ಬಾಂಬ್ ಸ್ಫೋಟ: ಪ್ರತಿಭಟನೆ
ಧಾರವಾಡ: ಬಿಹಾರದ ಬೋಧಗಯಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಶಾಂತಿಯ ನೆಲೆವೀಡಾದ ಬೋಧಗಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿರುವುದು ವಿಷಾದನೀಯ. ಭಾರತದಲ್ಲಿ ಪದೇ ಪದೇ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿದ್ದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದರಿಂದ ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಸರಣಿ ಬಾಂಬ್ ಸ್ಫೋಟ ಕುರಿತು ಗುಪ್ತಚರ ಇಲಾಖೆ ಎಚ್ಚರಿಸಿದ್ದರೂ ಲಘುವಾಗಿ ಪರಿಗಣಿಸಿದ ನಿತೀಶ್ ಕುಮಾರ್ ಸರ್ಕಾರವನ್ನು ವಜಾಗೊಳಿಸಬೇಕು. ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸುಧೀರ ಎಂ. ಮುಧೋಳ, ಕರಿಯಪ್ಪ ಮಾಳಗಿಮನಿ, ಸಿಡ್ಲೆಪ್ಪ ಹೆಗಡೆ, ಪರಶುರಾಮ ದೊಡ್ಡಮನಿ, ಉದಯ ಮಾಳಗಿಮನಿ, ಬಸವರಾಜ ಜೋಗಣ್ಣವರ, ಮಾರುತಿ ನುಗ್ಗಿಕೇರಿ, ಮಹಾಂತೇಶ, ಮಾರುತಿ ತಳವಾರ, ಅಶೋಕ ಭಂಡಾರಿ ಮತ್ತಿತರರು ಇದ್ದರು.
ಮಹಿಳೆ ಆತ್ಮಹತ್ಯೆ
ಅಣ್ಣಿಗೇರಿ: ಸುಮಾರು 30 ವರ್ಷದ ಯುವತಿಯೋರ್ವಳು ಇಲ್ಲಿನ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವನ್ನಪ್ಪಿದ ಯುವತಿ ಲಕ್ಷ್ಮೀ ಎನ್ನಲಾಗಿದೆ. ಈಕೆಯು ಡೆತ್ನೋಟ್ನಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆದರೆ ಡೆತ್ನೋಟ್ನಲ್ಲಿ ಯಾವುದೇ ವಿಳಾಸವನ್ನು ಬರೆದಿರುವುದಿಲ್ಲ. ಮಂಗಳವಾರ ಬೆಳಗ್ಗೆ 9ರ ಸುಮಾರಿಗೆ ಟ್ರ್ಯಾಕಿನ ಮೇಲೆ ಯುವತಿಯ ಶವ ಬಿದ್ದಿರುವುದನ್ನು ಕಂಡ ರೇಲ್ವೆ ಆರಕ್ಷಕರು ಶವವನ್ನು ಗದಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಗದಗ ರೇಲ್ವೆ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವತಿಯ ಸಂಬಂಧಿಕರಿದ್ದಲ್ಲಿ ದೂ.ಸಂ-9741977754ಗೆ ಸಂಪರ್ಕಿಸಲು ಪೊಲೀಸರು ಕೋರಿದ್ದಾರೆ.
ಕದ್ದ ಚಿನ್ನಾಭರಣ ಮಾರಾಟ: ಬಂಧನ
ಹುಬ್ಬಳ್ಳಿ: ಖಚಿತ ಮಾಹಿತಿ ಮೇರೆಗೆ ಹಳೇ ಹುಬ್ಬಳ್ಳಿಯ ಟಿಪ್ಪು ಮಸೀದಿ ಬಳಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡುವುದಕ್ಕೆ ಬಂದಿದ್ದ ಇಬ್ಬರನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ ಅವರಿಂದ ಅಂದಾಜು ರು. 2.60 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಗದಗ ರಸ್ತೆಯ ಸಾದಿಕ್ ಇಸಾಕ್ ಪಂತೋಜಿ ಮತ್ತು ಮೈನುದ್ದೀನ್ ಹಯಾತ್ಖಾನ್ ಧಾರವಾಡ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಬೈಕ್, ರು. 95 ಸಾವಿರ ಮೌಲ್ಯದ 38 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶರಾವತಿ ನಗರ, ಎಂಟಿಎಸ್ ಕಾಲೋನಿ, ಟಿಪ್ಪುನಗರ ಮತ್ತು ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕುಮಾರವ್ಯಾಸ ನಗರ ಮತ್ತು ಸಿದ್ದೇಶ್ವರ ಕಾಲೋನಿಗಳಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.