ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಆರ್‌ಟಿಎಸ್ ಸ್ಕೀಂ: ಭೂಮಿ ವಶಕ್ಕೆ ಸರ್ವೇ

Lingaraj Badiger
Updated On : 9 Jul 2013, 11:51 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 8
ಅವಳಿ ನಗರದ ಮಧ್ಯೆ ಬಿಆರ್‌ಟಿಎಸ್ ಯೋಜನೆ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಭೂಮಿ ವಶಪಡಿಸಿಕೊಳ್ಳುವುದಕ್ಕಾಗಿ ಬಸ್ ರ್ಯಾಪಿಡ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಕಂಪನಿ ಅಧಿಕಾರಿಗಳು ನಗರದಲ್ಲಿ ಸೋಮವಾರ ಸರ್ವೇ ಕಾರ್ಯಕೈಗೊಂಡರು.
ಉಣಕಲ್‌ನಿಂದ ಪ್ರಾರಂಭಗೊಂಡ ಸರ್ವೇ ಕಾರ್ಯ ಮುಂದಿನ ಎರಡ್ಮೂರು ದಿನಗಳವರೆಗೆ ಮುಂದುವರೆಯಲಿದೆ. ಧಾರವಾಡದಲ್ಲಿ ಕಳೆದ ಜೂ. 12ರಿಂದ ಪ್ರಾರಂಭಗೊಂಡಿದ್ದ ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಶೇ. 80ರಷ್ಟು ಸರ್ವೇ ಕಾರ್ಯ ಮಾಡಿದ್ದು, ಮುಂದಿನ 10 ದಿನಗಳೊಳಗಾಗಿ ಸಂಪೂರ್ಣಗೊಳ್ಳಲಿದೆ ಎಂದು ಬಿಆರ್‌ಟಿಎಸ್ ಸೋಸಿಯಲ್ ಡೆವಲಪ್‌ಮೆಂಟ್ ಅಧಿಕಾರಿ ಮಂಜು ನಾಥ ಜಡೆನ್ನವರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಯೋಜನೆ ಜಾರಿ ಸಂದರ್ಭದಲ್ಲಿ ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡುವ ಕುರಿತು ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಯೋಜನೆಗೆ ಹೆಚ್ಚು ಪಾಲು ಆರ್ಥಿಕ ಸಹಾಯ ನೀಡಿರುವ ವಿಶ್ವಬ್ಯಾಂಕ್ ನಿಯಮಾನುಸಾರವಾಗಿ ಪರಿಹಾರ ಧನ ನೀಡುವ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದ ಜಡೆನ್ನವರ, ಮುಂದಿನ ಆರು ತಿಂಗಳೊಳಗೆ ಬಿಆರ್‌ಟಿಎಸ್ ಯೋಜನೆ ಜಾರಿ ಕಾಮಗಾರಿ ಪ್ರಾರಂಭಗೊಳ್ಳಲಿದೆ ಹಾಗೂ 2015ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಯೋಜನೆ ಜಾರಿ ಸಂದರ್ಭದಲ್ಲಿ ತಮ್ಮ ಆಸ್ತಿ ಕಳೆದುಕೊಳ್ಳುತ್ತಿರುವ ಕಟ್ಟಡಗಳ ಮಾಲೀಕರು ಇದೇ ಸಂದರ್ಭದಲ್ಲಿ ಯೋಜನೆ ವಿರೋಧಿಸಿ ಘೋಷಣೆ ಕೂಗಿದರು. ಬಿಆರ್‌ಟಿಎಸ್ ಯೋಜನೆಯಿಂದ ಅವಳಿ ನಗರಕ್ಕೆ ಯಾವುದೇ ಪ್ರಯೋಜನವಿಲ್ಲ. ಯೋಜನೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು.
ಬಿಆರ್‌ಟಿಎಸ್ ಯೋಜನೆ ಜಾರಿಗಾಗಿ ಭೂಮಿ ವಶಪಡಿಸಿಕೊಳ್ಳಲು ಕೈಗೊಳ್ಳುತ್ತಿರುವ ಸರ್ವೇ ಕಾರ್ಯ ಅವೈಜ್ಞಾನಿಕವಾಗಿದೆ. ರಸ್ತೆ ಮಧ್ಯದಿಂದ 17.60 ಅಡಿ ಅಂತರದ ಭೂಮಿ ವಶಪಡಿಸಿಕೊಳ್ಳಬೇಕು. ಆದರೆ, ಅಧಿಕಾರಿಗಳು ಈ ನಿಯಮ ಅನುಸರಿಸುತ್ತಿಲ್ಲವೆಂದು ಕಟ್ಟಡಗಳ ಮಾಲೀಕರು ದೂರಿದರು.
ಆದರೆ, ಸೆಂಟರ್ ಫಾರ್ ಎನವರಮೆಂಟಲ್ ಆ್ಯಂಡ್ ಟೆಕ್ನಾಲಜಿ (ಸಿಇಪಿಟಿ) ನಿರ್ದೇಶನದಂತೆ ಸರ್ವೇ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿರುವ ಬಿಆರ್‌ಟಿಎಸ್ ಅಧಿಕಾರಿಗಳು, ಕಟ್ಟಡಗಳ ಮಾಲೀಕರು 1986ರ ನಿಯಮದ ಪ್ರಕಾರ ಸರ್ವೇ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯದ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿತ್ತು. ಇದೀಗ ಇದು ಎರಡು ನಗರಗಳನ್ನು ಕೂಡಿಸುವ ರಸ್ತೆಯಷ್ಟೇ ಎಂದು ಬಿಆರ್‌ಟಿಎಸ್ ಅಧಿಕಾರಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement