯದಿಂದ ನಿತ್ಯ 140 ಎಂಎಲ್ ನೀರು ಎತ್ತಲಾಗುತ್ತದೆ. ಇದೀಗ ಹಳೇ ಹುಬ್ಬಳ್ಳಿ ಪ್ರದೇಶಕ್ಕೆ ನೀರ ಸಾಗರ ಜಲಾಶಯದ ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ಹೆಚ್ಚುವರಿಯಾಗಿ ಮಲಪ್ರಭಾ ಜಲಾಶಯದಿಂದ 5 ಎಂಎಲ್ ನೀರನ್ನು ಎತ್ತಲಾಗುತ್ತಿದೆ. ಈ 5 ಎಂಎಲ್ ನೀರು ಹಳೇ ಹುಬ್ಬಳ್ಳಿ ಪ್ರದೇಶಕ್ಕೆ ಪೂರೈಕೆಯಾಗುತ್ತಿದೆ.
ಮಲಪ್ರಭಾ ಮೇಲೆ ಅವಲಂಬನೆ: ನೀರು ಸಂಗ್ರಹ ಕಡಿಮೆಯಾಗುತ್ತಿರುವ ನೀರಸಾಗರ ಜಲಾಶಯದಿಂದ 5 ಎಂಎಲ್ ನೀರು ಎತ್ತಲಾಗುತ್ತಿದ್ದು, ಇದನ್ನು ತಾರಿಹಾಳ, ಗೋಕುಲ ಗ್ರಾಮ ಹಾಗೂ ವಿಮಾನ ನಿಲ್ದಾಣ ಸುತ್ತಲಿನ ಪ್ರದೇಶಕ್ಕೆ ಪೂರೈಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ ಕೊನೆ ಎರಡು ವಾರದಲ್ಲಿ ನೀರಸಾಗರ ಜಲಾಶಯಕ್ಕೆ ಹಿನ್ನೀರು ಪ್ರದೇಶದಿಂದ ನೀರು ಹರಿದುಬರುತ್ತದೆ. ಆದರೆ, ಈ ಬಾರಿ ಸಾಕಷ್ಟು ಮಳೆಯಾಗದ ಕಾರಣ, ಜುಲೈನಲ್ಲಿ ನೀರು ಹರಿದು ಜಲಾಶಯಕ್ಕೆ ಸೇರುವ ಸಾಧ್ಯತೆ ಕಡಿಮೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಜಲಾಶಯದಲ್ಲಿನ ನೀರಿನ ಸಂಗ್ರಹ ಮಟ್ಟ ಇನ್ನೂ ಕಡಿಮೆಯಾಗುವ ಆತಂಕ ಎದುರಾಗಿದೆ. ಇದರ ಪರಿಣಾಮ ಸದ್ಯ ಪೂರೈಕೆಯಾಗುತ್ತಿರುವ ನೀರಿನ ಮೇಲೆಯೂ ಬೀರುವ ಸಾಧ್ಯತೆ ಇದ್ದು, ತಾರಿಹಾಳ, ಗೋಕುಲ ಗ್ರಾಮ ಹಾಗೂ ವಿಮಾನ ನಿಲ್ದಾಣ ಸುತ್ತಲಿನ ಪ್ರದೇಶದಲ್ಲಿ ಸಮರ್ಪಕ ನೀರು ಪೂರೈಕೆಯಲ್ಲಿ ಅಡಚಣೆಯುಂಟಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಹೀಗಾದಲ್ಲಿ ಈ ಪ್ರದೇಶಕ್ಕೂ ಮಲಪ್ರಭಾ ಜಲಾಶಯದಿಂದಲೇ ನೀರು ಪೂರೈಸುವುದು ಅನಿವಾರ್ಯ. ಮಲಪ್ರಭಾ ಜಲಾಶಯದಿಂದ 5 ಎಂಎಲ್ ನೀರು ಹೆಚ್ಚುವರಿಯಾಗಿ ಎತ್ತಲಾಗುತ್ತಿದ್ದು, ಇನ್ನೂ 5 ಎಂಎಲ್ ನೀರು ಎತ್ತಿ ಸಂಪೂರ್ಣ ಹುಬ್ಬಳ್ಳಿಗೆ ಕುಡಿಯುವ ನೀರು ಪೂರೈಸುವ ಅನಿವಾರ್ಯತೆ ಜಲಮಂಡಳಿಯದ್ದು. ಯಾವುದೇ ಪರಿಸ್ಥಿತಿಯಲ್ಲಿ ಇನ್ನೂ ಒಂದು ವಾರದಲ್ಲಿ ರಭಸದ ಮಳೆ ಸುರಿಯದೇ ಇದ್ದಲ್ಲಿ ನೀರಸಾಗರ ಜಲಾಶಯದಲ್ಲಿನ ನೀರಿನ ಮಟ್ಟ ತಳಮಟ್ಟ ಕಾಣುವುದು ಖಚಿತವೆಂದು ಜಲಮಂಡಳಿ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.
2002-03ರಲ್ಲಿ ಜಲಾಶಯದ ವಿವಿಧೆಡೆ ಹೂಳು ತೆಗೆಯಲಾಗಿದೆಯಾದರೂ, ಸಂಪೂರ್ಣ ಹೂಳು ತೆಗೆಯಲಾಗಿಲ್ಲ. ಬೇಸಿಗೆಯಲ್ಲಿ ಹೂಳು ತೆಗೆಯುವ ಕಾರ್ಯವನ್ನು ಸಮರ್ಪಕವಾಗಿ ಮಾಡಿದ್ದರೆ, ಜಲಾಶಯದಲ್ಲಿ ಇನ್ನೂ ಹೆಚ್ಚು ನೀರು ಸಂಗ್ರಹಿಸಬಹುದು. ಈ ನಿಟ್ಟಿನಲ್ಲಿ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆ ತೋರಿದ ನಿರ್ಲಕ್ಷ್ಯತನದಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ ಕಡಿಮೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement