ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ: ದೂರು
ಕಲಘಟಗಿ: ರಾಸಾಯನಿಕ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಬಿ.ಸಿ. ಪಾಟೀಲ ದೂರಿದ್ದಾರೆ.
ಈ ಕುರಿತು ರಾಜ್ಯ ಕೃಷಿ ಸಚಿವರಿಗೆ ಪತ್ರ ಬರೆದಿರುವ ಅವರು ಪ್ರತಿ ವರ್ಷವೂ ಮುಂಗಾರು ಬಿತ್ತನೆ ಸಮಯದಲ್ಲಿ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ ಗೊಬ್ಬರದ ಚೀಲಕ್ಕೆ ರು. 100-200ರಷ್ಟು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಮಾರಾಟಗಾರರು ಗೊಬ್ಬರ ಖರೀದಿಗೆ ರಶೀದಿ ನೀಡುತ್ತಿಲ್ಲ. ರಶೀದಿ ಕೇಳಿದರೆ ಗೊಬ್ಬರವೇ ಇಲ್ಲ ಎಂದು ಹೇಳುತ್ತಾರೆ. ಜಿಲ್ಲಾ ಹಾಗೂ ತಾಲೂಕು ಕೃಷಿ ಅಧಿಕಾರಿಗಳು ರಾಸಾಯನಿಕ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಬೇಕೆಂದು ತಾಲೂಕಿನ ಗಳಗಿನಗಟ್ಟಿ ಗ್ರಾಮದ ರೈತ ಮಡಿವಾಳಪ್ಪ ಹೂಗಾರ, ಶಿವಪ್ಪ ನೂಲ್ವಿ, ತಾಲೂಕು ಕಿಸಾನ್ ಸಂಘದ ಅಧ್ಯಕ್ಷ ವೈ.ಎನ್. ಪಾಟೀಲ ಮುಂತಾದವರು ಆಗ್ರಹಿಸಿದ್ದಾರೆ.