ಮೊಬೈಲ್ ಕಾಟಕ್ಕೆ ಮಹಿಳೆ ಬಲಿ..!
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 8
ಅನಾಮಧೇಯ ವ್ಯಕ್ತಿಯೊಬ್ಬನ ಮೊಬೈಲ್ ಕಪಿಚೇಷ್ಟೆ ಬಡಪಾಯಿ ಮಹಿಳೆಯೊಬ್ಬಳನ್ನು ಸಾವಿನ ಮಡುವಿನಲ್ಲಿ ಮಲಗಿಸಿದೆ...!
ನಿಜ... ಮೊಬೈಲ್‌ನಿಂದ ಬರುತ್ತಿದ್ದ ಪೀಡನೆಯ ಮೆಸೇಜ್‌ನಿಂದ ನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಆ ಮಹಿಳೆ ಕೊನೆಗೂ ಸೋಮವಾರ ಕೊನೆಯುಸಿರೆಳೆದಿದ್ದಾಳೆ.
ಘಟನೆಯ ವಿವರ: ಮಂಟೂರ ಅಂಬೇಡ್ಕರ್ ಕಾಲೋನಿಯ ಸೋಲೋಮಿ ಮಣಿಕುಂಟ್ಲ (43) ಅವರದ್ದು ಸುಖಿ ಕುಟುಂಬ. ತಾವಾಯಿತು ತಮ್ಮ ಕೆಲಸವಾಯಿತು ಎಂದಿರುತ್ತಿದ್ದ ಈ ಕುಟುಂಬಕ್ಕೆ ಯಾರ ಕಾಕ ದೃಷ್ಟಿ ಬಿತ್ತೋ ಗೊತ್ತಿಲ್ಲ, ಮೊಬೈಲೊಂದು ಸೋಲೋಮಿಯನ್ನು ಕಾಡಲಾರಂಭಿಸಿತು.
ಒಂದೊಂದು ದಿನ ಅನಾಮಧೇಯ ವ್ಯಕ್ತಿಯೊಬ್ಬನ ಮೊಬೈಲ್‌ನಿಂದ ಸೋಲೋಮಿಗೆ ಅಶ್ಲೀಲ ಮೆಸೇಜ್ ಬಂತು. ಇದರಿಂದ ಸಿಟ್ಟಿಗೆದ್ದ ಸೋಲೋಮಿ ಅನಾಮಧೇಯ ವ್ಯಕ್ತಿಗೆ ಕರೆ ಮಾಡಿ ಬೈದಿದ್ದಾರೆ. ಅದಾದ ಬಳಿಕ ಮತ್ತೆ ಅಶ್ಲೀಲ ಮೆಸೇಜ್‌ಗಳು ಬರುತ್ತಲೇ ಇದ್ದವು. ಇದರಿಂದ ರೋಸಿ ಹೋದ ಸೋಲೋಮಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೊಬೈಲ್ ಸಂಖ್ಯೆ ಬೆನ್ನಟ್ಟಿ ಹೋದರೆ, ಆ ಮೊಬೈಲ್ ಸಂಖ್ಯೆಯನ್ನು ನಕಲಿ ದಾಖಲೆ ನೀಡಿ ಪಡೆದುಕೊಂಡಿದ್ದು ಸಾಬೀತಾಗಿದೆ. ಅನಾಮಧೇಯ ವ್ಯಕ್ತಿಗೆ ತನ್ನನ್ನು ಪೊಲೀಸರು ಬೆನ್ನಟ್ಟಿದ್ದಾರೆ ಎಂಬುದು ಗೊತ್ತಾಗಿದೆಯೋ ಏನೋ, ಆತ ಸೋಲೋಮಿಗೆ ಅಶ್ಲೀಲ ಮೆಸೇಜ್ ಮಾಡಿ ಮೊಬೈಲ್ ಸ್ವಿಚ್‌ಆಫ್ ಮಾಡಿ ಬಿಡುತ್ತಿದ್ದ. ಮೊಬೈಲ್ ಸ್ವಿಚ್‌ಆಫ್ ಆಗಿರುತ್ತಿದ್ದರಿಂದ ಪೊಲೀಸರಿಗೂ ಅನಾಮಧೇಯ ವ್ಯಕ್ತಿಯನ್ನು ಬಂಧಿಸುವುದು ಸಾಧ್ಯವಾಗಲಿಲ್ಲ. ಆಕೆಯ ಸಂಬಂಧಿಕರು ಹೇಳುವ ಪ್ರಕಾರ ಪೊಲೀಸರೂ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಏತನ್ಮಧ್ಯೆ ಅಶ್ಲೀಲ ಮೆಸೇಜ್ ಬರುತ್ತಿರುವುದು ಮಾತ್ರ ನಿಲ್ಲದಿರುವುದರಿಂದ ಸೋಲೋಮಿ ಖಿನ್ನಳಾಗಿರುತ್ತಿದ್ದಳು. ಕೊನೆಗೊಂದು ದಿನ (ಜೂನ್ 28ರಂದು) ಸೋಲೋಮಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಸಕಾಲಕ್ಕೆ ಮನೆ ಅಕ್ಕಪಕ್ಕದವರು ಆಕೆಯನ್ನು ನಗರದ ಕೋಯಿನ್ ರಸ್ತೆಯಲ್ಲಿರುವ ಕೋಆಪ್‌ರೇಟಿವ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಸೋಲೋಮಿ ಸೋಮವಾರ ಕೊನೆಯುಸಿರೆಳಿದಿದ್ದಾಳೆ.
ಎಚ್ಚೆತ್ತುಕೊಳ್ಳಬೇಕಿದೆ ಮಹಿಳೆಯರು
ಮೊಬೈಲ್ ಬಳಕೆಯ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರು ಸ್ವಯಂಪ್ರೇರಿತರಾಗಿ ಎಚ್ಚೆತ್ತುಕೊಳ್ಳುವುದು ಅತ್ಯವಶ್ಯ. ಅನಾವಶ್ಯಕವಾಗಿ ಇತರರಿಗೆ ಮೊಬೈಲ್ ಸಂಖ್ಯೆ ನೀಡುವ ಅಥವಾ ಅನ್ಯ ಕರೆಗಳಿಗೆ ಸ್ಪಂದಿಸುವ ಗೋಜಿಗೆ ಹೋಗಬಾರದು. ಜೊತೆಗೆ ಪದೇ ಪದೇ ಅನಾಮಿಕ ನಂಬರ್‌ಗಳಿಂದ ಮೆಸೇಜ್, ಕರೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಒಳಿತು.
ಪಾಠ ಕಲಿಸಬೇಕಿದೆ...
ಅನಾಮಧೇಯ ವ್ಯಕ್ತಿಯ ವಿಕೃತಕ್ಕೆ ಬಡಪಾಯಿ ಮಹಿಳೆ ಸಾವನ್ನಪ್ಪಿದ್ದಾಳೆ. ಈ ರೀತಿ ಮೊಬೈಲ್ ಕುಚೇಷ್ಟೆ ಅದೆಷ್ಟೋ ಜನರ ಬಾಳು ಬಾಳು ಮಾಡುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ ಬಹುಶಃ ಮಹಿಳೆ ಬದುಕಿರುತ್ತಿದ್ದಳು, ಅಪರಾಧಿ ಕಂಬಿ ಎಣಿಸುತ್ತಿದ್ದ. ಇನ್ನೂ ಕಾಲಮಿಂಚಿಲ್ಲ ಪ್ರಕರಣ ದಾಖಲಿಸಿಕೊಂಡಿರುವ ಬೆಂಡಿಗೇರಿ ಪೊಲೀಸರು ಮೆಸೇಜ್‌ಮಾಡಿ ಮಹಿಳೆಯ ಸಾವಿಗೆ ಕಾರಣನಾದ ಅಪರಾಧಿಯನ್ನು ಪತ್ತೆ ಹಚ್ಚಿ ಪಾಠ ಕಲಿಸಬೇಕಿದೆ.