ಕೈಮಗ್ಗ ನೇಕಾರರ ಸಂಘದಿಂದ ಜವಳಿ ಸಚಿವರಿಗೆ ಮನವಿ
ಹುಬ್ಬಳ್ಳಿ: ಬರುವ ಬಜೆಟ್ನಲ್ಲಿ ಕೈಮಗ್ಗ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ನಿಗಮವನ್ನು ಪುನಶ್ಚೇತನಗೊಳಿಸಲು ಆಗ್ರಹಿಸಿ ನಗರದ ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘದ ನಿಯೋಗ ಇತ್ತೀಚೆಗೆ ಬೆಂಗಳೂರಿನಲ್ಲಿ ಜವಳಿ ಸಚಿವ ಬಾಬುರಾವ ಚಿಂಚನಸೂರಗೆ ಮನವಿ ಸಲ್ಲಿಸಿತು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಪುನಶ್ಚೇತನಕ್ಕೆ ರು. 50 ಕೋಟಿಗಳನ್ನು ಮುಂಬರುವ ಬಜೆಟ್ನಲ್ಲಿ ನೇರವಾಗಿ ನಿಗಮಕ್ಕೆ ಒದಗಿಸಬೇಕು. ನಿಗಮದಲ್ಲಿ ಉತ್ಪಾದನೆಯಾದ ಎಲ್ಲ ಬಟ್ಟೆಗಳನ್ನು ಸರ್ಕಾರಿ ಇಲಾಖೆಗಳು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಹಾಗೂ ಅದಕ್ಕೆ ಸಂಬಂಧಿಸಿದ ಹಣಕಾಸನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಕೈಮಗ್ಗ ನೇಕಾರರಿಗೆ ಈಗ ರು. 100 ಕೂಲಿ ಸಿಗುತ್ತಿದೆ. ಇದು ಶೇ. 50ರಷ್ಟು ಹೆಚ್ಚಾಗಬೇಕು ಇಲ್ಲವೇ ಪ್ರತಿದಿನ ರು. 250 ಮಜೂರಿಯನ್ನು ನೇಕಾರರಿಗೆ ನೀಡಬೇಕು. ನಿಗಮದಲ್ಲಿ ಕೆಲಸ ಮಾಡುತ್ತಿರುವ ನೇಕಾರರ ಸಾಲ ಮನ್ನಾ 20 ವರ್ಷಗಳಿಂದ ಮುಂದೂಡುತ್ತ ಬರಲಾಗಿದೆ. ನೇಕಾರರ ಮನೆಗಳ ಮೇಲಿನ ಸಾಲ ರು. 7.5 ಕೋಟಿಗಳಷ್ಟಿದ್ದು, ಸರ್ಕಾರ ಈ ಸಾಲ ಮನ್ನಾ ಮಾಡಬೇಕು.
ಕೆಎಚ್ಡಿಸಿ ಪ್ರಧಾನ ಕಚೇರಿ ಹುಬ್ಬಳ್ಳಿಗೆ ಸ್ಥಳಾಂತರಗೊಂಡು ಹಲವು ವರ್ಷಗಳು ಗತಿಸಿವೆಯಾದರೂ ಆಡಳಿತ ಮಾತ್ರ ಬೆಂಗಳೂರಿನಿಂದಲೇ ನಡೆಯುತ್ತಿದೆ. ಎಲ್ಲ ಹಿರಿಯ ಅಧಿಕಾರಿಗಳು ಬೆಂಗಳೂರು ಬಿಟ್ಟು ಹುಬ್ಬಳ್ಳಿಗೆ ಬರಲು ಒಪ್ಪುತ್ತಿಲ್ಲ. ಆದಕಾರಣ ಕೆಎಚ್ಡಿಸಿ ಕಚೇರಿಯನ್ನು ಪೂರ್ಣ ಪ್ರಮಾಣದಲ್ಲಿ ಹುಬ್ಬಳ್ಳಿಗೆ ಸ್ಥಳಾಂತರಿಸಬೇಕು ಹಾಗೂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಚಿಂಚನಸೂರಗೆ ಮನವಿ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ಎನ್.ಜೆ. ಮಾಳವದೆ ನೇತೃತ್ವದ ನಿಯೋಗದಲ್ಲಿ ಧಾರವಾಡ ಜಿಲ್ಲಾ ನೇಕಾರರ ಸಂಘದ ಅಧ್ಯಕ್ಷ ನಾಗಪ್ಪ ಬನ್ನಿಗಿಡದ, ಪುಟ್ಟು ಬಾರಕೇರ, ಮಂಜುನಾಥ ಬೆಡಸೂರ ಇದ್ದರು.